ವಿತ್ತ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿಯಾಗಿ ಎಲ್‌. ಕೆ. ಅತೀಖ್‌ ನೇಮಕ

ಜೂ. 30 ರಿಂದ ಅದೇ ಇಲಾಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

Update: 2023-05-31 13:56 GMT

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಎಲ್‌ ಕೆ ಅತೀಖ್‌ ಅವರನ್ನು ವಿತ್ತ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಈ ಹುದ್ದೆಯನ್ನು ಸರ್ಕಾರ ತಾತ್ಕಾಲಿಕವಾಗಿ ರಚಿಸಿದ್ದು  ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಅತೀಖ್‌ ಈ ಹುದ್ದೆಯನ್ನು ಹೆಚ್ಚುವರಿಯಾಗಿ ನಿಭಾಯಿಸಲಿದ್ದಾರೆ. ವಿತ್ತ ಇಲಾಖೆಯ ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಐಎನ್‌ಎಸ್ ಪ್ರಸಾದ್ ಅವರು ಜೂ‌ 30 ಕ್ಕೆ ನಿವೃತ್ತಿಯಾಗಲಿದ್ದು, ಅವರ ಸ್ಥಾನವನ್ನು ಎಲ್ ಕೆ ಅತೀಖ್ ವಹಿಸಿಕೊಳ್ಳಲಿದ್ದಾರೆ. 

ಅವರು ತಕ್ಷಣದಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬುಧವಾರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳು)  ಹೆಚ್ಚುವರಿ ಕಾರ್ಯದರ್ಶಿ ಜೇಮ್ಸ್‌ ತಾರಕನ್‌ ತಿಳಿಸಿದ್ದಾರೆ. ಸದ್ಯ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವಿತ್ತ) ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್‌ ಐಎಸ್‌ಎನ್‌ ನಿವೃತ್ತರಾಗಲಿರುವುದರಿಂದ ಜೂನ್‌ 30ರಂದು ಅತೀಖ್‌ ಅವರನ್ನು ಆ ಹುದ್ದೆಗೆ ವರ್ಗಾಯಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹೆಚ್ಚುವರಿ ಹೊಣೆಗಾರಿಕೆ: ಅಬಕಾರಿ ಇಲಾಖೆಯ ಆಯುಕ್ತ ಡಾ.ರವಿಶಂಕರ್ ಜೆ.ಅವರನ್ನು ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿಯಾಗಿ ಹಾಗೂ ಬಾಗಲಕೋಟೆಯ ಜಿಲ್ಲಾಧಿಕಾರಿ ಪೊಮ್ಮಾಲ ಸುನೀಲ್ ಕುಮಾರ್ ಅವರನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರನ್ನಾಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ಸರಕಾರ ಆದೇಶ ಹೊರಡಿಸಿದೆ.

Similar News