ರಕ್ಷಣೆ ಮಾಡಿದ್ದ ಹಾವು ಕಚ್ಚಿ ಮೃತಪಟ್ಟಿದ್ದ ಸ್ನೇಕ್ ನರೇಶ್ ಮನೆಯಲ್ಲಿ ನೂರಾರು ಹಾವುಗಳು ಪತ್ತೆ

Update: 2023-05-31 15:57 GMT

ಚಿಕ್ಕಮಗಳೂರು: ಕಳೆದ ಮಂಗಳವಾರ ನಾಗರಹಾವೊಂದನ್ನು ರಕ್ಷಣೆ ಮಾಡಿದ್ದ ಜಿಲ್ಲೆಯ ಖ್ಯಾತ ಉರಗತಜ್ಞ ಸ್ನೇಕ ನರೇಶ್ ತಾನು ರಕ್ಷಣೆ ಮಾಡಿದ್ದ ಅದೇ ನಾಗರಹಾವಿನಿಂದ ಕಡಿತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಬೆನ್ನಲ್ಲೇ ಅವರ ಮನೆಯಲ್ಲಿ ನೂರಾರು ಹಾವುಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮಂಗಳವಾರ ನಗರದ ಹೌಸಿಂಗ್‍ಬೋರ್ಡ್ ಬಡಾವಣೆಯ ಮನೆಯೊಂದರ ಸಮೀಪದಲ್ಲಿದ್ದ ನಾಗರಹಾವೊಂದನ್ನು ಹಿಡಿಯಲು ಮನೆ ಮಾಲಕರು ಕರೆ ಮಾಡಿದ್ದರಿಂದ ಅಲ್ಲಿಗೆ ತೆರಳಿದ್ದ ಸ್ನೇಕ್ ನರೇಶ್ ಹಾವು ಹಿಡಿದು ರಕ್ಷಣೆ ಮಾಡಿದ್ದರು. ಈ ವೇಳೆ ಮತ್ತೊಂದು ಹಾವು ಹಿಡಿಯಲು ಅವರಿಗೆ ಕರೆ ಬಂದಿದ್ದರಿಂದ ಆಗತಾನೆ ಹಿಡಿದಿಟ್ಟಿದ್ದ ಹಾವು ಇದ್ದ ಬ್ಯಾಗ್ ಬಿಗಿ ಮಾಡಲು ಮುಂದಾಗಿದ್ದ ವೇಳೆ ಬ್ಯಾಗಿನಲ್ಲಿದ್ದ ನಾಗರಹಾವು ಅವರ ಕೈಗೆ ಕಚ್ಚಿತ್ತು. ಅವರು ಆಸ್ಪತ್ರೆಗೆ ಬರುವ ದಾರಿ ಮಧ್ಯೆ ಮೃತಪಟ್ಟಿದ್ದರು.

ಈ ಘಟನೆ ಬಳಿಕ ಕೆಲ ಪ್ರಾಣಿ ಪ್ರಿಯರು ಬಣಕಲ್‍ನ ಸ್ನೇಕ್ ಆರೀಫ್ ಎಂಬವರೊಂದಿಗೆ ಸ್ನೇಕ್ ನರೇಶ್ ಮನೆಗೆ ತೆರಳಿ ಅವರ ಕಾರು, ಬೈಕ್, ಮನೆಯಲ್ಲಿ ಹಾವುಗಳಿದ್ದಲ್ಲಿ ಕಾಡಿಗೆ ಬಿಡುವ ಉದ್ದೇಶದಿಂದ ಪರಿಶೀಲನೆ ನಡೆಸಿದ ವೇಳೆ ಪರಿಶೀಲನೆ ಹೋಗಿದ್ದವರೂ ಸೇರಿದಂತೆ ನರೇಶ್ ಮನೆಯ ನೆರೆಹೊರೆಯವರೂ ಬೆಚ್ಚಿ ಬೀಳುವ ಘಟನೆ ಬೆಳಕಿಗೆ ಬಂದಿದೆ. ಸ್ನೇಕ್ ನರೇಶ್ ಮನೆ ಹಾಗೂ ಕಾರಿನಲ್ಲಿ ನಾಗರಹಾವು ಸೇರಿದಂತೆ ವಿವಿಧ ಜಾತಿಯ ಹಾವುಗಳು ಮತ್ತು ಮರಿಗಳು ಸೇರಿ ಸುಮಾರು 91 ಹಾವುಗಳು ಪತ್ತೆಯಾಗಿವೆ.

ಬಳಿಕ ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ನರೇಶ್ ಮನೆಗೆ ಹೋಗಿ ಇಡೀ ಮನೆಯನ್ನು ತಪಾಸಣೆ ಮಾಡಿದಾಗ ಮನೆಯ ಒಳಭಾಗ, ಕಾರು, ಬ್ಯಾರಲ್‍ಗಳಲ್ಲೂ ಹಾವುಗಳು ಪತ್ತೆಯಾಗಿವೆ. ಸ್ನೇಕ್ ನರೇಶ್ ತಾವು ಹಿಡಿದ ಹಾವುಗಳ ಪೈಕಿ ಕೆಲ ಹಾವುಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದು, ಕೆಲ ಹಾವುಗಳನ್ನು ಬ್ಯಾಗ್‍ಗಳಲ್ಲೇ ಇಟ್ಟಿದ್ದು, ಆ ಹಾವುಗಳು ಬ್ಯಾಗ್‍ಗಳಲ್ಲೇ ಮರಿ ಮಾಡಿದ್ದವು.

ಬ್ಯಾರಲ್‍ವೊಂದರಲ್ಲಿ ಇಟ್ಟಿದ್ದ ಹಾವು ಬ್ಯಾರಲ್‍ನಲ್ಲೇ ಸುಮಾರು 20ಕ್ಕೂ ಹೆಚ್ಚು ಮರಿಗಳನ್ನು ಹಾಕಿರುವುದೂ ಬೆಳಕಿಗೆ ಬಂದಿದೆ. ಈ ಹಾವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗತಜ್ಞರು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. 

Similar News