ಕುವೆಂಪು ವಿ ವಿಯಲ್ಲಿ ಭ್ರಷ್ಟಾಚಾರ ಪ್ರಕರಣ; ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ: ಬಳ್ಳೇಕೆರೆ ಸಂತೋಷ್

Update: 2023-06-02 10:27 GMT

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆದೇಶಿಸಿ ಸಮಿತಿ ರಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕುವೆಂಪು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ದೂರುದಾರರಾದ ಬಳ್ಳೇಕೆರೆ ಸಂತೋಷ್ ಸ್ವಾಗತಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಮತ್ತು ವಿದ್ಯಾ ವಿಷಯಕ ಪರಿಷತ್ ನಿರ್ಣಯಕ್ಕೆ ವಿರುದ್ಧವಾಗಿ 2019 ರಲ್ಲಿ ದೂರ ಶಿಕ್ಷಣದ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕ ಮತ್ತು ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಲಾಗಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿತ್ತು ಎಂದು ಹೇಳಿದರು. 

ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಥಮಿಕ ತನಿಖೆಯಲ್ಲಿ ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕುವೆಂಪು ವಿವಿ ಕುಲಪತಿ, ಕುಲಸಚಿವ(ಮೌಲ್ಯಮಾಪನ) ಹಾಗೂ ದೂರ  ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ವಿಶ್ವವಿದ್ಯಾಲಯಕ್ಕೆ ಆದೇಶ ನೀಡಲಾಗಿದೆ ಎಂದರು.

ಕುಲಸಚಿವರ ಸೇವಾವಧಿ ಇನ್ನು 2 ತಿಂಗಳು ಮಾತ್ರ ಉಳಿದಿದೆ. ಹಾಗಾಗಿ ರಾಜ್ಯ ಸರ್ಕಾರವು ಶೀಘ್ರದಲ್ಲೇ ಇವರ  ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಳ್ಳೇಕೆರೆ ಸಂತೋಷ್ ಒತ್ತಾಯಿಸಿದ್ದಾರೆ.

Similar News