ಮೋದಿ ಅಲೆಯೆದುರು ಕಾಂಗ್ರೆಸ್ ಬಲ ಹೆಚ್ಚುತ್ತಿರುವುದು ನಿಜವೆ?

Update: 2023-06-02 06:20 GMT

ಭಾರತ್ ಜೋಡೊ ಯಾತ್ರೆಯ ಬಳಿಕ ದೇಶಾದ್ಯಂತ ರಾಹುಲ್ ಗಾಂಧಿ ಜನಪ್ರಿಯತೆ ಬಹಳ ಹೆಚ್ಚಾಗಿದೆಯೇ? ಪ್ರಧಾನಿಯಾಗಿ ರಾಹುಲ್ ಗಾಂಧಿಯನ್ನು ಒಪ್ಪಿಕೊಳ್ಳುವವರ ಪ್ರಮಾಣ ದುಪ್ಪಟ್ಟಾಗಿದೆಯೇ? ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಓಟು ಹಾಕುವವರ ಸಂಖ್ಯೆಯೂ ಹೆಚ್ಚಾಗಿದೆಯೇ? ಮೋದಿ ಸರಕಾರದ ಬಗ್ಗೆ ಜನರಲ್ಲಿ ತೀವ್ರ ಅತೃಪ್ತಿ ಇದೆಯೇ? ಸಿಎಸ್‌ಡಿ ಎಸ್-ಲೋಕನೀತಿ ನಡೆಸಿರುವ ಇತ್ತೀಚಿನ ಸಮೀಕ್ಷೆಯಲ್ಲಿ ಇಂತಹ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.


ಮುಂದಿನ ಲೋಕಸಭಾ ಚುನಾವಣೆಗೆ ಇನ್ನೇನು ಒಂದೇ ವರ್ಷವಿದೆ. 2024ರಲ್ಲಿ ಭಾರತದ ರಾಜಕೀಯವು ಬದಲಾಗಲಿದೆಯೇ ಎನ್ನುವುದು ಸದ್ಯ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದೊಂದು ಅಕಾಲಿಕ ಪ್ರಶ್ನೆ. ಯಾಕೆಂದರೆ ಈ ಪ್ರಶ್ನೆಗೆ ಈಗ ನೀಡಲಾಗುವ ಯಾವುದೇ ಉತ್ತರ ಮುಂದಿನ 11 ತಿಂಗಳುಗಳಲ್ಲಿ ನಡೆಯಬಹುದಾದ ವಿದ್ಯಮಾನಗಳನ್ನು ಅವಲಂಬಿಸಿದೆ.
ಆದರೆ ಏನು ಬದಲಾಗುವುದಿಲ್ಲ ಮತ್ತು ಈಗಾಗಲೇ ಏನೇನು ಬದಲಾಗಿದೆ ಎನ್ನುವುದರ ಕುರಿತು ಕೆಲವು ಸ್ಪಷ್ಟ ಸುಳಿವುಗಳು ಈಗ ಕಂಡುಬರುತ್ತಿವೆ.

ಸಿಎಸ್‌ಡಿಎಸ್-ಲೋಕನೀತಿ ಸರ್ವೇಯ ಮುಖ್ಯಾಂಶ ಒಂದು:
ಮೋದಿ ಅಲೆ ಇನ್ನೂ ಸ್ಥಿರವಾಗಿದೆ.
ಕಳೆದ ಹತ್ತು ವರ್ಷಗಳನ್ನು ಭಾರತೀಯ ರಾಜಕೀಯದ ಮೋದಿ ಯುಗ ಎಂದರೆ ಉತ್ಪ್ರೇಕ್ಷೆಯಲ್ಲ. 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಮೋದಿ ಜನಪ್ರಿಯತೆ ಪ್ರಮುಖ ಪಾತ್ರವನ್ನು ವಹಿಸಿತ್ತು ಮತ್ತು 2019ರಲ್ಲಿ ಅದು ಪುನಃ ಅಧಿಕಾರದ ಗದ್ದುಗೆಯೇರುವಲ್ಲಿಯೂ ಮೋದಿ ಅಲೆಯೇ ಪ್ರಮುಖವಾಗಿತ್ತು. ಈ 'ಮೋದಿ ಫ್ಯಾಕ್ಟರ್' ಈಗಲೂ ಸ್ಥಿರವಾಗಿರುವಂತೆ ಕಂಡುಬರುತ್ತಿದೆಯಾದರೂ ಅದು ಅಲ್ಲಿಗೇ ನಿಂತುಬಿಟ್ಟ ಹಂತದಲ್ಲಿದೆ ಎನ್ನುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪ್ರತೀ ಹತ್ತು ಜನರಲ್ಲಿ ನಾಲ್ವರು ಮೋದಿಯವರನ್ನು ಇಷ್ಟಪಡುತ್ತಾರೆ ಮತ್ತು ಇದಕ್ಕೂ ಸ್ವಲ್ಪಹೆಚ್ಚಿನ ಜನರು ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ. ಆದರೆ, 2019ರಿಂದ ಮೋದಿಯವರನ್ನೇ ಮತ್ತೆ ಪ್ರಧಾನಿಯಾಗಿ ಕಾಣಬಯಸುವ ಈ ಪ್ರವೃತ್ತಿಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ವಾಸ್ತವದಲ್ಲಿ ಅದು ಸ್ವಲ್ಪಕಡಿಮೆಯೇ ಆಗಿದೆ.

ಇದಕ್ಕೆ ಇತರ ಹಲವು ಕಾರಣಗಳಿದ್ದರೂ ಎಲ್ಲಕ್ಕಿಂತ ಹೆಚ್ಚಾಗಿ ಮೋದಿಯವರ ಭಾಷಣಗಳು ಮತದಾರರನ್ನು ಮಂತ್ರಮುಗ್ಧಗೊಳಿಸುತ್ತವೆ ಮತ್ತು ಮೋದಿಯವರತ್ತ ಸೆಳೆಯುತ್ತವೆ ಎನ್ನುತ್ತದೆ ಈ ಸಮೀಕ್ಷೆ. ಪರಿಣಾಮವಾಗಿ 2024ರಲ್ಲಿ ಬಹುಸಂಖ್ಯಾತ ಮತದಾರರು ಬಿಜೆಪಿಗೆ ಮತ ನೀಡಬಹುದು. ನಾಳೆಯೇ ಚುನಾವಣೆ ನಡೆದರೆ ಬಿಜೆಪಿ ತನ್ನ 2019ರ ಮತಗಳಿಕೆ ಪ್ರಮಾಣವನ್ನು ಕಾಯ್ದುಕೊಳ್ಳುತ್ತದೆ ಮತ್ತು ಸ್ವಲ್ಪಹೆಚ್ಚೇ ಮತಗಳನ್ನು ಗಳಿಸಬಹುದು ಎಂದೂ ಸಮೀಕ್ಷೆಯು ಸೂಚಿಸಿದೆ.

ಇದರ ನಡುವೆಯೇ ಬಿಜೆಪಿ ಹಾಗೂ ಮೋದಿ ಆಡಳಿತದ ಬಗ್ಗೆ ದೇಶದಲ್ಲಿ ಒಂದು ಅತೃಪ್ತಿಯ ಗಾಳಿಯೂ ಬೀಸುತ್ತಿದೆ. ಮೋದಿ ಸರಕಾರದಿಂದ ಅತೃಪ್ತರಿಗಿಂತ ತೃಪ್ತರ ಸಂಖ್ಯೆಯೇ ಹೆಚ್ಚಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದ್ದರೂ, ಸಮೀಕ್ಷೆಯ ದತ್ತಾಂಶಗಳನ್ನು ವಿವರವಾಗಿ ನೋಡಿದರೆ ಮೋದಿ ಅಧಿಕಾರಾವಧಿಯಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ತೃಪ್ತರ ಸಂಖ್ಯೆ ತೀವ್ರವಾಗಿ ಕುಸಿದಿದೆ. ಅಷ್ಟೇ ಅಲ್ಲ, ಮೋದಿ ಆಡಳಿತದ ಬಗ್ಗೆ ಅತೃಪ್ತರ ಸಂಖ್ಯೆ 2019ರಲ್ಲಿಯ ಶೇ.30ರಿಂದ ಇಂದು ಶೇ.40ಕ್ಕೇರಿದೆ ಎನ್ನುವುದು ಕಂಡುಬರುತ್ತದೆ.
ವಾಸ್ತವದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿದರೆ ಆರ್ಥಿಕ, ಸಾಮಾಜಿಕ ಅಥವಾ ನೀತಿ ಸಂಬಂಧಿತ ವಿಷಯಗಳಲ್ಲಿ ಮೋದಿ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಅತೃಪ್ತಿಯ ಹೊಗೆಯಾಡುತ್ತಿದೆ.

ಸರ್ವೇಯ ಮುಖ್ಯಾಂಶ ಎರಡು:
ಹೆಚ್ಚಿದ ರಾಹುಲ್ ಗಾಂಧಿ ಜನಪ್ರಿಯತೆ.
ಮೋದಿ ಸರಕಾರದ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ನಿರಾಶೆ ಅಥವಾ ಅತೃಪ್ತಿಯ ನಡುವೆಯೇ ರಾಹುಲ್ ಗಾಂಧಿ ತಮ್ಮ ವರ್ಚಸ್ಸನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ರಾಹುಲ್‌ರನ್ನು ಪ್ರಧಾನಿಯನ್ನಾಗಿ ಒಪ್ಪಿಕೊಳ್ಳಲು ಸಿದ್ಧವಿರುವವರ ಸಂಖ್ಯೆ 2014ರಿಂದ ಸರಿಸುಮಾರು ದ್ವಿಗುಣಗೊಂಡಿದೆ. ಆದರೆ 2019ರಿಂದ ಅದು ತೀರಾ ಹೆಚ್ಚಾಗಿಲ್ಲ.
ಅಲ್ಲದೆ, ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.25ರಷ್ಟು ಜನರು ತಾವು ಯಾವಾಗಲೂ ರಾಹುಲ್‌ರನ್ನು ಇಷ್ಟಪಟ್ಟಿದ್ದೇವೆ ಎಂದು ಹೇಳಿದ್ದರೆ, ಇನ್ನು ಶೇ.15ರಷ್ಟು ಜನರು ಈ ಗುಂಪಿಗೆ ಇತ್ತೀಚೆಗೆ ಸೇರ್ಪಡೆಗೊಂಡಿದ್ದಾರೆ. ಈ ಜನಪ್ರಿಯತೆ ಹೆಚ್ಚಳದ ಹಿಂದೆ ಪ್ರಮುಖವಾಗಿ ಭಾರತ್ ಜೋಡೊ ಯಾತ್ರೆಯ ಕೊಡುಗೆ ಇದೆ.

ಇನ್ನೂ ಕುತೂಹಲದ ವಿಷಯವೆಂದರೆ, ಹೀಗೆ ಹೊಸದಾಗಿ ರಾಹುಲ್ ಗಾಂಧಿಯನ್ನು ಮೆಚ್ಚಿರುವವರಲ್ಲಿ ಅರ್ಧಕ್ಕೂ ಹೆಚ್ಚಿನವರು ಕಾಂಗ್ರೆಸ್ ಮತದಾರರಲ್ಲ. ಅವರು ಬೇರೆ ಪಕ್ಷಗಳಿಗೆ ಮತ ಹಾಕುವವರು. ಅವರು ಮುಂದಿನ ದಿನಗಳಲ್ಲಿ ತಮ್ಮ ಆದ್ಯತೆಯ ಪಕ್ಷವಾಗಿ ಕಾಂಗ್ರೆಸ್‌ನತ್ತ ಹೊರಳುತ್ತಾರೆಯೇ ಎನ್ನುವುದು ಬಹಳಷ್ಟು ವ್ಯತ್ಯಾಸ ಉಂಟುಮಾಡಲಿದೆ.

ಸರ್ವೇಯ ಮುಖ್ಯಾಂಶ ಮೂರು:
ಪ್ರಧಾನಿ ಮೋದಿ ಧ್ರುವೀಕರಣದ ಅಂಶವಾಗಿಯೇ ಮುಂದುವರಿದಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.25ರಷ್ಟು ಜನರು ಮೋದಿ ಮತ್ತು ರಾಹುಲ್ ಇಬ್ಬರ ಬಗ್ಗೆಯೂ ಇಷ್ಟವನ್ನಾಗಲೀ ತಿರಸ್ಕಾರವನ್ನಾಗಲೀ ವ್ಯಕ್ತಪಡಿಸಿಲ್ಲ. ಶೇ.23ರಷ್ಟು ಜನರು ಮೋದಿಯವರನ್ನು ಇಷ್ಟಪಟ್ಟಿಲ್ಲ. ಶೇ.16ರಷ್ಟು ಜನರು ರಾಹುಲ್‌ರನ್ನು ಇಷ್ಟಪಟ್ಟಿಲ್ಲ. ರಾಹುಲ್ ಮೋದಿಗೆ ಸವಾಲಾಗಲಿದ್ದಾರೆ ಎಂದು ಪ್ರತೀ ಮೂವರಲ್ಲಿ ಒಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ಮತಗಳಿಕೆ ಹೆಚ್ಚಿಸಿಕೊಳ್ಳುತ್ತಿದೆ, ಆದರೆ ಇದಕ್ಕೆ ಬೆಲೆ ತೆರುತ್ತಿರುವವರು ಯಾರು? ಹಾಗಾದರೆ ಬದಲಾಗುತ್ತಿರುವ ಜನರ ಆಲೋಚನೆ ಪ್ರಕಾರ ಜನರ ಆಯ್ಕೆಯಲ್ಲೂ ಅದೇ ಬದಲಾವಣೆ ಕಾಣುತ್ತಿದೆಯೇ? ಇಲ್ಲ. ಇನ್ನೂ ಬಿಜೆಪಿ ತನ್ನ ಮತಗಳಿಕೆ ಪಾಲನ್ನು ಕಳೆದುಕೊಳ್ಳುತ್ತಿಲ್ಲ. ಆದರೆ ಕಾಂಗ್ರೆಸ್ ಕಳೆದೆರಡು ಚುನಾವಣೆಗಳಲ್ಲಿ ಶೇ.20ಕ್ಕಿಂತ ಕಡಿಮೆಯಿದ್ದ ತನ್ನ ಮತಗಳಿಕೆ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುತ್ತಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ, ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಮತ ಚಲಾಯಿಸಲು ಸಿದ್ಧರಾಗಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಆದರೆ ಕಾಂಗ್ರೆಸಿನ ಈ ಹೆಚ್ಚಿನ ಗಳಿಕೆಗೆ ಬಿಜೆಪಿಗಿಂತ ಮುಖ್ಯವಾಗಿ ಇತರ ರಾಜಕೀಯ ಪಕ್ಷಗಳು ಬೆಲೆಯನ್ನು ತೆರುತ್ತಿವೆ. ಅಂದರೆ ಕಾಂಗ್ರೆಸ್ ಕಡೆ ಈಗ ಬರುತ್ತಿರುವ ಮತಗಳು ಬಿಜೆಪಿಯದ್ದಲ್ಲ. ಬೇರೆ ಪಕ್ಷಗಳ ಪಾಲಿನ ಮತಗಳು ಕಾಂಗ್ರೆಸಿಗೆ ಹರಿದು ಬರುತ್ತಿವೆ.

ಇದು ಈಗ ನಡೆಯುತ್ತಿರುವ ಸಂಭಾವ್ಯ ಬಿಜೆಪಿಯೇತರ ಮೈತ್ರಿಕೂಟ ರಚನೆ ಸಂಬಂಧವಾಗಿ ಕಾಂಗ್ರೆಸ್‌ನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಚುನಾವಣೆಗೆ ಇನ್ನೂ 12 ತಿಂಗಳುಗಳು ಬಾಕಿಯಿವೆ. ಮತದಾರ ಏನು ಯೋಚಿಸುತ್ತಿದ್ದಾನೆ ಎನ್ನುವುದು ಈಗ ಗೊತ್ತಾಗಿದೆ. ಆದರೆ ಚುನಾವಣಾ ರಾಜಕೀಯ ಮುಂದಿನ ದಿನಗಳಲ್ಲಿ ನಡೆಯಲಿರುವ ಹತ್ತು ಹಲವು ಬೆಳವಣಿಗೆಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಸಮೀಕ್ಷೆಯು ರಾಹುಲ್ ಗಾಂಧಿ ನಂತರ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮೋದಿಯವರಿಗೆ ಪ್ರಮುಖ ಸವಾಲಾಗಿ ಹೊರಹೊಮ್ಮಲಿದ್ದಾರೆ ಎನ್ನುವುದನ್ನು ಸೂಚಿಸಿದೆ. ಶೇ.11ರಷ್ಟು ಜನರು ಕೇಜ್ರಿವಾಲ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.
ಆದರೆ ಇದಕ್ಕಿಂತಲೂ ಮಿಗಿಲಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪ್ರತೀ ಐವರಲ್ಲಿ ಒಬ್ಬರು ಮೋದಿ ಅವರು ಸ್ಪರ್ಧಿಸುವುದಿಲ್ಲ ಎಂದರೆ ಅವರ ಸಂಭಾವ್ಯ ಪರ್ಯಾಯವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರನ್ನು ಗುರುತಿಸಿದ್ದಾರೆ.

(ಆಧಾರ: CSDS - Lokniti, Theprint.in)

Similar News