ವೃದ್ಧ ತಾಯಿ ಜತೆಗೆ ಇರಲು ಆರೋಪಿಗೆ ಹೈಕೋರ್ಟ್ ನಿಂದ ಪೆರೋಲ್ ಮಂಜೂರು

Update: 2023-06-01 15:43 GMT

ಬೆಂಗಳೂರು, ಜೂ.1: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧ ತಾಯಿಯೊಂದಿಗೆ ಇರಲು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯೊಬ್ಬನಿಗೆ ಹೈಕೋರ್ಟ್ 21 ದಿನಗಳ ಕಾಲ ತುರ್ತು ಪೆರೋಲ್ ಮಂಜೂರು ಮಾಡಿ ಆದೇಶಿಸಿದೆ.   

ಬಾಗಲಕೋಟೆ ಜಿಲ್ಲೆಯ ಬೆನಕನವಾರಿ ಗ್ರಾಮದ ಅಪರಾಧಿ ಶಿವಪ್ಪ ಬೆಲ್ಲದ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ, ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಕಾಣಲು ಅವಕಾಶ ಕಲ್ಪಿಸಿ ಆದೇಶಿಸಿದೆ. 

ಮಾನವನ ಜೀವನದಲ್ಲಿ ತಾಯಿ ಮತ್ತು ಮಕ್ಕಳ ನಡುವೆ ಭರಿಸಲಾಗದ ಬಾಂಧವ್ಯದ ಪ್ರಜ್ಞೆಯಿದ್ದು, ಷರತ್ತುಬದ್ಧವಾಗಿ ನೋಡಿಕೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೇ, ತಾಯಿಯನ್ನು ಮಕ್ಕಳು ನೋಡಿಕೊಳ್ಳಬೇಕು. ಜೊತೆಗೆ ಮಕ್ಕಳು ತಾಯಿಯನ್ನು ನೋಡಬೇಕು ಎಂಬುದು ನ್ಯಾಯಸಮ್ಮತವಾದ ಬೇಡಿಕೆಯಾಗಿದೆ. ಹೀಗಿರುವಾಗ ತನ್ನ ತಾಯಿಯನ್ನು ನೋಡಲು ಮಗನಿಗೆ ಸಮಂಜಸವಾದ ಅವಕಾಶ ಕಸಿದುಕೊಳ್ಳಲಾಗದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣವೇನು?: ಕೊಲೆ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಬಯಲು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅರ್ಜಿದಾರರು ಶಿವಪ್ಪ ಬೆಲ್ಲದ ಎಂಬುವರ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಕುಷ್ಟಗಿಯ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ 75 ವರ್ಷದ ತಾಯಿಯನ್ನು ನೋಡಲು 30 ದಿನಗಳ ಕಾಲ ಪೆರೋಲ್ ನೀಡಬೇಕು ಎಂದು ಕೋರಿ ಜೈಲು ಅಧಿಕಾರಿಗಳಿಗೆ ಶಿವಪ್ಪ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿ ದೃಢೀಕರಣ ಪತ್ರವನ್ನು ನೀಡಿದ್ದರು. ಇದನ್ನು ಪ್ರಶ್ನಿಸಿ ಬೆಲ್ಲದ ಹೈಕೋರ್ಟ್ ಮೆಟ್ಟಿಲೇರಿದ್ದರು.

Similar News