ಸರಕಾರಿ ಶಾಲೆಗಳಲ್ಲಿ ನೀರು, ಶೌಚಾಲಯ ಏಕಿಲ್ಲ?: ಹೈಕೋರ್ಟ್ ಅಸಮಾಧಾನ

Update: 2023-05-30 17:17 GMT

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಡಿಜಿಟಲ್ ಬೋರ್ಡ್(ಫಲಕ)ಗಳಿವೆ. ಆದರೆ, ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳನ್ನು ಕಲ್ಪಿಸದೇ ಇರುವುದು ನಾಚಿಕೆಗೇಡಿನ ವಿಚಾರವಲ್ಲವೇ? ಎಂದು ಹೈಕೋರ್ಟ್ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. 

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದಕ್ಕೆ ಸಂಬಂಧಿಸಿದಂತೆ 2013ರಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್ ಕಮಲ್ ಅವರಿದ್ದ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು, ರಾಜ್ಯದ ಸುಮಾರು ನಾಲ್ಕು ಸಾವಿರ ಶಾಲೆಗಳಲ್ಲಿ ಕುಡಿಯುವ ನೀರು, ಹೆಣ್ಣು ಮಕ್ಕಳಿಗೆ ಶೌಚಾಲಯ, ತಡೆಗೋಡೆ, ಆಟದ ಮೈದಾನದ ವ್ಯವಸ್ಥೆ ಇಲ್ಲ ಎಂಬ ಅಂಶವನ್ನು ದಾಖಲೆಗಳ ಸಮೇತ ನ್ಯಾಯಪೀಠಕ್ಕೆ ವಿವರಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಲವು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದು ಗಂಭೀರ ವಿಷಯ. ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ?. ಯಾವಾಗ ಈ ಶಾಲೆಗಳನ್ನು ಆರಂಭಿಸಲಾಗಿದೆ. ಶಿಕ್ಷಕರು ಇಲ್ಲ, ಕೊಠಡಿಗಳು ಇಲ್ಲ ಎಂದರೆ ಹೇಗೋ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದು ಗಂಭೀರ ವಿಚಾರವಲ್ಲವೇ ಎಂದು ಪ್ರಶ್ನಿಸಿತು.

ಕಲಬುರ್ಗಿಯಲ್ಲಿ 2 ಸಾವಿರ ಶಾಲೆಗಳ ಪೈಕಿ 22 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 126 ಶಾಲೆಗಳಲ್ಲಿ ಶೌಚಾಲಯವೇ ಇಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ. 2013ರಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗ ನಾವು 2023ರಲ್ಲಿ ಇದ್ದೇವೆ. ಹತ್ತು ವರ್ಷಗಳಾದರೂ ಪರಿಸ್ಥಿತಿ ಸುಧಾರಿಸಿಲ್ಲ. ಬದಲಿಗೆ ಕೆಟ್ಟದ್ದರಿಂದ ದಯನೀಯ ಸ್ಥಿತಿಗೆ ಪರಿಸ್ಥಿತಿ ಹೋಗುತ್ತಿದೆ ಎಂದು ಹೈಕೋರ್ಟ್ ಕಿಡಿಕಾರಿತು. 

ಅಮಿಕಸ್ ಕ್ಯೂರಿ ಅವರು ಸಲ್ಲಿಸಿರುವ ಶಿಫಾರಸು ವರದಿಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಕೋರ್ಟ್ ಜೂನ್ 15ಕ್ಕೆ ಮುಂದೂಡಿತು.

Similar News