ಬೆಂಗಳೂರು: ಆನೆ ದಾಳಿಯಿಂದ 2 ಸಾವು: ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ

ಬ್ಯಾರಿಕೇಡ್ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ

Update: 2023-06-03 07:48 GMT

ಬೆಂಗಳೂರು, ಜೂ.3: ಇಂದು ನಸುಕಿನಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ವಿರೂಪಾಕ್ಷ ಪುರ ಹೋಬಳಿ ವಿರೂಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ವೀರಭದ್ರ (40) ಮತ್ತು ಮೊನ್ನೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಮಳೆಯೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ರೈತ ರವಿ (40) ಎಂಬುವರು ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಯಾವುದೇ ವ್ಯಕ್ತಿ ಕಾಡುಪ್ರಾಣಿಗಳ ದಾಳಿಯಿಂದ ಸಾವಿಗೀಡಾಗಬಾರದು. ಇನ್ನು ಮುಂದೆ ಪ್ರಾಣಿಗಳ ಮತ್ತು ಮಾನವನ ಸಂಘರ್ಷದಿಂದ ಹೆಚ್ಚಿನ ಜೀವ ಹಾನಿ ಆಗದ ರೀತಿಯಲ್ಲಿ ಕ್ರಮ ವಹಿಸಲು ಮತ್ತು ನಾಡಿಗೆ ದಾಳಿ ಇಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಮೃತರಾದ ವೀರಭದ್ರ ಮತ್ತು  ರವಿಯವರ ಕುಟುಂಬಕ್ಕೆ ನಿಯಮಾನುಸಾರ 15 ಲಕ್ಷ ರೂ. ಪರಿಹಾರವನ್ನು ಒದಗಿಸಲಾಗುವುದು. ಯಾವುದೇ ಪರಿಹಾರ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ಅವರ ಕುಟುಂಬಕ್ಕೆ ಆಸರೆ, ಆಧಾರವಾಗುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ತಕ್ಷಣವೇ ಎಲ್ಲಿ ಹೆಚ್ಚಿನ ಆನೆಗಳ ದಾಳಿ ಪ್ರದೇಶವಿದೆಯೋ ಅಲ್ಲಿ ರೈಲ್ವೆ ಬ್ಯಾರಿಕೇಡ್  ನಿರ್ಮಿಸಿ ಇಂತಹ ಅನಾಹುತಗಳನ್ನು ತಪ್ಪಿಸುವುದು ಅಗತ್ಯವಾಗಿದೆ.  ಇದಕ್ಕೆ ಮುಂಬರುವ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮೃತರಿಬ್ಬರ ಕುಟುಂಬಕ್ಕೆ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಚಿವ ಈಶ್ವರ ಖಂಡ್ರೆ ಪ್ರಾರ್ಥಿಸಿದ್ದಾರೆ.

Similar News