ಕುವೆಂಪು ವಿವಿ ಕುಲಪತಿ ಹಾಗೂ ಇತರ ಇಬ್ಬರ ವಿರುದ್ದ ತನಿಖೆಗೆ ರಾಜ್ಯ ಸರ್ಕಾರ ಆದೇಶ

ನಿವೃತ್ತ ನ್ಯಾಯಾದೀಶರೊಬ್ಬರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆ; 20 ದಿನದಲ್ಲಿ ವರದಿ ಸಲ್ಲಿಸಲು ಆದೇಶ

Update: 2023-06-02 12:27 GMT

ಶಿವಮೊಗ್ಗ ಜೂನ್02: ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕುಲಸಚಿವ(ಪರೀಕ್ಷಾಂಗ)ಹಾಗೂ  ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ನಿರ್ದೇಶಕರ ವಿರುದ್ದ ತನಿಖೆಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.


ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಮತ್ತು ವಿದ್ಯಾ ವಿಷಯಕ ಪರಿಷತ್ ನಿರ್ಣಯಕ್ಕೆ ವಿರುದ್ಧವಾಗಿ 2019ರಲ್ಲಿ ದೂರ ಶಿಕ್ಷಣದ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕ ಮತ್ತು ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಲಾಗಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ಸಿಂಡಿಕೇಟ್ ಸದಸ್ಯರಾದ ಸಂತೋಷ್ ಬಳ್ಳಕೆರೆ ಹಾಗೂ ಆರ್‌ಟಿಐ ಕಾರ್ಯಕರ್ತ ಗಜಾನನ ದಾಸ್ ಕೆ.ಜಿ ಹಾಗೂ ಎಸ್.ಎಂ ಮಹಾದೇವಪ್ಪ ಎಂಬವರು ದೂರು ನೀಡಿದ್ದರು.


ಈ ಹಿನ್ನಲೆಯಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಥಮಿಕ ತನಿಖೆಯಲ್ಲಿ ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕುವೆಂಪು ವಿವಿ ಕುಲಪತಿ, ಕುಲಸಚಿವ(ಮೌಲ್ಯಮಾಪನ) ಹಾಗೂ ದೂರ ಶಕ್ಷಣ ನಿರ್ದೇಶನಾಲಯದ ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ವಿಶ್ವವಿದ್ಯಾಲಯಕ್ಕೆ ಆದೇಶಿಸಿತ್ತು.
ಅದರಂತೆ ರಾಜ್ಯ ಪಾಲರ ಅಧೀನ ಕಾರ್ಯದರ್ಶಿ ಅವರು ನಿವೃತ್ತ ನ್ಯಾಯಾದೀಶರೊಬ್ಬರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.

ಶಿವಮೊಗ್ಗದ ನಿವೃತ್ತ ನ್ಯಾಯಾಧೀಶರಾದ  ರವೀಂದ್ರನಾಥ್ ಹೆಚ್.ಬಿ ಅಧ್ಯಕ್ಷತೆಯಲ್ಲಿ  ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಕಾರ್ಯನಿರ್ವಾಹಕ ನಿರ್ದೇಶಕರು,ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರು(ಆಡಳಿತ) ಇವರುಗಳನ್ನೊಳಗೊಂಡ ತನಿಖಾ ಸಮಿಗೆ 20 ದಿನದಲ್ಲಿ ಸರ್ಕಾರಕ್ಕೆ ವರದಿ ನೀಡುವಂತೆ ಆದೇಶಿಸಲಾಗಿದೆ.


ತನಿಖಾ ಸಮಿತಿಯು ಕುವೆಂಪು ವಿಶ್ವವಿದ್ಯಾಲಯದ  ಕುಲಪತಿಗಳು, ಕುಲಸಚಿವರು(ಪರೀಕ್ಷಾಂಗ) ಹಾಗೂ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರ  ವಿರುದ್ದದ ದೂರುಗಳ ಕುರಿತು ಸತ್ಯಾಸತ್ಯತೆ ಕುರಿತು ಪ್ರಾಥಮಿಕ ತನಿಖೆ ನಡೆಸಿ ತನಿಖಾ ವರದಿಯನ್ನು ೨೦ ದಿವಸದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು.ತನಿಖಾ ಸಮಿತಿಗೆ  ಅಗತ್ಯವಿರುವ  ಕಛೇರಿ,ಪಿಠೋಪಕರಣ,ಪೂರಕ ಸಿಬ್ಬಂದಿ ಮತ್ತು  ಲೇಖನ ಸಾಮಾಗ್ರಿಗಳನ್ನು ಕುವೆಂಪು ವಿಶ್ವವಿದ್ಯಾಲಯವೇ ಭರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.


ತನಿಖಾ ಸಮಿತಿಯ ಅಧ್ಯಕ್ಷರಿಗೆ ಭತ್ಯೆ,ಪ್ರಯಾಣದ ಭತ್ಯೆ,ದಿನ ಭತ್ಯೆಯನ್ನು ಕುವೆಂಪು ವಿಶ್ವವಿದ್ಯಾಲಯವೇ ಪಾವತಿಸತಕ್ಕದ್ದು, ಈ ಬಗ್ಗೆ ಕಾನೂನು ಇಲಾಖೆಯೊಂದಿಗೆ ಸಮಾಲೋಚಿಸಿ ಪ್ರತ್ಯೇಕ ಆದೇಶ ಹೊರಡಿಸಲಾಗುವುದು. ತನಿಖಾ ಸಮಿತಿಗೆ ವಸತಿ ಮತ್ತು ವಾಹನ ಸೌಕರ್ಯವನ್ನು ಕವೆಂಪು ವಿಶ್ವವಿದ್ಯಾಲಯವೇ ಒದಗಿಸುವಂತೆ ಆದೇಶಿಸಲಾಗಿದೆ.

Similar News