ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕೇ ಬೇಡವೇ ಎಂಬುದು ಚರ್ಚಿಸಿ ತೀರ್ಮಾನ: ಸಚಿವ ಕೆ.ವೆಂಕಟೇಶ್

Update: 2023-06-03 10:28 GMT

ಮೈಸೂರು, ಜೂ.3 ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕೇ ಬೇಡವೇ ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಮ್ಮೆ, ಕೋಣಗಳನ್ನು ಕಡಿಯುವುದಾದರೆ ಹಸುವನ್ನು ಏಕೆ ಕಡಿಯಬಾರದು. ಹಾಗಾಗಿ ಈ ಬಗ್ಗೆ ಚರ್ಚೆಗಳಾಗುತ್ತಿದ್ದು ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕೇ ಬೇಡವೇ ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ನನ್ನ ಮನೆಯಲ್ಲೇ ನಾಲ್ಕು ಹಸುಗಳನ್ನು ಸಾಕಿದ್ದೆವು. ಅದರಲ್ಲಿ ಒಂದು ಸತ್ತು ಹೋಯಿತು. ಆಗ ಅದನ್ನು ಊಳಲು 25 ಜನ ಬಂದರೂ ಹಾಗಲಿಲ್ಲ. ನಂತರ ಜೆಸಿಬಿ ತರಿಸಿ ಊಳಬೇಕಾಯಿತು.  ಹಾಗಾಗಿ ಗೋ ಹತ್ಯೆ ನಿಷೇಧ ಕಾನೂನಿನ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಒಟ್ಟಿನಲ್ಲಿ ರೈತರಿಗೆ ಅನುಕೂಲವಾಗುವ ರೀತಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಹೈನುಗಾರಿಕೆ ಬಲಿಷ್ಠಗೊಂಡಿದ್ದು, ಜನ ಹೆಚ್ಚು ಹೆಚ್ಚು ಹೈನುಗಾರಿಕೆಗೆ ಅವಲಂಬಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಹೈನುಗಳಿಗೆ ಸೂಕ್ತ ಚಿಕಿತ್ಸೆಯ ಅಗತ್ಯತೆ ಇದೆ. ಪಶು ಸಂಗೋಪನಾ ಇಲಾಖೆ ಬಹಳ ದೊಡ್ಡ ಇಲಾಖೆ.‌ರಾಜ್ಯದಲ್ಲಿ 4600 ಪಶು ವೈದ್ಯ ಆಸ್ಪತ್ರೆಗಳಿವೆ. ಇಲ್ಲಿ ವೈದ್ಯರು ಸೇರಿದಂತೆ 18 ಸಾವಿರ ಸಿಬ್ಬಂದಿಯ ಾವಶ್ಯಕತೆ ಇದೆ. ಆದರೆ ನಮಗೆ ವೈದ್ಯರು ಸೇರಿದಂತೆ 9 ಸಾವಿರ ಸಿಬ್ಬಂದಿಯಷ್ಟು ಮಾತ್ರ ಇದ್ದಾರೆ. ಇನ್ನು 1600 ವೈದ್ಯರ ಕೊರತೆ ಇದೆ. ಇದನ್ನು ಹಂತ ಹಂತವಾಗಿ ತುಂಬುವ ಕೆಲಸವನ್ನು ಮಾಡುತ್ತೇವೆ ಎಂದರು.

ರಾಜ್ಯಕ್ಕೆ ಅಮುಲ್ ಬಂದಿಲ್ಲ, ಅಮುಲ್ ನಿಂದ ನಂದಿನಿಗೆ ತೊಂದರೆ ಆಗಿಲ್ಲ, ನಂದಿನಿ ಉತ್ಪನ್ನಗಳಿಗೆ ಹೆಚ್ಚು ಉತ್ತೇಜನ ಕೊಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಸು ದತ್ತು ಯೋಜನೆ ಏನಾಗಿದೆ ಎಂದು  ಪರಿಶೀಲನೆ ನಡೆಸುತ್ತೇವೆ. ಗೋ ಶಾಲೆ ನಿರ್ವಹಣೆಗೆ ನಮ್ಮಲ್ಲಿ ಸಾಕಷ್ಟು ಹಣ ಇದೆ. ಆದರೆ ಅದು ಸರಿಯಾಗಿ ನಿರ್ವಹಣೆಯಾಗಿಲ್ಲ.‌ ಮುಂದಿನ ದಿನಗಳಲ್ಲಿ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತೇವೆ ಎಂದರು.

 ಹಸುಗಳು ಸೇರಿದಂತೆ ಇತರ ದೊಡ್ಡ ಪ್ರಾಣಿಗಳಿಗೆ ತೊಂದರೆಯಾದಾಗ ಅನಿಮಲ್ ಲಿಫ್ಟಿಂಗ್ ಕ್ರೇನ್ ಬಳಸಿ ಅವುಗಳನ್ನು ರಕ್ಷಿಸುತ್ತೇವೆ. ಈ ವ್ಯವಸ್ಥೆ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಇರಬೇಕಿಲ್ಲ. ತಾಲ್ಲೂಕಿಗೆ ಒಂದು ಇದ್ದರೆ ಸಾಕು. ಅವುಗಳ ಸ್ಥಿತಿಗತಿ ಏನಾಗಿದೆ ಎಂದು ತಿಳಿದುಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರೇಷ್ಮೆ ಬೆಳೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ರೇಷ್ಮೆ ಬೆಳೆ ಬೆಳೆಯುವ ರೈತರೊಂದಿಗೆ ಚರ್ಚಿಸಿ ಅವರಿಗೆ ಬೇಕಿರುವ ಅನುಕೂಲಗಳನ್ನು ಮಾಡಲಾಗುವುದು.‌ರೇಷ್ಮೆಗೆ ಬೆಲೆ ಕುಸಿತಗೊಂಡಿದೆ ಎಂಬ ವಿಚಾರ ತಿಳಿದ ತಕ್ಷಣ ರೇಷ್ಮೆ ಮಾರುಕಟ್ಟೆ ಬೋರ್ಡ್ ಮೂಲಕವೇ ಖರೀದಿಗೆ ಮುಂದಾಗಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕಾಂಗ್ರೆಸ್ ಮುಖಂಡರುಗಳಾದ  ಬಿ.ಎಂ.ರಾಮು, ಈಶ್ವರ್ ಚಕ್ಕಡಿ, ಶಿವಣ್ಣ, ಮಾಧ್ಯಮ ವಕ್ತಾರ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Similar News