ಬೆಂಗಳೂರಿನ ಗಾಂಧಿನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶತ ಪ್ರಯೋಗದತ್ತ ‘ಕುಂಟ ಕೋಣ ಮೂಕ ಜಾಣ’

Update: 2023-06-02 07:26 GMT

ಬೆಂಗಳೂರಿನ ಗಾಂಧಿನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಿರಿಯ ರಂಗಕರ್ಮಿ ಜೇವರ್ಗಿ ರಾಜಣ್ಣ ಅವರು ರಚಿಸಿ, ನಿರ್ದೇಶಿಸಿದ ’ಕುಂಟ ಕೋಣ ಮೂಕ ಜಾಣ’ ನಾಟಕ ನೂರು ಪ್ರಯೋಗಗಳತ್ತ ಯಶಸ್ವಿಯಾಗಿ ಸಾಗುತ್ತಿದೆ. ಶತಪ್ರಯೋಗದ ಸಂಭ್ರಮ ವನ್ನು ಇದೇ ಜೂನ್ 12ರಂದು ಮಧ್ಯಾಹ್ನ 2:30ಕ್ಕೆ ಸಮಾರಂಭ ಆಯೋಜಿಸುವ ಮೂಲಕ ಆಚರಿಸಲಾ ಗುತ್ತದೆ. ವಿಶೇಷವೆಂದರೆ ನಿತ್ಯ ಈ ನಾಟಕ ನೋಡುವ ಶೋಭಾ ಕೆರಗೋಡು ಅವರನ್ನು ಅಂದಿನ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಬೆಂಗಳೂರಿನಲ್ಲಿ ಹೂವು ಹಾಗೂ ಕಡ್ಲೆಕಾಯಿ ಮಾರುವ ಶೋಭಾ ಅವರು ನಿತ್ಯ ನಾಟಕ ನೋಡಲು ಕಾರಣ; ‘‘ಛಲೋ ನಾಟಕ. ನೋಡಿದವರೇ ಮತ್ತೊಂದು ಬಾರಿ ನೋಡುತ್ತಿದ್ದಾರೆ’’ ಎನ್ನುವ ಅವರ ಮಾತು ಸತ್ಯ.

ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದ ಮಾಲಕರೂ ಆದ ಜೇವರ್ಗಿ ರಾಜಣ್ಣ ಅವರ ರಚಿಸಿದ 12 ನಾಟಕಗಳಲ್ಲಿ ಅತ್ಯಂತ ಜನಪ್ರಿಯವಾದುದು ಈ ನಾಟಕ. 15 ಸಾವಿರಕ್ಕೂ ಅಧಿಕ ಪ್ರಯೋಗಗಳನ್ನು ಕಂಡ ಈ ನಾಟಕವನ್ನು 2002ರಿಂದ ರಾಜಣ್ಣ ಪ್ರದರ್ಶಿಸುತ್ತಿದ್ದಾರೆ. ಇದರ ದಾಖಲೆಗಳನ್ನು ಗಮನಿಸಿ:

ದಾವಣಗೆರೆಯಲ್ಲಿ 400ಕ್ಕೂ ಅಧಿಕ ಪ್ರಯೋಗ, ಮೈಸೂರು, ಧಾರವಾಡ, ಬೆಳಗಾವಿ, ಶಿರಸಿ, ಶಿವಮೊಗ್ಗದಲ್ಲಿ ತಲಾ 300ಕ್ಕೂ ಅಧಿಕ ಪ್ರಯೋಗ, ಹಾವೇರಿ, ಕಲಬುರಗಿ, ವಿಜಯಪುರ, ಬೀದರ್, ಬಾಗಲಕೋಟೆ, ಕೊಪ್ಪಳದಲ್ಲಿ ತಲಾ 200ಕ್ಕೂ ಅಧಿಕ ಪ್ರಯೋಗ, ಚಿತ್ರದುರ್ಗದಲ್ಲಿ 100ಕ್ಕೂ ಅಧಿಕ ಪ್ರಯೋಗ.

ಅಲ್ಲದೆ ಬಾದಾಮಿ ಬಳಿಯ ಬನಶಂಕರಿಯ ಜಾತ್ರೆಯಲ್ಲಿ 4 ಬಾರಿ ಈ ನಾಟಕ ಆಡಿದಾಗ 600ಕ್ಕೂ ಅಧಿಕ ಪ್ರಯೋಗಗಳಾಗಿವೆ. ಬಾಗಲಕೋಟೆ ಜಿಲ್ಲೆಯ ಇಲಕಲ್ಲದಲ್ಲಿ ಎರಡು ಬಾರಿ ಆಡಿದಾಗ 300ಕ್ಕೂ ಅಧಿಕ ಪ್ರದರ್ಶನಗಳಾಗಿವೆ.

ಈ ಪರಿಯ ಯಶಸ್ಸಿಗೆ ಕಾರಣಗಳೆಂದರೆ; ದ್ವಂದ್ವಾರ್ಥದ ಸಂಭಾಷಣೆ ಇಲ್ಲದ, ಐಟಂ ಸಾಂಗ್ ಇಲ್ಲದ, ಕುಟುಂಬ ಸಮೇತ ನೋಡುವ ನಾಟಕವಿದು. ಹಾಸ್ಯವೇ ಜೀವಾಳ. ಎಲ್ಲ ಸಾಮಾಜಿಕ ನಾಟಕಗಳಲ್ಲಿಯ ಹಾಗೆ ಈ ನಾಟಕದಲ್ಲೂ ನಾಯಕ ಧರ್ಮರಾಜಗೌಡ, ಕಾಳೇಗೌಡ ಖಳನಾಯಕ. ಧರ್ಮರಾಜಗೌಡ ಸಾತ್ವಿಕರು. ಅವರಿಗೆ ಕೆಡುಕು ಮಾಡಬೇಕೆಂದು ಕಾಳೇಗೌಡ. ಧರ್ಮರಾಜ ಅವರ ಪುತ್ರ ಅಶೋಕ, ಕಾಳೇಗೌಡ ಮಗಳಾದ ಕಲ್ಪನಾಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಇದನ್ನೇ ನೆಪವಾಗಿಟ್ಟುಕೊಂಡ ಕಾಳೇಗೌಡ, ಧರ್ಮರಾಜನನ್ನು ಅವಮಾನಿಸಿದಾಗ ಹೃದಯಾಘಾತವಾಗಿ ಸಾವನ್ನಪ್ಪುತ್ತಾರೆ. ನಂತರ ಅವರ ಪತ್ನಿ, ಮಗಳನ್ನು ಮನೆಯಿಂದ ಹೊರಹಾಕಲಾಗುತ್ತದೆ. ಬಳಿಕ ನಿಜಾಂಶ ಗೊತ್ತಾಗಿ ಮತ್ತೆ ಮನೆ ಸೇರುತ್ತಾರೆ ಎನ್ನುವಲ್ಲಿಗೆ ನಾಟಕ ಮುಗಿಯುತ್ತದೆ. 

ಮುಖ್ಯವಾಗಿ ಈ ನಾಟಕವನ್ನು ಮುಂದುವರಿಸಿಕೊಂಡು ಹೋಗುವವರು ಕುಂಟ, ಕುರುಡ ಹಾಗೂ ಮೂಕ. ಈ ಮೂವರ ನಡುವೆ ನಡೆಯುವ ಹಾಸ್ಯ ದೃಶ್ಯಗಳೇ ಜೀವಾಳ. ಮೂಕ ತಾನು ಕಂಡ ಕುಂಟನ ತುಂಟಾಟದ ಸಂಗತಿಗಳನ್ನು ಕುರುಡನಿಗೆ ವಿವರಿಸುವ ಬಗೆಯೇ ಪ್ರೇಕ್ಷಕರನ್ನು ನಗಿಸುತ್ತದೆ.  

ಕುರುಡನಾಗಿ ಮಾರುತಿ ಶೆಟ್ಟಿ, ಕುಂಟನಾಗಿ ಚಿಕ್ಕೇಶ್ ಕಲ್ಲೂರು, ಮೂಗನಾಗಿ ಚೇತನ ಪಾಟೀಲ, ರಂಗಿಯಾಗಿ ಸುಜಾತಾ ಗುಬ್ಬಿ/ನೀಲಾ ಜೇವರ್ಗಿ, ಧರ್ಮರಾಜಗೌಡ ನಾಗಿ ಚಂದ್ರೇಗೌಡ ಮಂಡ್ಯ, ಕಾಳೇಗೌಡನಾಗಿ ಶರಣ, ಧರ್ಮರಾಜಗೌಡರ ಮಗನಾಗಿ ಕುಮಾರ, ಧರ್ಮರಾಜರ ಪತ್ನಿಯಾಗಿ ಪ್ರೇಮಾ ಜೇವರ್ಗಿ, ಸೊಸೆಯಾಗಿ ಮಮತಾ ಚಿತ್ರದುರ್ಗ, ಮಗಳಾಗಿ ಪ್ರೇಮಾ ಅಭಿನಯದಿಂದ ನಾಟಕ ಕಳೆಗಟ್ಟುತ್ತದೆ. ಅದರಲ್ಲೂ ಪ್ರೇಮಾ ಜೇವರ್ಗಿ, ಸುಜಾತಾ ಗುಬ್ಬಿ ಹಾಗೂ ನೀಲಾ ಜೇವರ್ಗಿ ಅವರು ನಾಟಕದ ಯಶಸ್ಸಿಗೆ ಕಾರಣರಾಗುತ್ತಾರೆ. ಇವರೊಂದಿಗೆ ಫೆಲಿಕ್ಸ್ ತುಮಕೂರು ಅವರ ಡ್ರಮ್ ವಾದ್ಯ, ಕೀಬೋರ್ಡ್ನಲ್ಲಿ ಪ್ರಮೋದ್ ಸಾಗರ, ರಿದಂ ಪ್ಯಾಡ್ನಲ್ಲಿ ಮುತ್ತಣ್ಣ ವಿಜಾಪುರ ಅವರ ಸಂಗೀತ ಮೆರುಗು ನೀಡುತ್ತದೆ.

ಈ ನಾಟಕದ ಯಶಸ್ಸಿನಿಂದ ಖುಷಿಯಾದ ಜೇವರ್ಗಿ ರಾಜಣ್ಣ ಅವರು ತಮ್ಮದೇ ಯೂಟ್ಯೂಬ್ ಚಾನಲ್ ಆರಂಭಿಸಿ ಈ ನಾಟಕ ಪ್ರಸಾರ ಮಾಡಿದ ಪರಿಣಾಮ 1.31 ಕೋಟಿ ವೀಕ್ಷಕರು ವೀಕ್ಷಿಸಿದ್ದಾರೆ. ಇದರಿಂದ ಅವರಿಗೆ ಆದಾಯವೂ ದೊರಕಿದೆ. ಈ ಮೂಲಕ ಅವರು ಅಪ್ಡೇಟ್ ಆಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಾಟಕದ ರುಚಿಯನ್ನು ಹತ್ತಿಸಿದ್ದಾರೆ.

ಸೋರುವ ರಂಗಮಂದಿರ:
ಬೆಂಗಳೂರಿನ ಗಾಂಧಿನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಿತ್ಯ ಮಧ್ಯಾಹ್ನ 3 ಗಂಟೆಗೆ ಹಾಗೂ ಸಂಜೆ 6:15ಕ್ಕೆ ಈ ನಾಟಕ ಪ್ರಯೋಗಗೊಳ್ಳುತ್ತಿದೆ. ಮಳೆಯ ನಡುವೆಯೂ ಪ್ರೇಕ್ಷಕರು ಅದರಲ್ಲೂ ಉತ್ತರ ಕರ್ನಾಟಕದವರು ಬೆಂಗಳೂರಿಗೆ ಬಂದವರೇ ಹೆಚ್ಚು ಈ ನಾಟಕ ನೋಡುತ್ತಿದ್ದಾರೆ. ಆದರೆ ಈ ರಂಗಮಂದಿರ ಸೋರುತ್ತಿದೆ. ಬೀಳುವ ಮಳೆಯ ಹನಿಗಳ ನಡುವೆ ವಾದ್ಯಗಾರರು ತಮ್ಮ ಪರಿಕರಗಳನ್ನು ಅತ್ತಿತ್ತ ಸರಿಸಿಕೊಂಡು ಸಂಗೀತ ನೀಡಬೇಕಾದ ಅನಿವಾರ್ಯತೆ ಇದೆ. ಬಾಲ್ಕನಿಯಲ್ಲಂತೂ ಮಳೆ ನೀರು ನಿಲ್ಲುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಲು ಕೋರುವೆ. ಮುಖ್ಯವಾಗಿ ಈ ರಂಗಮಂದಿರದ ನಿರ್ವಹಣೆಯ ಕೊರತೆಯೂ ಎದ್ದು ಕಾಣುತ್ತಿದೆ. ಇದು ಕೂಡಾ ಪರಿಹಾರವಾಗಬೇಕಿದೆ. ಏಕೆಂದರೆ ಕಂಪೆನಿ ನಾಟಕಗಳಿಗೆ ಬೆಂಗಳೂರಿನಲ್ಲಿ ಇದೊಂದೇ ರಂಗಮಂದಿರ ಆಶ್ರಯವಾಗಿದೆ. ಇಲ್ಲಿ ಕಲಾವಿದರು ಉಳಿದುಕೊಳ್ಳಲು ಸಾಧ್ಯವಾಗುವುದರಿಂದ ಅಗತ್ಯ ದುರಸ್ತಿಗಳಾಗಬೇಕಿದೆ. ಇದರಿಂದ ಕಂಪೆನಿ ನಾಟಕಗಳು ನಿರಂತರವಾಗಿ ಪ್ರದರ್ಶನ ಕಾಣುವಂತಾಗುತ್ತದೆ.

ಏಕೆಂದರೆ ಈ ಗುಬ್ಬಿ ವೀರಣ್ಣ ರಂಗಮಂದಿರಕ್ಕೆ ತನ್ನದೇ ಆದ ರಂಗಪರಂಪರೆ ಇದೆ. ಚಿಂದೋಡಿ ಲೀಲಾ ಅವರು ನಾದೇ ನರಸಿಂಹಮೂರ್ತಿ ಅವರ ‘ಪೊಲೀಸನ ಮಗಳು’ ನಾಟಕದ ಮರುಪ್ರದರ್ಶನಗಳನ್ನು 1994ರಲ್ಲಿ ಬೆಂಗಳೂರಿನಲ್ಲಿ ಶುರು ಮಾಡಿದ್ದು ಇದೇ ರಂಗಮಂದಿರದಿಂದ. ಆಗ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ ಕೊಡಗನೂರು ಜಯಕುಮಾರ್ ಅವರು ವರನಟ ಡಾ.ರಾಜಕುಮಾರ್ ಅವರ ಹಾಗೇ ಅಭಿನಯಿಸುತ್ತಿದ್ದರು. ಈ ನಾಟಕದ ನೂರನೇ ಪ್ರಯೋಗಕ್ಕೆ ಡಾ.ರಾಜಕುಮಾರ್ ಅವರು ಅತಿಥಿಯಾಗಿ ಆಗಮಿಸಿದ್ದರು. ಸಮಾರಂಭದ ನಂತರ ಈ ನಾಟಕ ನೋಡುತ್ತಿದ್ದ ಡಾ.ರಾಜಕುಮಾರ್ ಅವರಿಗೆ ತಮ್ಮ ಪಾತ್ರದ ಹಾಗೆ ನಿರ್ವಹಿಸುತ್ತಿದ್ದ ಜಯಕುಮಾರ್ ಅವರ ಅಭಿನಯಕ್ಕೆ ಬೆರಗಾಗಿದ್ದರು. 300ಕ್ಕೂ ಅಧಿಕ ಪ್ರಯೋಗಗಳವರೆಗೆ ಜಯಕುಮಾರ್ ಅವರೇ ಪೊಲೀಸ್  ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದರು. ನಂತರ ದಾವಣಗೆರೆಯ ಮೌಲಾಸಾಬ್ ನದಾಫ್ ಅವರು ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಜೀವ ತುಂಬಿದ್ದರು. ಈ ನಾಟಕದ 500, 1,000 ಪ್ರಯೋಗಗಳ ಸಮಾರಂಭಕ್ಕೂ ಡಾ.ರಾಜಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು.  

ಚಿಂದೋಡಿ ಲೀಲಾ ಅವರ ನಂತರ ಬಿ.ಆರ್.ಅರಿಶಿಣಗೋಡಿ ಅವರ ಕಮತಗಿಯ ಶ್ರೀ ಹುಚ್ಚೇಶ್ವರ ನಾಟ್ಯ ಸಂಘವು ಎರಡು ವರ್ಷಗಳವರೆಗೆ ಮುಂದುವರಿಯಿತು. ಈ ಕಂಪೆನಿಯ ಜನಪ್ರಿಯವಾದ ‘ಬಸ್ ಕಂಡಕ್ಟರ್’ ನಾಟಕದಲ್ಲಿ ಸಿನೆಮಾ ನಟ ಬಿ.ಕೆ.ಶಂಕರ್ ಅವರು ಕಂಡಕ್ಟರ್ ಪಾತ್ರವನ್ನು, ಮಾಲತಿಶ್ರೀ ಮೈಸೂರು ಅವರು ಖಾನಾವಳಿ ಚೆನ್ನಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದು ನೂರಕ್ಕೂ ಅಧಿಕ ಪ್ರದರ್ಶನ ಕಂಡಿತ್ತು. ಬಳಿಕ ಗುಡಗೇರಿ ಬಸವರಾಜ ಅವರ ಸಂಗಮೇಶ್ವರ ನಾಟ್ಯ ಸಂಘವು ಮುಕ್ಕಾಮು ಮಾಡಿತ್ತು. ಇವರ ನಂತರ ಪ್ರೇಮಾ ಗುಳೇದಗುಡ್ಡ ಆಶಾಪುರ ಕಂಪೆನಿ, ವೀರಯ್ಯಸ್ವಾಮಿ ಅವರ ಮಂಡಲಗಿರಿಯ ತೋಂಟದಾರ್ಯ ನಾಟ್ಯ ಸಂಘ, ಮಾಲತಿ ಸುಧೀರ್ ಅವರ ಕರ್ನಾಟಕ ಕಲಾವೈಭವ ನಾಟ್ಯ ಸಂಘ ಕ್ಯಾಂಪ್ ಮಾಡಿತು. ಈ ಕಂಪೆನಿಯ ‘ಭೂಮಿ ತೂಕದ ಹೆಣ್ಣು’ ನಾಟಕದಲ್ಲಿ ಮಾಲತಿ ಅವರ ಪಾತ್ರ ಜನಪ್ರಿಯವಾಗಿತ್ತು. ಈ ನಾಟಕ 150ಕ್ಕೂ ಅಧಿಕ ಪ್ರಯೋಗಗಳನ್ನು ಕಂಡಿತು. ಇವರಾದ ಮೇಲೆ ಚಿಂದೋಡಿ ಲೀಲಾ ಅವರ ಅಳಿಯ ಚಿಂದೋಡಿ ಶ್ರೀಕಂಠೇಶ ಅವರ ದಾವಣಗೆರೆಯ ಕೆಬಿಆರ್ ಡ್ರಾಮಾ ಕಂಪೆನಿ, ಚಿತ್ರದುರ್ಗದ ಓಬಳೇಶ್ ಅವರ ಕುಮಾರೇಶ್ವರ ನಾಟ್ಯ ಸಂಘ, ಮತ್ತೆ ಮಾಲತಿ ಸುಧೀರ್ ಅವರ ಕಂಪೆನಿಗಳು ನಾಟಕಗಳನ್ನಾಡಿವೆ.