ಇದ್ರಿಶ್ ಪಾಷಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು, ಪ್ರಕರಣವನ್ನು ಮರು ತನಿಖೆ ನಡೆಸಬೇಕು: CPIM

Update: 2023-05-30 16:10 GMT

ಮಂಡ್ಯ : ಸಾತನೂರಿನ ಬಳಿ ಕೊಲೆಯಾದ ಜಾನುವಾರು ಸಾಗಿಸುವ ಲಾರಿ ಚಾಲಕ ಮಂಡ್ಯದ ಗುತ್ತಲು ನಿವಾಸಿ ಇದ್ರಿಶ್ ಪಾಷಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಪ್ರಕರಣದ ಮರು ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಇದ್ರಿಶ್ ಪಾಷಾ ಹತ್ಯೆ ಆರೋಪಿಗಳಾದ ಪುನೀತ್ ಕೆರೆಹಳ್ಳಿ ಮತ್ತಾತನ ನಟೋರಿಯಸ್ ಗ್ಯಾಂಗ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದು ಆಘಾತಕಾರಿ. ಬಿಜೆಪಿ ಸರಕಾರದ ನಿರ್ದೇಶನದಂತೆ ಪೊಲೀಸರು ದುರ್ಬಲ ತನಿಖಾ ವರದಿ ಸಲ್ಲಿಸಿರುವ ಕಾರಣದಿಂದಲೇ ಇಷ್ಟು ಬೇಗ ಜಾಮೀನು ದೊರಕಿದೆ. ಇದು ಕರ್ನಾಟಕ ಪೊಲೀಸರ ವಿಶ್ವಾಸಾರ್ಹತಗೆ ಧಕ್ಕೆ ತಂದಿದೆ. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬಂದಿದೆ. ಈ ಕೂಡಲೇ ಇದ್ರಿಸ್ ಪಾಷಾ ಹತ್ಯೆ ಪ್ರಕರಣದ ಮರು ತನಿಖೆಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಜೀವಾವಧಿ, ಮರಣ ದಂಡನೆಯಂತಹ ಶಿಕ್ಷೆ ವಿಧಿಸಲ್ಪಡುವ ಕೊಲೆಯಂತಹ ಗಂಭೀರ ಪ್ರಕರಣದಲ್ಲಿ ಆರೋಪ ಪಟ್ಟಿ  ಸಲ್ಲಿಕೆಯ ಅವಧಿಗೆ (90 ದಿನ) ಮೊದಲು ಆರೋಪಿಗಳಿಗೆ ಜಾಮೀನು ದೊರಕಲು ಸಾಧ್ಯವೇ ಇಲ್ಲ.  ಇದ್ರಿಸ್ ಪಾಷಾ ಕೊಲೆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಗ್ಯಾಂಗ್‌ಗೆ 50 ದಿನದಲ್ಲೇ ಜಾಮೀನು ದೊರಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಅಚ್ಚರಿ ಮಾತ್ರ ಅಲ್ಲ, ಆಘಾತಕಾರಿಯಾದದ್ದು. ಪ್ರಕರಣದ ಪೊಲೀಸ್ ತನಿಖಾಧಿಕಾರಿ, ಸರಕಾರಿ ಅಭಿಯೋಜಕರ ಕರ್ತವ್ಯ ನಿರ್ವಹಣೆಯ ಕುರಿತು ಗಂಭೀರ ಅನುಮಾನಗಳು, ಪ್ರಶ್ನೆಗಳು ಎದ್ದಿವೆ. ಇದ್ರಿಸ್ ಪಾಷಾ ಕೊಲೆ ಪ್ರಕರಣ ಮಾತ್ರ ಅಲ್ಲ, ಬಂಧನ, ತನಿಖೆ, ಜಾಮೀನು ದೊರಕುವಿಕೆಯ ಅಂಶಗಳ ಕುರಿತೂ ತನಿಖೆ ನಡೆಯಬೇಕಿದೆ. ಹೊಸ ಸರಕಾರ ಈ ಕುರಿತು ದಕ್ಷ ಅಧಿಕಾರಿಯ ನೇತೃತ್ವದಲ್ಲಿ ಮರು ತನಿಖೆಗೆ ಆದೇಶ ಹೊರಡಿಸಬೇಕಿದೆ. ಇಂತಹ ಮಾದರಿಗಳು ಮರುಕಳಿಸಬಾರದು‌. ಕೊಲೆಗಡುಕರು, ಅವರ ರಕ್ಷಕರು ಜೈಲು ಸೇರಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.

ಇದ್ರಿಶ್ ಪಾಷಾ ಕುಟುಂಬಕ್ಕೆ ಪರಿಹಾರ ನೀಡಿ

ಗೋರಕ್ಷಣೆಯ ಹೆಸರಿನ ಗೂಂಡಾಗಳಿಂದ ಹತ್ಯೆಯಾದ ಇದ್ರಿಶ್ ಪಾಷಾ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ. ಈ ಹಿಂದಿನ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ವಿರೋಧಿಯಾಗಿತ್ತು, ಹಾಗಾಗಿ ಕನಿಷ್ಠ ಇದ್ರಿಶ್ ಕುಟುಂಬಕ್ಕೆ ಒಂದು ಸಾಂತ್ವನ ಹೇಳುವ ಕೆಲಸವನ್ನೂ ಆ ಸರ್ಕಾರ ಮಾಡಲಿಲ್ಲ. ಅದಕ್ಕೆ ರಾಜ್ಯದ ಜನತೆ ಪಾಠವನ್ನು ಕಲಿಸಿದ್ದಾರೆ.

ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ರಿಶ್ ಕುಟುಂಬದವರನ್ನು ಭೇಟಿ ಮಾಡಬೇಕು, ಅವರಿಗೆ ಸಾಂತ್ವನ ಹೇಳಬೇಕು ಮತ್ತು 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ. ಇದ್ರಿಶ್ ಪಾಷಾರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು ಮತ್ತು ಪ್ರವೀಣ್ ನೆಟ್ಟಾರನ ಹೆಂಡತಿಗೆ ಸರ್ಕಾರಿ ಕೆಲಸ ಕೊಡುವ ಮಾದರಿಯಲ್ಲೇ ಇದ್ರಿಶ್ ಪಾಷಾರ ಹೆಂಡತಿಗೂ ಸರ್ಕಾರಿ ಕೆಲಸ ನೀಡಬೇಕೆಂದು ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಅವರು ತಿಳಿಸಿದ್ದಾರೆ.

Similar News