ಶಿವಮೊಗ್ಗ | ಇಂಗ್ಲೆಂಡ್‌ನಲ್ಲಿ ವೈದ್ಯ ಎಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

Update: 2023-06-01 18:02 GMT

ಶಿವಮೊಗ್ಗ, ಜೂ.1: ಇಂಗ್ಲೆಂಡ್ ದೇಶದಲ್ಲಿ ಡಾಕ್ಟರ್ ಎಂದು ನಂಬಿಸಿ ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬರ ಜೊತೆಗೆ ಚಾಟಿಂಗ್ ಮಾಡಿ, ಲಕ್ಷಾಂತರ ರೂ. ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಮಹಿಳೆಯೊಬ್ಬರ ಫೇಸ್‌ಬುಕ್‌ಗೆ ವ್ಯಕ್ತಿಯೊಬ್ಬನ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ರಿಕ್ವೆಸ್ಟ್ ಅಕ್ಸಪ್ಟ್ ಮಾಡಿ ಸ್ವಲ್ಪ ದಿನ ಆ ವ್ಯಕ್ತಿ ಜೊತೆ ಮಹಿಳೆ ಚಾಟಿಂಗ್ ನಡೆಸಿದ್ದರು. ತಾನೊಬ್ಬ ವೈದ್ಯ. ಇಂಗ್ಲೆಂಡ್ ದೇಶದಲ್ಲಿ ವಾಸ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ. ಮೇ 14ರಂದು ಚಾಟಿಂಗ್ ವೇಳೆ, ಬೆಲೆಬಾಳುವ ಬಂಗಾರದ ಉಡುಗೊರೆ ಕಳುಹಿಸುವುದಾಗಿ ಆತ ತಿಳಿಸಿದ್ದ ಎಂದು ತಿಳಿದುಬಂದಿದೆ.

ಮೇ 16ರಂದು ಮಹಿಳೆಯ ಮೊಬೈಲ್ ನಂಬರ್‌ಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ, ತಾನು ಏರ್‌ಪೋರ್ಟ್ ಅಧಿಕಾರಿ ಎಂದು ತಿಳಿಸಿದ್ದ. ನಿಮಗೆ ಕೊರಿಯರ್ ಬಂದಿದ್ದು ಅದಕ್ಕೆ ಶುಲ್ಕ ತಗಲಲಿದೆ ಎಂದು ತಿಳಿಸಿದ್ದ. ಇದನ್ನು ನಂಬಿದ ಮಹಿಳೆ ಮೇ 16 ರಿಂದ 20ರವರೆಗೆ ವಿವಿಧ ಹಂತದಲ್ಲಿ ಒಟ್ಟು 6.50 ಲಕ್ಷ ರೂ. ಹಣ ವರ್ಗಾಯಿಸಿದ್ದಾರೆ. ಆ ಬಳಿಕ ವೈದ್ಯ ಮತ್ತು ಏರ್‌ಪೋರ್ಟ್ ಅಧಿಕಾರಿ ಸೋಗಿನಲ್ಲಿ ಚಾಟಿಂಗ್ ಮತ್ತು ಫೋನ್ ಮೂಲಕ ಮಾತನಾಡಿದವರು ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.

ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆ ಮಹಿಳೆ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News