ಸಿ.ಟಿ. ರವಿ ಅಧಿಕಾರ ಕಳೆದುಕೊಂಡು ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದಾರೆ: ಶಾಸಕ ಎಚ್.ಡಿ. ತಮ್ಮಯ್ಯ

"ಸಿ.ಟಿ.ರವಿ ಬಹಿರಂಗ ಪತ್ರದಿಂದ ಸಂತೋಷವಾಗಿದೆ"

Update: 2023-05-30 17:02 GMT

ಚಿಕ್ಕಮಗಳೂರು: ಸಿ.ಟಿ.ರವಿ ಅವರು ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ಅವರ ಪರಿಸ್ಥಿತಿ ಮೀನನ್ನು ನೀರಿನಿಂದ ಹೊರತಗೆದಂತಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರು ಅಧಿಕಾರ ಕಳೆದು ಕೊಂಡು ವಿಲವಿಲ ಅಂತ ಒದ್ದಾಡುತ್ತಿದ್ದಾರೆ. ಅಧಿಕಾರ ಇದ್ದಾಗ ಅವರು ಭೂಮಿ ಮೇಲೆ ನಡೆಯುತ್ತಿರಲಿಲ್ಲ. ಆಕಾಶದ ಮೇಲೆ ಹಾರಾಡುತ್ತಿದ್ದರು. ಈಗ ಅಧಿಕಾರವಿಲ್ಲ, ಹಾಗಾಗಿ ಈಗ ಅವರು ಜನಪರ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿ.ಟಿ.ರವಿ ಅವರು ನನಗೆ ಬಹಿರಂಗ ಪತ್ರ ಬರೆದಿದ್ದು, ಈ ಬಗ್ಗೆ ನನಗೆ ಖುಷಿ ಇದೆ. ಸಾಮಾನ್ಯ ಜನರು, ಹಿಂದುಳಿದ ವರ್ಗದವರು, ದೀನ ದಲಿತರು ಬಡವರ ಬದುಕಿನ ಬಗ್ಗೆ ಅವರಿಗೆ ಈ ಹಿಂದೆ ನೆನಪಿರಲಿಲ್ಲ. 19 ವರ್ಷಗಳ ಬಳಿಕ ಜನರ ಬದುಕಿನ ಬಗ್ಗೆ ಅವರಿಗೆ ಜ್ಞಾನೋದಯವಾಗಿದೆ. ಇದಕ್ಕಾಗಿ ನನಗೆ ಸಂತೋಷವಿದೆ ಎಂದು ಹೇಳಿದರು.

ಸಿ.ಟಿ.ರವಿ ಅವರು ಬಹಿರಂಗ ಪತ್ರದ ಮೂಲಕ, ಕಾಮಗಾರಿಗಳಿಗೆ ತಡೆ ನೀಡಿರುವ ನಮ್ಮ ಸರಕಾರದ ಆದೇಶ ಹಿಂಪಡೆಯಲು ಕೋರಿದ್ದಾರೆ, ನಾನು ಕಾಫಿತೋಟದ ಶ್ರೀಮಂತ ಕುಟುಂಬದಲ್ಲಿ ಹುಟ್ಟಿಲ್ಲ, ನಾನು ಸಾಮಾನ್ಯ ರೈತನ ಮಗನಾಗಿದ್ದು, ಜನರ ಬಗ್ಗೆ ಅವರಿಗಿಂತ ಜಾಸ್ತಿ ನನಗೆ ಕಾಳಜಿ ಇದೆ ಎಂದ ಅವರು, ಕ್ಷೇತ್ರದಾದ್ಯಂತ ಅವರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳು ಚೆನ್ನಾಗಿದ್ದರೇ ಯಾರೇ ಕಂಟ್ರಾಕ್ಟರ್ ಆಗಿದ್ದರೂ ನನ್ನ ತಕರಾರಿಲ್ಲ. ಕಾಮಗಾರಿ ಚೆನ್ನಾಗಿಲ್ಲ ಎಂದಾದರೇ ನನ್ನ ಸಂಬಂಧಿಕರಾದರೂ ನಾನು ಒಪ್ಪುವುದಿಲ್ಲ. ಕಾಮಗಾರಿ ಕಳಪೆಯಾಗಿದ್ದರೇ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಬಿಡುವುದಿಲ್ಲ ಎಂದರು.

Similar News