ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ, ಕೊಡದಿದ್ದರೆ...: ಬಿಜೆಪಿ ಸಂಸದ ಸಂಗಣ್ಣ ಕರಡಿ ಹೇಳಿದ್ದೇನು?

Update: 2023-06-02 17:34 GMT

ಕೊಪ್ಪಳ, ಜೂ. 2: ‘ಪಕ್ಷದ ಹೈಕಮಾಂಡ್ ಕೊಪ್ಪಳ ಕ್ಷೇತ್ರದ ಲೋಕಸಭೆಗೆ ಟಿಕೆಟ್ ನೀಡುವ ಕುರಿತು ಯಾವುದೇ ತೀರ್ಮಾನ ಕೈಗೊಂಡರೂ ನಾನು ಅದನ್ನು ಸ್ವಾಗತಿಸುತ್ತೇನೆ. ಈ ಕುರಿತು ಇದುವರೆಗೂ ನಮ್ಮ ಬಳಿ ಯಾರೂ, ಏನೂ ಚರ್ಚೆ ಮಾಡಿಲ್ಲ. ಪಕ್ಷ ಒಂದು ವೇಳೆ ಇನ್ನೊಂದು ಅವಧಿಗೆ ನೀವೇ ಸ್ಪರ್ಧಿಸಿ ಎಂದರೆ ಸ್ಪರ್ಧಿಸುವೆ, ಬೇಡ ಎಂದರೆ ಸ್ಪರ್ಧಿಸುವುದಿಲ್ಲ’ ಎಂದು ಸಂಸದ ಸಂಗಣ್ಣ ಕರಡಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಿನ್ನೆ ಪಾರ್ಲಿಮೆಂಟರಿ ಬೋರ್ಡ್ ಸಭೆ ಕರೆದಿದ್ದರು. ಆದರೆ, ಈ ಸಭೆಯಲ್ಲಿಯೂ ಈ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಹೈಕಮಾಂಡ್ ಆಲೋಚನೆ ಮಾಡಿರಬಹುದು. ನಾನು ಇಂದಿನ ಪತ್ರಿಕೆಯನ್ನು ಗಮನಿಸಿದ್ದೇನೆ. ಪಕ್ಷ ಏನೇ ತೀರ್ಮಾನ ತೆಗೆದುಕೊಂಡರೂ ನಮ್ಮ ವಿರೋಧವಿಲ್ಲ’ ಎಂದು ಸ್ಪಷ್ಟಣೆ ನೀಡಿದರು.

‘ಪಕ್ಷ ಸ್ಪರ್ಧೆ ಮಾಡುವಂತೆ ಹೇಳಿದರೆ ಸ್ಪರ್ಧಿಸುವೆ, ಇಲ್ಲವೆಂದರೆ ಇಲ್ಲ. ನಮ್ಮದು ನಿವೃತ್ತಿಯಾಗುವ ಸಮಯ. ನಮಗೂ ರಾಜಕಾರಣದಿಂದ ಬಿಡುಗಡೆ ಸಿಗುತ್ತದೆ ಎಂದು ಭಾವಿಸಿಕೊಳ್ಳುತ್ತೇವೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಟಿಕೆಟ್ ಕೊಟ್ಟರೂ ಸರಿ, ಕೊಡದಿದ್ದರೂ ಸರಿ. ಟಿಕೆಟ್ ನೀಡದಿದ್ದರೆ ಸಕ್ರಿಯ ರಾಜಕಾರಣದಲ್ಲಿದ್ದು ನಮ್ಮಿಂದ ಏನು ಮಾಡಲು ಸಾಧ್ಯವಾಗುತ್ತದೋ ಅದನ್ನು ಮಾಡುತ್ತೇನೆ’ ಎಂದು ಸಂಗಣ್ಣ ಕರಡಿ ವಿವರಣೆ ನೀಡಿದರು.

Similar News