ಎಲ್ಲರಿಗೂ ಸಮಾನ ಶಿಕ್ಷಣ ಸಿಗುವಂತಾಗಲಿ: ಡಾ. ನಿರಂಜನಾರಾಧ್ಯ ವಿ.ಪಿ.

Update: 2023-05-30 18:17 GMT

ಬೆಂಗಳೂರು: ಶಿಕ್ಷಣವು ಸಂವಿಧಾನದ ಆಶಯಗಳನ್ನು ಈಡೇರಿಸಲು ಇರುವ ಏಕೈಕ ಸಾಧನವಾಗಿದ್ದು, ಎಲ್ಲರಿಗೂ ಸಮಾನ ಶಿಕ್ಷಣ ದೊರೆಯುವಂತಾಗಬೇಕು ಎಂದು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ. ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ‘ಹೊಸ ಸರಕಾರ: ಶೈಕ್ಷಣಿಕ ನಿರೀಕ್ಷೆ’ ಎಂಬ ಚಿಂತನ ಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರಕಾರ ಶಿಕ್ಷಣವನ್ನು ಸರ್ವನಾಶ ಮಾಡಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಮಾತ್ರವಲ್ಲ ಶಿಕ್ಷಣದ ಎಲ್ಲ ಅಂಶಗಳನ್ನು ದುರ್ಬಲಗೊಳಿಸಿದೆ. ಮೊದಲು ಕೇಂದ್ರ ಶಿಫಾರಸ್ಸು ಮಾಡಿದ ಎನ್‍ಇಪಿ ಅನ್ನು ತೆಗೆದು ಹಾಕಬೇಕು ಎಂದರು. 

ಪಠ್ಯ ಪುಸ್ತಕಗಳಿಂದ ವಿಷಪೂರಿತ ಅಂಗಳನ್ನು ತಕ್ಷಣವೇ ತೆಗೆಯಬೇಕಾಗಿದೆ. ಕೆಲ ಪಠ್ಯಗಳನ್ನು ಸೇರ್ಪಡೆ ಮಾಡಲಾಗಿದ್ದು, ಅವನ್ನು ಶಾಲಾ ಮಕ್ಕಳಿಗೆ ಬೋಧಿಸಂತೆ ಸರಕಾರ ಆದೇಶ ಹೊರಡಿಸಬೇಕು. ಇನ್ನು ಪಠ್ಯದ ವಾಕ್ಯಗಳನ್ನು ಮಾರ್ಪಾಡು ಮಾಡಲಾಗಿದ್ದು, ಅವನ್ನು ತಿದ್ದುಪಡಿ ಮಾಡಿ, ಬೋಧಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದ ನೂರಾರು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಪಕ್ಕದ ಶಾಲೆಗಳಿಂದ ತಾತ್ಕಾಲಿಕವಾಗಿ ಶಿಕ್ಷಕರನ್ನು ನಿಯೋಜನೆ ಮಾಡಲಾಗುತ್ತದೆ. ಹಾಗಾಗಿ ಶಿಕ್ಷಕರನ್ನು ಶೀಘ್ರವೇ ನೇಮಕ ಮಾಡಬೇಕು. ಮಕ್ಕಳ ದಾಖಲಾತಿ ಕಡಿಮೆ ಇದೆ ಎಂದು ತಿಳಿಸಿ, 13 ಸಾವಿರ ಶಾಲೆಗಳನ್ನು ವಿಲೀನ ಮಾಡುವ ನೆಪದಲ್ಲಿ ಮುಚ್ಚಲಾಗುತ್ತಿದೆ. ಯಾವ ಸರಕಾರ ತನ್ನ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂದು ಯೋಚಿಸುವುದಿಲ್ಲವೋ, ಅಲ್ಲಿಯವರೆಗೂ ಸರಕಾರಿ ಶಾಲೆಗಳಿಗೆ ಮಕ್ಕಳು ಬರುವುದಿಲ್ಲ ಎಂದು ನಿರಂಜನಾರಾಧ್ಯ ವಿ.ಪಿ.  ಹೇಳಿದರು.

ಹಿಂದಿನ ಸರಕಾರ ಶಿಕ್ಷಣ ಹಕ್ಕನ್ನು ಕೊಡುವುದಕ್ಕಿಂತ ಕಸಿದುಕೊಂಡಿದ್ದೆ ಹೆಚ್ಚು. ಸರಕಾರಿ ಶಾಲೆಗಳಿಗೆ ಹೋಗುತ್ತಿರವ ಶಾಲಾ ಮಕ್ಕಳ ಪೋಷಕರಿಂದ 100 ರೂ.ಗಳನ್ನು ಪಡೆಯುವಂತೆ ಆದೇಶ ಮಾಡಿರುವುದೇ ಇದಕ್ಕೆ ಉದಾಹರಣೆಯಾಗಿದೆ. ಹಿಜಾಬ್ ಧರಿಸಿದ್ದವರನ್ನು ಶಾಲೆಯಿಂದ ಹೊರಗಿಟ್ಟು, ಒಬ್ಬ ಎಂಎಲ್‍ಎಯಿಂದ ವಿವಾದವನ್ನು ಸೃಷ್ಟಿ ಮಾಡಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಹಿಂದಿನ ಸರಕಾರವು ಸೃಷ್ಟಿಸಿದ ಗೊಂದಲಗಳನ್ನು ಪರಿಹರಿಸಿ, ನೂತನ ಕಾಂಗ್ರೆಸ್ ಸರಕಾರ ಶಿಕ್ಷಣ ಕ್ಷೇತ್ರವನ್ನು  ಗಟ್ಟಿಗೊಳಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಹೋರಾಟಗಾರರ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ನೂತನ ಸಂಸತ್ ಭವನವನ್ನು ಉದ್ಘಾಟಿಸಿರುವುದನ್ನು ನಾವು ಗಮನಿಸುವುದಾರೆ, ಅವರು ಯಾವ ಸಂಸ್ಕøತಿಯನ್ನು ದೇಶದಲ್ಲಿ ಕಟ್ಟಲು ಹೊರಟಿದ್ದಾರೆ ಎಂದು ನಮಗೆ ತಿಳಿಯುತ್ತದೆ. ಸಂವಿಧಾನದ ಆಶಯಗಳನ್ನು ಬದಿಗೊತ್ತಿ, ದೇಶದಲ್ಲಿ ವರ್ಣಶ್ರಮದ ನೀತಿಗಳನ್ನು ಜಾರಿ ಮಾಡಲು ಅವರು ಹವಣಿಸುತ್ತಿದ್ದಾರೆ ಎಂದರು.

ಬರುಗೂರು ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಪಠ್ಯ ಪರಿಷ್ಕರಣೆಯ ಸಮಿತಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ. ಆದರೆ ಬಿಜೆಪಿ ಸರಕಾರವು ಸಂವಿಧಾನಕ್ಕೆ ವಿರುದ್ಧವಾಗಿ ಪಠ್ಯಪರಿಷ್ಕರಣೆ ಮಾಡಿದೆ ಎಂದು ಅವರು ಹೇಳಿದರು. 

Similar News