15 ಸರಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ವಿದೇಶಿ ಮದ್ಯ, ಕೋಟ್ಯಾಂತರ ರೂಪಾಯಿ ಆಸ್ತಿ, ನಗದು ಪತ್ತೆ

Update: 2023-05-31 18:12 GMT

ಬೆಂಗಳೂರು: ಆದಾಯಕ್ಕಿಂತ ಅಧಿಕ ಸಂಪಾದನೆ ಆರೋಪ ಕೇಳಿಬಂದ ಬೆನ್ನಲ್ಲೇ ರಾಜ್ಯ 15 ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 57 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ನಡೆಸಿದ್ದು, ಈ ವೇಳೆ ವಿದೇಶಿ ಮದ್ಯ, ಮನೆಯ ಲಾಕರ್‍ಗಳಲ್ಲಿ ಕಂತೆ-ಕಂತೆ ನೋಟುಗಳು, ಕೆಜಿಗಟ್ಟಲೆ ಚಿನ್ನ, ಹತ್ತಾರು ನಿವೇಶನಗಳು ಸೇರಿದಂತೆ ಇನ್ನಿತರೆ ದುಬಾರಿ ವಸ್ತುಗಳು ಪತ್ತೆಯಾಗಿವೆ.

ಬುಧವಾರ ಮುಂಜಾನೆ ಬೆಂಗಳೂರು, ಮೈಸೂರು, ಮಂಗಳೂರು, ಹಾವೇರಿ ಸೇರಿದಂತೆ ಒಟ್ಟು 57 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದರು. ಈ ವೇಳೆ ಪತ್ತೆಯಾದ ಅಕ್ರಮ ಸಂಪತ್ತು ಕುರಿತು ಸರಕಾರಿ ಅಧಿಕಾರಿಗಳಿಂದು ಲಿಖಿತ ಮಾಹಿತಿ ಪಡೆದು ಆಯಾ ವ್ಯಾಪ್ತಿಯ ಕೇಂದ್ರಗಳಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವೆಸಿದ್ದಾರೆ.

ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಬೆಸ್ಕಾಂ ಕಚೇರಿಯ ನಿರ್ದೇಶಕ ಎಚ್.ಜೆ.ರಮೇಶ್ ಅವರಿಗೆ ಸೇರಿದ 10 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಇದೇ ವೇಳೆ ಬರೋಬ್ಬರಿ 5.6 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಬೈಕ್, ಕಾರು, ಮದ್ಯದ ಬಾಟಲಿಗಳು, ಗೃಹೋಪಯೋಗಿ ಉಪಕರಣಗಳು, ವಿವಿಧ ಶೇರುಗಳು 1.4 ಕೊಟಿ ರೂ. ಮೌಲ್ಯ ಹೊಂದಿರುವುದು ಗೊತ್ತಾಗಿದೆ.
ಅಷ್ಟೇ ಅಲ್ಲದೆ, ದೇವನಹಳ್ಳಿಯ ಹೈಟೆಕ್ ಡಿಫೆನ್‍ಸ್ ಆ್ಯಂಡ್ ಏರೋಸ್ಪೇಸ್ ಪಾರ್ಕ್ ಇಂಡಸ್ಟ್ರಿಟಿಯಲ್ ಏರಿಯಾದಲ್ಲಿ 1 ನಿವೇಶನ, ಡಾಬಸ್‍ಪೇಟೆಯ ಸೋಂಪರದ 2ನೇ ಹಂತದಲ್ಲಿರುವ 0.75 ಎಕರೆ ಭೂಮಿ, ಬಸವೇಶ್ವರ ನಗರದ ಬಿಇಎಂಎಲ್ ಲೇಔಟ್‍ನಲ್ಲಿ ನಿರ್ಮಾಣ ಹಂತದ ಮನೆ ಮೌಲ್ಯಗಳು 4.20 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದಲ್ಲಿ ಕಾರ್ಖಾನೆಗಳ ಉಪ ನಿರ್ದೇಶಕ ಟಿ.ವಿ.ನಾರಾಯಣಪ್ಪ ಅವರಿಗೆ ಸೇರಿದ 4 ಕಡೆಗಳಿಗೆ ದಾಳಿ ನಡೆಸಿದಾಗ ಎರಡು ಬೈಕ್, ಚಿನ್ನಾಭರಣ, 17 ಸಾವಿರ ರೂ. ನಗದು ಪತ್ತೆಯಾಗಿದೆ. ಹಾಗೇ, 1 ನಿವೇಶನ, 3 ಮನೆ, 10 ಎಕರೆ ಕೃಷಿ ಭೂಮಿಯ ಮೊತ್ತ 2.58 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 

ಬೆಂಗಳೂರು ಉತ್ತರ ತಾಲ್ಲೂಕಿನ ಕಿಟ್ಟನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಎಸ್.ಡಿ.ರಾಮಸ್ವಾಮಿ ಅವರಿಗೆ ಸೇರಿದ ನಿವಾಸ ಸೇರಿದಂತೆ 3 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಚಿನ್ನ, ಬಳ್ಳಿ, ನಿವೇಶನ ಸೇರಿದಂತೆ ಬೆಲೆ ಬಾಳುವ ವಸ್ತು ಹೊಂದಿರುವುದು ಗೊತ್ತಾಗಿದೆ.

ಬೊಮ್ಮನಹಳ್ಳಿ ಬಿಬಿಎಂಪಿ ವಲಯದ ಕಾರ್ಯನಿರ್ವಾಹಕ ಅಭಿಯಂತರ ಎನ್.ಜಿ.ಪ್ರಮೋದ್ ಕುಮಾರ್ ಅವರಿಗೆ ಸೇರಿದ ನಿವಾಸದ ಮೇಲೆ ಮಂಡ್ಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧಿಸಿದರು. 

ಮೈಸೂರಿನ ಮೂಡಾ ಮುಖ್ಯ ಲೆಕ್ಕಾಧಿಕಾರಿ ಎನ್.ಮುತ್ತುಗೆ ಸೇರಿದ 3 ಕಡೆ ಹಾಗೂ ಮೈಸೂರು ಸಿಟಿ ಕಾರ್ಪೋರೇಷನ್‍ನ ಸುಪರಿಟೆಂಡೆಂಟ್ ಇಂಜಿನಿಯರ್‍ಗೆ ಸೇರಿದ 3 ಕಡೆಗಳಲ್ಲಿ ಮೈಸೂರು ಲೋಕಾ ಪೊಲೀಸರು ಕಾರ್ಯಾಚರಣೆ ನಡೆಸಿದರು.

ನಂಜನಗೂಡಿನ ಹಿರಿಯ ಸಬ್ ರಿಜಿಸ್ಟ್ರಾರ್ ಎಂ.ಶಿವಶಂಕರ ಮೂರ್ತಿಗೆ ಸೇರಿದ 4 ಕಡೆ ಚಾಮರಾಜನಗರ ಲೋಕಾ ಪೊಲೀಸರು ದಾಳಿ ನಡೆಸಿದರು.

ಶಿವಮೊಗ್ಗ ಶಿಕಾರಿಪುರದ ಆರ್‍ಡಿಪಿಆರ್ ಇಂಜಿನಿಯರಿಂಗ್ ಸಬ್ ಡಿವಿಜನ್‍ನ ಜೆ.ಇ.ಶಂಕರ ನಾಯಕ್‍ಗೆ ಸೇರಿದ 3 ಕಡೆ ಹಾಗೂ ಶಿವಮೊಗ್ಗ ವಲಯದ ತುಂಗಾ ಯೋಜನೆ ಕರ್ನಾಟಕ ನೀರಾವರಿ ನಿಗಮದ ಎಸ್.ಐ.ಕೆ.ಪ್ರಶಾಂತ್‍ಗೆ ಸೇರಿದ 4 ಕಡೆಗಳಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

ರಾಣೇಬೆನ್ನೂರು ಹಾವೇರಿ ವಲಯದ ನಿರ್ಮಿತಿ ಕೇಂದ್ರದ ಯೋಜನಾ ಇಂಜಿನಿಯರ್ ವಾಗೀಶ್‍ಗೆ ಸೇರಿದ 3 ಕಡೆ ಹಾವೇರಿ ಲೋಕಾ ಪೊಲೀಸರು, ಕೊಪ್ಪಳ ಕೆಆರ್‍ಐಡಿಎಲ್‍ಮ ಈಈ ಜರಣಪ್ಪ ಎಂ.ಚಿಂಚೋಳಿಕರ್‍ಗೆ ಸೇರಿದ 4 ಕಡೆ ಕೊಪ್ಪಳ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. 
ಮೈಸೂರಿನ ಕೆಎಡಿಬಿ ಇಇ ಸಿ.ಎನ್.ಮೂರ್ತಿಗೆ ಸೇರಿದ 3 ಕಡೆ ತುಮಕೂರು ಲೋಕಾ ಪೊಲೀಸರು ದಾಳಿ ನಡೆಸಿದ್ದಾರೆ.

ಉಡುಪಿ, ಮಂಗಳೂರಿನಲ್ಲೂ ದಾಳಿ, ಶೋಧ..!
ಬೆಂಗಳೂರಿನ ವಿಕಾಸಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಭೂ ವಿಜ್ಞಾನಿ ಎ.ಎಂ.ನಿರಂಜನ್ ಅವರಿಗೆ ಸೇರಿದ 4 ಕಡೆಗಳಲ್ಲಿ ಮಂಗಳೂರು ಪೊಲೀಸರು ಶೋಧ ನಡೆಸಿದ್ದಾರೆ. ಉಡುಪಿಯ ಮಣಿಪಾಲದ ಕಾರ್ಮಿಕ ಅಧಿಕಾರಿ ಬಿ.ಆರ್.ಕುಮಾರ್‍ಗೆ ಸೇರಿದ 2 ಕಡೆ ದಾಳಿ ನಡೆಸಿ ಅಘೋಷಿತ ಆಸ್ತಿಗೆ ಸಂಬಂಧಿಸಿದ ಮೌಲ್ಯಯುತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 

Similar News