ಎವರೆಸ್ಟ್ ಆರೋಹಣಕ್ಕೆ ಪ್ಲಾಟಿನಂ ಸಂಭ್ರಮ

Update: 2023-06-01 19:30 GMT

ಹಿಮಾಲಯ ಸಾರ್ವಜನಿಕ ಉದ್ಯಾನವಾಗಿ ಬದಲಾಗಿದೆ. ಬೇಸ್ ಕ್ಯಾಂಪ್‌ನಲ್ಲಿ ಲ್ಯಾಪ್‌ಟಾಪ್, ಆಡಿಯೊ ಮತ್ತು ವೀಡಿಯೊ ಸಾಧನಗಳು ಜಮೆಯಾಗಿ, ಲೈವ್ ಪ್ರಸಾರ ಮಾಡುತ್ತಿರುತ್ತವೆ. ಕ್ಯಾಂಪ್‌ನಲ್ಲಿ ಕಸದ ರಾಶಿ ಸೃಷ್ಟಿಯಾಗುತ್ತದೆ. ಈ ಮೊದಲು ನೇಪಾಳ ಮಾರ್ಗದಲ್ಲಿ ಹೆಚ್ಚು ಆರೋಹಿಗಳು ಇರುತ್ತಿದ್ದರು. ಜನದಟ್ಟಣೆಯಿಂದ ಟಿಬೆಟ್ ಮಾರ್ಗಕ್ಕೆ ಸ್ಥಳಾಂತರಗೊಂಡಿದ್ದಾರೆ. ಪ್ರತಿಯೊಬ್ಬ ಆರೋಹಿ 8 ಕೆ.ಜಿ. ತ್ಯಾಜ್ಯ ಸಂಗ್ರಹಿಸಿ ತರಬೇಕು; ಇಲ್ಲವಾದರೆ 4,000 ಡಾಲರ್ ಠೇವಣಿ ವಾಪಸ್ ಮಾಡುವುದಿಲ್ಲ ಎಂದು ನೇಪಾಳ ನಿಯಮ ರೂಪಿಸಿದೆ. ಆದರೆ, ಅನುಷ್ಠಾನ ದುರ್ಬಲವಾಗಿದೆ. ನೇಪಾಳದಲ್ಲಿ ಅನುಮತಿ ನೀಡುವುದು ಪ್ರವಾಸೋದ್ಯಮ ಇಲಾಖೆ. ಈ ಪುಟ್ಟ ರಾಷ್ಟ್ರಕ್ಕೆ ಹಣದ ಅಗತ್ಯ ಇರುವುದರಿಂದ, ಪ್ರವಾಸಿಗಳಿಗೆ ತಡೆಯೊಡ್ಡಲು ದೇಶ ಸಿದ್ಧವಿಲ್ಲ.



ಮೇ  29, 1953ರಂದು ಬೆಳಗ್ಗೆ 11:30ಕ್ಕೆ ಶೆರ್ಪಾ ಸಮುದಾಯದ ತೆನ್‌ಜಿಂಗ್ ನೊರ್ಗೆ ಹಾಗೂ ನ್ಯೂಝಿಲ್ಯಾಂಡ್‌ನ ಜೇನುಸಾಕಣೆದಾರ ಹಿಲರಿ, ಎವರೆಸ್ಟ್ ಮೇಲೆ ಕಾಲಿರಿಸಿದರು. ಚರಿತ್ರೆಯೊಂದು ಸೃಷ್ಟಿಯಾಯಿತು. ತೆನ್‌ಜಿಂಗ್, ಎಡ್ಮಂಡ್ ಹಿಲರಿ ಮತ್ತು ಚೋಮೋಲುಂಗ್ಮ ನಡುವಿನ ಬಂಧಕ್ಕೆ ಈಗ 70ರ ಹರೆಯ. ಈ ಬಂಧಕ್ಕೆ ಕಾರಣವಾದ ಎವರೆಸ್ಟ್ ಶಿಖರ ಹವಾಮಾನ ಬದಲಾವಣೆ ಮತ್ತು ಶ್ರೀಮಂತ ಪರ್ವತಾರೋಹಿಗಳ ಪದಾಘಾತಕ್ಕೆ ಸಿಲುಕಿದೆ; ಹಿಮಾಲಯವನ್ನು ‘ಪವಿತ್ರ ತಾಯಿ’ ಎಂದು ಕರೆಯುವ ಶೆರ್ಪಾಗಳ ಜೀವಕ್ಕೆ ಕುತ್ತು ತಂದಿದೆ.

ಹಿಮಾಲಯವೆಂಬ ದೇವಭೂಮಿ
ಭಾರತ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಬೇರ್ಪಡಿಸುವ ಹಿಮಾಲಯ ಪರ್ವತಶ್ರೇಣಿ, ಭೂತಾನ್, ನೇಪಾಳ, ಚೀನಾ ಮತ್ತು ಪಾಕಿಸ್ತಾನವನ್ನು ಸ್ಪರ್ಶಿಸುತ್ತದೆ. ಪಶ್ಚಿಮ ದಿಕ್ಕಿಗೆ ಹರಿದು ಅರೇಬಿಯನ್ ಸಮುದ್ರವನ್ನು ಸೇರುವ ಜೇಲಂ, ಚೀನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳು ಹಾಗೂ ಬಂಗಾಳ ಕೊಲ್ಲಿಯನ್ನು ಸೇರುವ ಗಂಗಾ, ಬ್ರಹ್ಮಪುತ್ರ ಮತ್ತು ಯಮುನಾ ನದಿಗಳ ಉಗಮಸ್ಥಾನವಾದ ಹಿಮಾಲಯವನ್ನು ‘ಮೂರನೇ ಧ್ರುವ’ ಎಂದು ಕರೆಯುತ್ತಾರೆ. ತನ್ನ 15,000 ನೀರ್ಗಲ್ಲು ನದಿಗಳಲ್ಲಿ 12,000 ಚದರ ಕಿ.ಮೀ. ಶುದ್ಧ ನೀರು ಶೇಖರಿಸಿಟ್ಟುಕೊಂಡಿದೆ. ಹಿಮಾಲಯ ಜಗತ್ತಿನ ಅತ್ಯಂತ ಕಿರಿಯ ಪರ್ವತ ಶ್ರೇಣಿ; ಇಂಡೋ ಆಸ್ಟ್ರೇಲಿಯನ್ ಮತ್ತು ಯುರೇಷಿಯನ್ ಫಲಕಗಳ ತಿಕ್ಕಾಟದಿಂದ ಸೃಷ್ಟಿಯಾದ, ಮಡ್ಡಿ ಮತ್ತು ರೂಪಾಂತರಗೊಂಡ ಕಲ್ಲುಗಳಿಂದ ನಿರ್ಮಾಣಗೊಂಡ ಪರ್ವತವಿದು. ಮ್ಯಾನ್ಮಾರ್‌ನ ಅರಕನ್‌ಯೋಮಾ ಪ್ರಸ್ಥ ಭೂಮಿ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳು ಕೂಡ ಈ ಘರ್ಷಣೆಯ ಫಲ. ಇಂದಿಗೂ ಇಂಡಿಯನ್ ಫಲಕ ವಾರ್ಷಿಕ 67 ಮಿ.ಮೀ. ಮೇಲ್ಮುಖವಾಗಿ ಚಲಿಸುತ್ತಿದ್ದು, ಹಿಮಾಲಯದ ಎತ್ತರ ಪ್ರತಿವರ್ಷ 5 ಮಿ.ಮೀ. ಹೆಚ್ಚುತ್ತಿದೆ. ಫಲಕಗಳು ಕ್ರಿಯಾಶೀಲವಾಗಿರುವುದರಿಂದ, ಆಗಾಗ ಭೂಕಂಪ ಸಂಭವಿಸುತ್ತದೆ. ಹೀಗಿದ್ದರೂ, ವೈಜ್ಞಾನಿಕ ಮತ್ತು ತಾರ್ಕಿಕವಲ್ಲದ ಅಭಿವೃದ್ಧಿ ಯೋಜನೆಗಳಿಂದ ಹಿಮಾಲಯ ದಿಕ್ಕೆಟ್ಟಿದೆ. ಆಗಾಗ ಮೇಘಸ್ಫೋಟ, ಪ್ರವಾಹ, ಭಾರೀ ನೀರ್ಗಲ್ಲುಗಳ ಕುಸಿತದ ಮೂಲಕ ಪ್ರತಿಕ್ರಿಯಿಸುತ್ತಿದ್ದು, ನೂರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ; ಅಪಾರ ನಷ್ಟಕ್ಕೆ ಕಾರಣವಾಗುತ್ತಿದೆ.

ಈ ಪರ್ವತ ಶ್ರೇಣಿಯ ಶಿಖರವೇ ಎವರೆಸ್ಟ್. ನೇಪಾಳಿಯಲ್ಲಿ ಸಾಗರಮಾತಾ, ಟಿಬೆಟ್‌ನಲ್ಲಿ ಚೋಮೋಲುಂಗ್ಮ ಮತ್ತು ಚೀನಿಯಲ್ಲಿ ಪಿನ್‌ಯಿನ್ ಎಂದು ಕರೆಸಿಕೊಳ್ಳುವ ಎವರೆಸ್ಟ್, ಸಮುದ್ರ ಮಟ್ಟದಿಂದ 8,848.86 ಮೀಟರ್ ಎತ್ತರವಿದೆ. ನಾಮಕರಣ ಮಾಡಿದವರು ಸರ್ವೇಯರ್ ಜನರಲ್ ಆಂಡ್ರ್ಯೂ ವಾಗ್(1849ರಲ್ಲಿ); ಇದಕ್ಕೆ ಸರ್ ಜಾರ್ಜ್ ಎವರೆಸ್ಟ್ ಸಮ್ಮತಿಸದಿದ್ದರೂ, ಹೆಸರು ಉಳಿದುಕೊಂಡಿತು. 1865ರಲ್ಲಿ ರಾಯಲ್ ಜಿಯಾಗ್ರಫಿಕ್ ಸೊಸೈಟಿ ಈ ಹೆಸರಿಗೆ ಸಮ್ಮತಿಸಿತು.

 ಭೂಗರ್ಭಶಾಸ್ತ್ರಜ್ಞರು ಎವರೆಸ್ಟನ್ನು ಮೂರು ಭಾಗವಾಗಿ ವಿಂಗಡಿಸುತ್ತಾರೆ; 8,600 ಮೀಟರ್ ಮೇಲಿನ ಕೋಮೋಲಂಗ್ಮಾ, 7,000-8,600 ಮೀಟರ್ ನಡುವಿನ ನಾರ್ತ್ ಕೋಲ್ ಹಾಗೂ 7,000 ಮೀಟರ್ ಕೆಳಗಿನ ರಂಟೆಕ್ ರಚನೆ. ಭೂಗರ್ಭಶಾಸ್ತ್ರ ವಿಜ್ಞಾನಗಳ ಅಂತರ್‌ರಾಷ್ಟ್ರೀಯ ಒಕ್ಕೂಟ(ಐಯುಜಿಎಸ್) ಎವರೆಸ್ಟನ್ನು ಪಾರಂಪರಿಕ ತಾಣ ಎಂದು ಗುರುತಿಸಿದೆ. ಬಹಳ ಹಿಂದಿನಿಂದಲೂ ಎವರೆಸ್ಟ್ ಪರ್ವತಾರೋಹಿಗಳನ್ನು ಕೈಬೀಸಿ ಕರೆಯುತ್ತಿದೆ. 1885ರಲ್ಲಿ ಆಲ್ಪೈನ್ ಕ್ಲಬ್‌ನ ಅಧ್ಯಕ್ಷ ಕ್ಲಿಂಟನ್ ಥಾಮಸ್ ಡೆಂಟ್ ತನ್ನ ಪುಸ್ತಕ ‘ಎಬೊವ್ ದ ಸ್ನೋಲೈನ್’ನಲ್ಲಿ ‘ಎವರೆಸ್ಟ್‌ನ ಆರೋಹಣ ಸಾಧ್ಯವಿದೆ’ ಎಂದು ಬರೆದಿದ್ದರು. ಶಿಖರವನ್ನು ನೇಪಾಳ(ದಕ್ಷಿಣ ಕೋಲ್ ಮಾರ್ಗ) ಹಾಗೂ ಟಿಬೆಟ್(ಉತ್ತರ ಕೋಲ್ ಮಾರ್ಗ) ಮೂಲಕ ಏರಬಹುದು. ಉತ್ತರದ ಮಾರ್ಗವನ್ನು ಕಂಡುಹಿಡಿದವರು ಜಾರ್ಜ್ ಮಲ್ಲೋರಿ ಮತ್ತು ಗೈ ಬುಲ್ಲಕ್(1921ರಲ್ಲಿ) ಹಾಗೂ ನೇಪಾಳದ ಮಾರ್ಗವನ್ನು ಕಂಡುಹಿಡಿದವರು ಚಾರ್ಲ್ಸ್ ಹೌಸ್ಟನ್, ಆಸ್ಕರ್ ಹೌಸ್ಟನ್ ಮತ್ತು ಬೆಟ್ಟಿ ಕೌಲ್ಸ್. 1921ರಲ್ಲಿ ಬ್ರಿಟಿಷ್ ತಂಡದಿಂದ ಮೊದಲ ಆರೋಹಣ ಪ್ರಯತ್ನ ನಡೆಯಿತು. ಆನಂತರ 1922ರ ತಂಡ 8,320 ಮೀಟರ್ ಏರಿತು. ಎತ್ತರ ಹೆಚ್ಚಿದಂತೆ ಆಮ್ಲಜನಕದ ಕೊರತೆಯಿಂದ ಉಸಿರಾಟ ಕಷ್ಟವಾಗುತ್ತದೆ. ಈ ಸಮಸ್ಯೆ ನಿವಾರಿಸಲು 1922ರಲ್ಲಿ ಜಾರ್ಜ್ ಫಿಂಚ್ ಆಮ್ಲಜನಕವನ್ನು ಮೊದಲ ಬಾರಿ ಬಳಸಿದರು. 1924ರಲ್ಲಿ ಮಲ್ಲೋರಿ ಮತ್ತು ಕರ್ನಲ್ ಫೆಲಿಕ್ಸ್ ನಾರ್ಟನ್ ವ್ಯತಿರಿಕ್ತ ಹವಾಮಾನದಿಂದಾಗಿ ಆರೋಹಣ ಕೈಬಿಟ್ಟರು. ಆನಂತರ ಆರೋಹಣ ಪ್ರಯತ್ನ ನಡೆಸಿದ ನಾರ್ಟನ್ ಮತ್ತು ಸಾಮರ್ ವೆಲ್ ಜೋಡಿಯಲ್ಲಿ ನಾರ್ಟನ್ 8,550 ಮೀಟರ್ ಏರಿದರು.

ಆರೋಹಣ ಗಾಥೆಯ ದುರಂತವೊಂದರಲ್ಲಿ ಜಾರ್ಜ್ ಮಲ್ಲೋರಿ ಮತ್ತು ಆಂಡ್ರ್ಯೂ ಇರ್ವಿನ್ ಜೂನ್ 8, 1924ರಂದು ನಾಪತ್ತೆಯಾದರು. 1999ರ ಮೇ 1ರಂದು ಮಲ್ಲೋರಿ ಅವರ ಶವವನ್ನು ಕಾನ್ರಾಡ್ ಆಂಕರ್ ಪತ್ತೆ ಮಾಡಿದರು. 1953ರಲ್ಲಿ ಜಾನ್ ಹಂಟ್ ನೇತೃತ್ವದ ಬ್ರಿಟಿಷರ 9ನೇ ತಂಡದ ಟಾಮ್ ಬೋರ್ಡಿಲಿನ್ ಮತ್ತು ಚಾರ್ಲ್ಸ್ ಇವಾನ್ಸ್ ಆಮ್ಲಜನಕದ ಸಮಸ್ಯೆಯಿಂದಾಗಿ ಶಿಖರ ಕೇವಲ 100 ಮೀಟರ್ ದೂರ ಇದ್ದಾಗ ವಾಪಸಾದರು. 1921-1951ರವರೆಗೆ 8 ಬಾರಿ ಎವರೆಸ್ಟ್ ಆರೋಹಣಕ್ಕೆ ವಿಫಲ ಪ್ರಯತ್ನ ನಡೆಸಿದ್ದ ಎರಿಕ್ ಶಿಫ್ಟನ್‌ಗೆ ಜೊತೆಯಾದವರು 6 ಬಾರಿ ವಿಫಲ ಪ್ರಯತ್ನ ನಡೆಸಿದ್ದ ತೆನ್‌ಜಿಂಗ್. 1953 ಬ್ರಿಟನ್ ರಾಣಿ ಎಲಿಜಬೆತ್-2 ಅವರ ಪಟ್ಟಾಭಿಷೇಕ ವರ್ಷ. 27,900 ಅಡಿ ಎತ್ತರದಲ್ಲಿದ್ದ ಶಿಬಿರ-9, ಈವರೆಗೆ ಮನುಷ್ಯರು ಏರಿದ್ದ ಗರಿಷ್ಠ ಎತ್ತರವಾಗಿತ್ತು. 16,000 ಅಡಿ ಕೆಳಗಿನ ತೆಂಗ್ಬೋಚೆ ಮಠದ ಗುರು ರಿಂಪೋಚೆ, ತಂಡ ಕ್ಷೇಮವಾಗಿ ಮರಳಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು. ಹಿಲರಿಯ ಬೂಟುಗಳಿಗೆ ಹಿಮಗಡ್ಡೆಗಳು ಅಂಟಿಕೊಂಡಿದ್ದು, ನಡೆಯಲು ಕಷ್ಟವಾಗುತ್ತಿತ್ತು. ಮೇ 29ರ ಬೆಳಗ್ಗೆ 6:30ಕ್ಕೆ ಆರಂಭಗೊಂಡ ಅಂದಿನ ಆರೋಹಣ 11:30ಕ್ಕೆ ಅಂತ್ಯಗೊಂಡು, ಎವರೆಸ್ಟ್ ಮೇಲೆ ಮನುಷ್ಯನೊಬ್ಬ ಕಾಲಿಟ್ಟ. ಇಬ್ಬರಿಗೂ ರಾಣಿಯಿಂದ ‘ಆರ್ಡರ್ ಆಫ್ ಬ್ರಿಟಿಷ್ ಎಂಪೈರ್’ ಪುರಸ್ಕಾರ ಸಿಕ್ಕಿತು. ಆನಂತರ, ಮೇ 25, 1960ರಂದು ಉತ್ತರ ಮಾರ್ಗದ ಮೂಲಕ ಚೀನಾದ ವಾಂಗ್ ಫುಜೋ, ಗಾಂಪೋ ಮತ್ತು ಕ್ಯು ಇನ್‌ಹುವಾ ಎವರೆಸ್ಟ್ ತಲುಪಿದರು.

ದುರಂತಗಳ ಸರಮಾಲೆ
ಆನಂತರ ಮೂರು ದಶಕಗಳ ಕಾಲ ಆರೋಹಣ ನಿರಂತರವಾಗಿ ನಡೆಯಿತು. ಸಮಸ್ಯೆ ಶುರುವಾಗಿದ್ದು 1980ರಲ್ಲಿ ‘ಮನರಂಜನೆಗೆ ಪರ್ವತಾರೋಹಣ’ ಆರಂಭಗೊಂಡ ನಂತರ; ಇಟಲಿಯ ಪರ್ವತಾರೋಹಿ ರಿಚರ್ಡ್ ಮೆಸ್ನರ್ ಮತ್ತು ಅಮೆರಿಕದ ತೈಲೋದ್ಯಮಿ ರಿಚರ್ಡ್ ಬಾಸ್‌ರ ‘ಏಳು ಶೃಂಗಗಳ ಸವಾಲು’ ಜನಪ್ರಿಯಗೊಂಡ ಬಳಿಕ. ಚೀನಾ ಎವರೆಸ್ಟ್ ಆರೋಹಣಕ್ಕೆ ಹೆಚ್ಚು ಸಂಖ್ಯೆಯಲ್ಲಿ ಪರವಾನಿಗೆ ನೀಡಲಾರಂಭಿಸಿತು. ನೇಪಾಳ ಸರಕಾರ ಇದನ್ನು ಹಿಂಬಾಲಿಸಿತು. ಮೇ 1989ರಲ್ಲಿ ಪೋಲ್ಯಾಂಡ್‌ನ ಯುಜೆನಿಯಸ್ ಕ್ರೋಬಾಕ್ ಮತ್ತು ಅಂಡ್ರೆಜ್ ಮಾರ್ಸಿನಿಯಾಕ್ ಶಿಖರವನ್ನು ತಲುಪಿದರು. ಆದರೆ, 19 ಸದಸ್ಯರ ತಂಡದ ನಾಲ್ವರು ಹಿಮಪಾತದಿಂದ ಮೃತಪಟ್ಟರು. ಮಾರನೇ ದಿನ ಕ್ರೊಬಾಕ್ ಕೂಡ ಮೃತಪಟ್ಟರು. ಕಾರ್ಯಾಚರಣೆ ತಂಡವೊಂದು ಮಾರ್ಸಿನಿಯಾಕ್‌ರನ್ನು ರಕ್ಷಿಸಿತು. 1996ರ ಮೇ 10-11ರಂದು 8 ಮಂದಿ ಹಾಗೂ ಆ ಋತುವಿನಲ್ಲಿ ಒಟ್ಟು 15 ಮಂದಿ ಮೃತಪಟ್ಟರು. ಈ ದುರಂತವನ್ನು ಪತ್ರಕರ್ತ ಜಾನ್ ಕ್ರಾಕೇರ್ ‘ಇನ್‌ಟು ಥಿನ್ ಏರ್’ ಪುಸ್ತಕದಲ್ಲಿ ದಾಖಲಿಸಿದ್ದು, 30 ಲಕ್ಷ ಪ್ರತಿ ಮಾರಾಟವಾಗಿದೆ. 1996ರಲ್ಲಿ ಸ್ಕಾಟ್ ಫಿಷರ್ ನೇತೃತ್ವದ ಇಬ್ಬರು ಶೆರ್ಪಾಗಳು ಸೇರಿದಂತೆ 18 ಮಂದಿಯಿದ್ದ ‘ಮೌಂಟೇನ್ ಮ್ಯಾಡ್‌ನೆಸ್’ ತಂಡ ಹಿಮಪಾತಕ್ಕೆ ಸಿಲುಕಿತು.

ಟೆಕ್ಸಾಸ್‌ನ ರೋಗಶಾಸ್ತ್ರಜ್ಞ ಡಾ.ಸೀಬಾರ್ನ್ ಬೆಕ್‌ವೆದರ್ಸ್ ಯಾವುದೇ ರಕ್ಷಾಕವಚಗಳಿಲ್ಲದೆ ರಾತ್ರಿಯನ್ನು ಕಳೆದರು. ಪವಾಡಸದೃಶವೆಂಬಂತೆ ಉಳಿದುಕೊಂಡು, ಮಾರನೇ ದಿನ ಬೆಳಗ್ಗೆ ಶಿಬಿರ 4ಕ್ಕೆ ಬಂದರು. ಹಿಮಗುರುಡು ಮತ್ತು ಹಿಮಹುಣ್ಣಿನಿಂದ ಗಂಭೀರ ಸ್ಥಿತಿ ತಲುಪಿದ್ದ ಅವರು ಬದುಕುವುದಿಲ್ಲ ಎಂದುಕೊಂಡ ಉಳಿದವರು, ಅವರನ್ನು ಬಿಟ್ಟು ತೆರಳಿದರು. ಮಾರನೇ ದಿನ ನೇಪಾಳ ಸೇನೆಯ ಕ್ಯಾಪ್ಟನ್ ಮದನ್ ಛೆತ್ರಿ ಹೆಲಿಕಾಪ್ಟರ್‌ನಲ್ಲಿ ಸಾಗಿಸಿ, ಕಟ್ಮಂಡುವಿನ ಆಸ್ಪತ್ರೆಗೆ ದಾಖಲಿಸಿದರು(ಈ ಕುರಿತ ಅವರ ಹೊತ್ತಗೆ ‘ಲೆಫ್ಟ್ ಫಾರ್ ಡೆಡ್: ಮೈ ಜರ್ನಿ ಹೋಂ ಫ್ರಂ ಎವರೆಸ್ಟ್, ಥ್ರಿಫ್ಟ್ ಬುಕ್ಸ್, 2000. ಸಹಲೇಖಕ-ಸ್ಟೀಫನ್ ಜಿ. ಮಿಕಾರ್ಡ್). ಪರ್ವತಾರೋಹಿಗಳ ಈ ಅಮಾನವೀಯ ವರ್ತನೆ ಸಾರ್ವತ್ರಿಕವಾಗಿ ಖಂಡನೆಗೊಳ ಗಾಯಿತು. ಘಟನೆಯನ್ನು ಆಧರಿಸಿ ಬ್ರಿಟಿಷ್ ಚಿತ್ರ ನಿರ್ಮಾಪಕ ಮತ್ತು ಲೇಖಕ ಮ್ಯಾಟ್ ಡಿಕನ್‌ಸನ್ ಬರೆದ ಹೊತ್ತಗೆ ‘ದ ಅದರ್ ಸೈಡ್ ಆಫ್ ಎವರೆಸ್ಟ್’. 2015ರ ಸಿನೆಮಾ ‘ಎವರೆಸ್ಟ್’(ನಿರ್ದೇಶನ ಬಲ್ತಸಾರ್ ಕೊರ್ಮಾಕರ್) ಈ ದುರಂತವನ್ನು ಆಧರಿಸಿದೆ. ಸ್ಕಾಟ್ ಫಿಷರ್ ಕೂಡ ಮೃತಪಟ್ಟರು.

1987ರವರೆಗೆ ಎವರೆಸ್ಟ್ ಏರಿದವರು ಕೇವಲ 200 ಮಂದಿ. ಆದರೆ, ಮಾರ್ಚ್ 2012ರೊಳಗೆ 5,656 ಮಂದಿ ಎವರೆಸ್ಟ್ ಏರಿದರು! ಹಿಲರಿ-ತೆನ್‌ಜಿಂಗ್ ಬಳಸಿದ್ದ ಆರೋಹಣ ಮಾರ್ಗದ ಹೆಸರು ‘ಯಾಕ್ ಟ್ರೇಲ್’ ಎಂದು ಬದಲಾಯಿತು. ಹಣವಂತರು, ಅನನುಭವಿ ಪರ್ವತಾರೋಹಿಗಳು ಹೆಚ್ಚಿದಂತೆ, ಸಾವಿನ ಪ್ರಮಾಣವೂ ಹೆಚ್ಚಿತು. ಇಂಥವರಿಗೆ ಸುಲಭವಾಗಲೆಂದು ಪರ್ವತದ ಬುಡದಿಂದ ತುದಿಯವರೆಗೆ ಹಗ್ಗಗಳನ್ನು ಕಟ್ಟಲಾಗುತ್ತದೆ. ಹೆಲಿಕಾಪ್ಟರ್‌ಗಳು ಕೂಡ ಬಳಕೆಯಾಗುತ್ತವೆ. ಟೂರ್ ಆಪರೇಟರ್‌ಗಳ ನಡುವೆ ಸ್ಪರ್ಧೆ ಹೆಚ್ಚಿದೆ. ಆರೋಹಣದ ಬಳಿಕ ಹೆಲಿಕಾಪ್ಟರ್‌ನಲ್ಲಿ ಕಟ್ಮಂಡುಗೆ ತೆರಳಿ, ಐಶಾರಾಮಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುವವರೂ ಇದ್ದಾರೆ. 1953ರಲ್ಲಿ ಬ್ರಿಟಿಷ್ ತಂಡಕ್ಕೆ ಬೇಸ್ ಕ್ಯಾಂಪ್ ತಲುಪಲು 3 ವಾರ ಬೇಕಾಯಿತು. ಈಗ ಹೆಲಿಕಾಪ್ಟರ್‌ನಲ್ಲಿ 45 ನಿಮಿಷ ಸಾಕು. ಆರೋಹಣಕ್ಕೆ ಸಂಬಂಧಿಸಿದ ಎಲ್ಲ ಸಾಧನಗಳ ಹೊತ್ತೊಯ್ಯುವಿಕೆ, ಮಾರ್ಗದಲ್ಲಿ ಹಗ್ಗ-ಏಣಿಯನ್ನು ಅಳವಡಿಸುವುದು ಮತ್ತು ಸಕಲ ನೆರವು ನೀಡುವ ಶೆರ್ಪಾಗಳಿಗೆ ಆರೋಹಣ ಅಪಾಯಕಾರಿಯಾಗಿ ಪರಿಣಮಿಸಿದೆ.

2014 ಎಪ್ರಿಲ್ 18ರಂದು ಹಿಮಪಾತದಿಂದ 16 ಶೆರ್ಪಾಗಳು ಮೃತಪಟ್ಟರು. ಮೃತರ ಸಂಬಂಧಿಗಳಿಗೆ ನೇಪಾಳ ಸರಕಾರ ನೀಡಿದ ಪರಿಹಾರ 40,000 ರೂ.! ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಮುದಾಯ, ವಿಮೆ ಖಾತ್ರಿ ಹಾಗೂ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿತು. 2015ರಲ್ಲಿ ಭೂಕಂಪದಿಂದ 10 ಶೆರ್ಪಾಗಳು ಮೃತಪಟ್ಟರು. 1921-2018ರ ಅವಧಿಯಲ್ಲಿ ಮೃತಪಟ್ಟ ಶೆರ್ಪಾಗಳ ಸಂಖ್ಯೆ 118. 1996ರಲ್ಲಿ 12, 2006ರಲ್ಲಿ 11, 2012ರಲ್ಲಿ 10 ಮತ್ತು 2014ರಲ್ಲಿ ಹಿಮಪಾತದಿಂದ 16 ಪರ್ವತಾರೋಹಿಗಳು ಸಾವಿಗೀಡಾಗಿದ್ದಾರೆ. ನವೆಂಬರ್ 2022ರಲ್ಲಿ 310 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ದೇಹಗಳು ಹಿಮದಲ್ಲೇ ಉಳಿದುಕೊಂಡಿವೆ. 8,000 ಮೀಟರ್ ಎತ್ತರದಲ್ಲಿ ರಕ್ಷಣಾ ಕಾರ್ಯ ಕ್ಲಿಷ್ಟವಾದುದು. ಎಪ್ರಿಲ್ 2023ರಲ್ಲಿ ಭಾರತದ ಬಲ್ಜಿತ್ ಕೌರ್ ಅವರನ್ನು ಹೆಲಿಕಾಪ್ಟರ್ ಬಳಸಿ ರಕ್ಷಿಸಲಾಯಿತು.

ಎಪ್ರಿಲ್‌ನಲ್ಲಿ ಆರೋಹಣ ಋತು ಆರಂಭಗೊಂಡ ಬಳಿಕ ಜಗತ್ತಿನ ಎಲ್ಲೆಡೆಯಿಂದ ಪರ್ವತಾರೋಹಿಗಳು ಬರುತ್ತಾರೆ. ಹವಾಮಾನ ಸ್ಥಿರಗೊಂಡ ಬಳಿಕ ಎಲ್ಲರೂ ಒಮ್ಮೆಲೇ ಶಿಖರವನ್ನು ಏರಲು ಪ್ರಯತ್ನಿಸುತ್ತಾರೆ. ಇದರಿಂದ ತೀವ್ರ ದಟ್ಟಣೆ ಉಂಟಾಗುತ್ತಿದೆ. 8,000 ಮೀಟರ್ ಎತ್ತರದ ಎಲ್ಲ ಶೃಂಗಗಳನ್ನು ಏರಿರುವ ನಿರ್ಮಲ್ ಪುರ್ಜಾ, ಮೇ 2019ರಲ್ಲಿ ಆರೋಹಿಗಳು ಸಾಲುಸಾಲಾಗಿ ನಿಂತಿದ್ದ ಫೋಟೋ ಪ್ರಕಟಿಸಿದ್ದರು. ಆರೋಹಣ ಅತಿ ನಿಧಾನವಾಗಿದ್ದರಿಂದ, ಆರೋಹಿಗಳು ಶಿಖರದಿಂದ ಕೇವಲ 200 ಮೀ. ದೂರದಲ್ಲಿ ಗಂಟೆಗೆ 320 ಕಿ.ಮೀ. ವೇಗದ ಕುಳಿರ್ಗಾಳಿ ಹಾಗೂ -20 ಡಿಗ್ರಿ ಸೆ. ತಾಪಮಾನದಲ್ಲಿ ಎರಡು ಗಂಟೆ ನಿಂತಿದ್ದರು. ಹೆಚ್ಚಿನವರ ಬಳಿ ಆಮ್ಲಜನಕ ಖಾಲಿಯಾಗಿತ್ತು. ಮೇ 22ರಿಂದ 2 ದಿನಗಳಲ್ಲಿ ಶಿಖರವನ್ನು ಏರಲು ಪ್ರಯತ್ನಿಸಿದವರ ಸಂಖ್ಯೆ 220. ಇವರಲ್ಲಿ 11 ಮಂದಿ ಪ್ರಾಣ ಬಿಟ್ಟರು. ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಹಿಮಾಲಯ ಸಾರ್ವಜನಿಕ ಉದ್ಯಾನವಾಗಿ ಬದಲಾಗಿದೆ. ಬೇಸ್ ಕ್ಯಾಂಪ್‌ನಲ್ಲಿ ಲ್ಯಾಪ್‌ಟಾಪ್, ಆಡಿಯೊ ಮತ್ತು ವೀಡಿಯೊ ಸಾಧನಗಳು ಜಮೆಯಾಗಿ, ಲೈವ್ ಪ್ರಸಾರ ಮಾಡುತ್ತಿರುತ್ತವೆ. ಕ್ಯಾಂಪ್‌ನಲ್ಲಿ ಕಸದ ರಾಶಿ ಸೃಷ್ಟಿಯಾಗುತ್ತದೆ. ಈ ಮೊದಲು ನೇಪಾಳ ಮಾರ್ಗದಲ್ಲಿ ಹೆಚ್ಚು ಆರೋಹಿಗಳು ಇರುತ್ತಿದ್ದರು. ಜನದಟ್ಟಣೆಯಿಂದ ಟಿಬೆಟ್ ಮಾರ್ಗಕ್ಕೆ ಸ್ಥಳಾಂತರಗೊಂಡಿದ್ದಾರೆ. ಪ್ರತಿಯೊಬ್ಬ ಆರೋಹಿ 8 ಕೆ.ಜಿ. ತ್ಯಾಜ್ಯ ಸಂಗ್ರಹಿಸಿ ತರಬೇಕು; ಇಲ್ಲವಾದರೆ 4,000 ಡಾಲರ್ ಠೇವಣಿ ವಾಪಸ್ ಮಾಡುವುದಿಲ್ಲ ಎಂದು ನೇಪಾಳ ನಿಯಮ ರೂಪಿಸಿದೆ. ಆದರೆ, ಅನುಷ್ಠಾನ ದುರ್ಬಲವಾಗಿದೆ. ನೇಪಾಳದಲ್ಲಿ ಅನುಮತಿ ನೀಡುವುದು ಪ್ರವಾಸೋದ್ಯಮ ಇಲಾಖೆ. ಈ ಪುಟ್ಟ ರಾಷ್ಟ್ರಕ್ಕೆ ಹಣದ ಅಗತ್ಯ ಇರುವುದರಿಂದ, ಪ್ರವಾಸಿಗಳಿಗೆ ತಡೆಯೊಡ್ಡಲು ದೇಶ ಸಿದ್ಧವಿಲ್ಲ.

ಹವಾಮಾನ ವ್ಯತ್ಯಯದ ಅಪಾಯ
 ಹವಾಮಾನ ವ್ಯತ್ಯಯ ಹಿಮಾಲಯವನ್ನು ಕಾಡುತ್ತಿದೆ. ಹಿಮಗಲ್ಲುಗಳ ಕರಗುವಿಕೆ ತೀವ್ರಗೊಂಡಿದೆ. 2019ರ ಹಿಂದುಕುಶ್ ಹಿಮಾಲಯ ಪ್ರಾಂತದ ಮೌಲ್ಯಾಂಕನದ ಪ್ರಕಾರ, ಈ ಪ್ರಾಂತದಲ್ಲಿ ತಾಪಮಾನ ಹೆಚ್ಚಳಗೊಂಡಿದೆ. ತೀವ್ರ ತಾಪಮಾನದ ದಿನಗಳ ಸಂಖ್ಯೆ ಹೆಚ್ಚಿದೆ ಮತ್ತು ತೀವ್ರ ಶೀತದ ದಿನಗಳು ಕಡಿಮೆಯಾಗಿವೆ. ಐಪಿಸಿಸಿ(ಇಂಟರ್ ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್) ಪ್ರಕಾರ, ಶತಮಾನದ ಅಂಚಿನಲ್ಲಿ ಜಾಗತಿಕ ತಾಪಮಾನ 1.5 ಡಿಗ್ರಿ ಸೆ.ನಷ್ಟು ಹೆಚ್ಚಳಗೊಂಡರೆ, ಹಿಂದುಕುಶ್ ಪ್ರಾಂತ(ಟಿಯರ್ಶಾನ್, ಕುನ್‌ಲುನ್, ಹಿಂದುಕುಶ್, ಕಾರಾಕೋರಂ, ಹಿಮಾಲಯ, ಹೆಂಗ್ಡುವನ್ ಮತ್ತು ಟಿಬೆಟನ್ ಪ್ರಸ್ಥಭೂಮಿಗಳನ್ನು ಒಳಗೊಂಡ ಪ್ರದೇಶ)ದ ತಾಪಮಾನ 2 ಡಿಗ್ರಿ ಸೆ. ದಾಟಲಿದೆ. ಶುದ್ಧ ನೀರಿನ ಅತಿ ದೊಡ್ಡ ಸಂಗ್ರಹಾಗಾರವಾಗಿರುವ ಈ ಪ್ರಾಂತವು 12 ಕೋಟಿ ಜನರಿಗೆ ನೀರಾವರಿ ವ್ಯವಸ್ಥೆ ಮೂಲಕ ಹಾಗೂ 130 ಕೋಟಿ ಜನರಿಗೆ ನದಿಗಳ ಮೂಲಕ ನೀರು ಪೂರೈಸುತ್ತಿದೆ. ತಾಪಮಾನ ಹೆಚ್ಚಿದಂತೆ ನೀರ್ಗಲ್ಲುಗಳ ಕರಗುವಿಕೆ ಹೆಚ್ಚಿ, ಪ್ರವಾಹದ ಸಂಭವನೀಯತೆ ಮತ್ತು ತೀವ್ರತೆ ಎರಡೂ ಹೆಚ್ಚಲಿದೆ; ನೀರಿನ ಲಭ್ಯತೆ ಮತ್ತು ಹರಿವಿನ ಮೇಲೆ ಪರಿಣಾಮವುಂಟಾಗಲಿದೆ.

ಈ ಋತುವಿನಲ್ಲಿ ಅಂದಾಜು 450 ಪರ್ವತಾರೋಹಿಗಳು ಮತ್ತು ಅಷ್ಟೇ ಸಂಖ್ಯೆಯ ಶೆರ್ಪಾಗಳು ಆರೋಹಣಕ್ಕೆ ಸಿದ್ಧವಾಗುತ್ತಿದ್ದಾರೆ. ‘ಪವಿತ್ರ ತಾಯಿ’ ಪರ್ವತಾರೋಹಿಗಳ ಪದಾಘಾತದಿಂದ ಬಳಲಿದ್ದರೆ, ಹಿಮಾಲಯ ಪರ್ವತ ಅಭಿವೃದ್ಧಿಯಿಂದ ಛಿದ್ರವಾಗಿದೆ. ಜೀವನೋಪಾಯಕ್ಕಾಗಿ ಪರ್ವತವನ್ನು ಅವಲಂಬಿಸಿರುವ ಶೆರ್ಪಾಗಳ ಬದುಕು ಕಷ್ಟದಲ್ಲಿದೆ. ಯಾವುದೂ ವಿಸ್ಮಯ-ಪಾವಿತ್ರ್ಯವನ್ನು ಉಳಿಸಿಕೊಂಡಿಲ್ಲ.