ಬಿಜೆಪಿ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲಿ: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

"ಯೋಜನೆಯ ಫಲ ಬೇಡವಾದರೆ ತ್ಯಜಿಸಲು ಅವಕಾಶವಿದೆ"

Update: 2023-06-03 10:30 GMT

ಬೆಂಗಳೂರು: ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆ ತಗ್ಗಿಸಲು ಕಾಂಗ್ರೆಸ್ ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನು ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಇರುವುದೇ ಟೀಕೆ ಮಾಡಲು, ಅವರು ಟೀಕೆ ಮಾಡಲಿ. ಅವರು ಟೀಕೆ ಮಾಡುವ ಮೊದಲು ಪ್ರಧಾನಮಂತ್ರಿಗಳು ಈ ಹಿಂದೆ ಹೇಳಿದಂತೆ ವಿದೇಶದಿಂದ ಕಪ್ಪು ಹಣ ತರಲಿ. ಎಲ್ಲರ ಖಾತೆಗೆ 15 ಲಕ್ಷ ಹಾಕಲಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡಲಿ. ರೈತರ ಆದಾಯ ಡಬಲ್ ಮಾಡಲಿ. ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಪರೀಕ್ಷೆ ಎದುರಾಗುತ್ತಿದ್ದು, ಅದರಲ್ಲಿ ಅವರು ಪಾಸ್ ಆಗಲು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

ಬಾಡಿಗೆ ಮನೆಯಲ್ಲಿರುವವರಿಗೆ ಗೃಹಜ್ಯೋತಿ ಯೋಜನೆ ಫಲಾನುಭವದ ಬಗ್ಗೆ ಕೇಳಿದ ಪ್ರಶ್ನೆಗೆ, "ಬಾಡಿಗೆ ಮನೆಯಲ್ಲಿರುವವರು ಬಡವರಲ್ಲವೇ. ಅವರಿಗೂ ಈ ಯೋಜನೆಯ ಫಲ ಸಿಗಬೇಕು.  ಜನರು ಬಾಡಿಗೆ ಅಥವಾ ಸ್ವಂತ ಮನೆಯಲ್ಲಾದರೂ ಇರಲಿ ಈ ಯೋಜನೆಯ ಫಲ ಅವರಿಗೆ ಸಿಗಲಿದೆ. ನಮ್ಮ ಮಾತು 200 ಯೂನಿಟ್ ವರೆಗೂ ಉಚಿತ ಎಂದು ಹೇಳಿದ್ದೆವು ಅದರಂತೆ ನೀಡಿದ್ದೇವೆ. ಇಷ್ಟು ದಿನಗಳ ಕಾಲ ನೂರು ಯೂನಿಟ್ ಬಳಸುತ್ತಿದ್ದವರು. ಏಕಾಏಕಿ 200 ಯುನಿಟ್ ಬಳಸಿದರೆ ಅದಕ್ಕೆ ಅವಕಾಶವಿಲ್ಲ" ಎಂದು ತಿಳಿದರು.

ಯೋಜನೆಯ ಫಲ ತ್ಯಜಿಸಲು ಅವಕಾಶ ಕಲ್ಪಿಸುವಿರಾ ಎಂದು ಕೇಳಿದಾಗ, "ಖಂಡಿತವಾಗಿಯೂ ಇದಕ್ಕೆ ಅವಕಾಶ ಕಲ್ಪಿಸುತ್ತೇವೆ. ಒಂದು ವೇಳೆ ಯಾರಿಗಾದರೂ ಈ ಯೋಜನೆ ಫಲ ಬೇಡವಾದರೆ ಅದನ್ನು ಅವರು ತ್ಯಜಿಸಿ ವಿದ್ಯುತ್ ಬಿಲ್ ಕಟ್ಟಬಹುದು. ಅನೇಕ ಅಧಿಕಾರಿಗಳು, ಮಾಧ್ಯಮ ಮುಖ್ಯಸ್ಥರು, ಸರ್ಕಾರಿ ನೌಕರರು ಈ ಗೃಹಜೋತಿ ಯೋಜನೆಯ ಫಲ ಬೇಡ ಎಂದು ಪತ್ರ ಬರೆದಿದ್ದು, ಮತ್ತೆ ಕೆಲವರು ಖುದ್ದಾಗಿ ಹೇಳಿದ್ದಾರೆ. ಯಾರಿಗೆಲ್ಲ ಈ ಯೋಜನೆಯ ಲಾಭ ಬೇಡವೋ ಅವರಿಗೆ ಇದನ್ನು ತ್ಯಜಿಸಲು ಅವಕಾಶ ನೀಡಲಾಗುವುದು. ಅದಕ್ಕಾಗಿ ಈ ಯೋಜನೆಗಳ ಫಲ ಪಡೆಯಲು ಅರ್ಜಿಯನ್ನು ಕರೆಯಲಾಗಿದೆ. ಕೇಂದ್ರ ಸರ್ಕಾರ ಅಡುಗೆ ಅನಿಲ ಸಬ್ಸಿಡಿ ತ್ಯಜಿಸಲು ಕರೆ ಕೊಟ್ಟಾಗ ಅನೇಕರು ಅದಕ್ಕೆ ಸ್ಪಂದಿಸಿ ಸಬ್ಸಿಡಿಯನ್ನು ಕೈಬಿಟ್ಟಿದ್ದರು. ಅದೇ ರೀತಿ ಇಲ್ಲಿಯೂ ಯೋಜನೆ ಲಾಭ ತ್ಯಜಿಸಬಹುದು" ಎಂದು ತಿಳಿಸಿದರು.

ಕಾಂಗ್ರೆಸ್ ನವರು ಹಣೆಗೆ ತುಪ್ಪ ಸವರುತ್ತಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಟೀಕೆ ಕುರಿತು ಕೇಳಿದಾಗ, "ಕುಮಾರಣ್ಣ ದೊಡ್ಡವರು ಅವರಿಗೆ ಬಹಳ ಅನುಭವವಿದೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ನನ್ನ ಕರ್ತವ್ಯ ಮಾಡುತ್ತೇನೆ ಅವರು ಅವರ ಕೆಲಸ ಮಾಡಲಿ" ಎಂದು ಹೇಳಿದರು.

Similar News