ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ನಾಯಕರು: ಡಿಕೆ ಶಿವಕುಮಾರ್

Update: 2023-05-31 05:56 GMT

ಬೆಳಗಾವಿ: ನಮ್ಮ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಗುಬ್ಬಿ ಕ್ಷೇತ್ರದ ವಾಸು, ಅರಸೀಕೆರೆ ಕ್ಷೇತ್ರದ ಶಿವಲಿಂಗೆಗೌಡ ಅವರನ್ನು  ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು ಅವರೆಲ್ಲ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಈಗ ಅವರಿಗೆ ಶಕ್ತಿ ತುಂಬುವುದು ನಮ್ಮ ಕರ್ತವ್ಯ. ಈಗ ಈ ಎಲ್ಲ ನಾಯಕರನ್ನು ಸೌಹಾರ್ದತೆಯಿಂದ ಭೇಟಿಯಾಗಿ ಸಲಹೆ ಪಡೆಯುವ ಯೋಜನೆಯಿದೆ  ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ಬಳಿಕ ಸರ್ಕಾರ ರಚನೆಯಲ್ಲಿ ಬ್ಯೂಸಿ ಇದ್ದೆ. ಚುನಾವಣೆ ‌ಸಂದರ್ಭದಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಕೊಟ್ಟ ನಾಯಕರ ಭೇಟಿಗೆ ಸಮಯ ಸಿಕ್ಕಿರಲಿಲ್ಲ. ಸಂಪುಟ ರಚನೆ, ಶಾಸಕಾಂಗ ಸಭೆ, ಗ್ಯಾರಂಟಿ ಸ್ಕೀಂ ಜಾರಿ ಹಾಗೂ ಇಲಾಖೆ ಸಭೆಗಳಲ್ಲಿ ಬ್ಯೂಸಿ ಇದ್ದೆ ಎಂದು ತಿಳಿಸಿದರು.

ಗ್ಯಾರಂಟಿ ಸ್ಕೀಂ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಸಚಿವರ ಸಭೆ ಕರೆದಿದ್ದಾರೆ. ನಾಳೆ ಕ್ಯಾಬಿನೆಟ್ ಇರುವ ಕಾರಣಕ್ಕೆ ಇಂದೇ ಸಿಎಂ ಎಲ್ಲ ಸಚಿವರನ್ನು ಸಭೆಗೆ ಆಹ್ವಾನಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್,‌ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಸ್ಥಾನಮಾನ ನೀಡುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಹೇಗೆ ಮಾಡಬೇಕು, ಯಾವ ಟೈಮಿನಲ್ಲಿ ಮಾಡಬೇಕು ನಮಗೆ ಗೊತ್ತಿದೆ. ಯಾರು  ನಮ್ಮ ಜೊತೆ ಧೈರ್ಯ ಮಾಡಿ ಬಂದಿದ್ದಾರೆ.  ಅವರ ಜೊತೆಗೆ ನಾವಿದ್ದೇವೆ. ಅವರು ಚುನಾವಣೆಯಲ್ಲಿ ಗೆದ್ದಿರಬಹುದು, ಸೋತಿರಬಹುದು ಅವರೆಲ್ಲ ನಮ್ಮ ನಾಯಕರು ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

Similar News