ಮನೆಯೊಡತಿ ಹೆಸರಲ್ಲಿ ಗಂಡಸರ ಬ್ಯಾಂಕ್ ಖಾತೆ ಕೊಟ್ಟರೆ ಆ ಅರ್ಜಿ ಸ್ವೀಕೃತವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

''ಗೃಹಲಕ್ಷ್ಮಿ ಹಣ ಬಂತೋ ಇಲ್ವೋ ಅಂತ ನನಗೆ ಪತ್ರ ಬರೀರಿ...''

Update: 2023-06-03 13:57 GMT

ಬೆಂಗಳೂರು, ಜೂ.3: ‘ಈಗ ನಾನು, ಸಿದ್ದರಾಮಯ್ಯ, ಸಂಪುಟ ಸಚಿವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಜನತೆಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಿದೆ. ದೇಶ ಹಾಗೂ ರಾಜ್ಯದ ಇತಿಹಾಸದಲ್ಲಿ ಒಂದೆ ದಿನ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನ ನಿನ್ನೆ ಕೈಗೊಳ್ಳಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಶನಿವಾರ ಕನಕಪುರ ಕ್ಷೇತ್ರದ ಕಲ್ಲಹಳ್ಳಿ, ಶಿವನಹಳ್ಳಿ, ಹಾರೋಹಳ್ಳಿಯಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ನವರ ದುಃಖ, ದುಗುಡ ಹೆಚ್ಚಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಜೂ.15ರಿಂದ ಆನ್ ಲೈನ್ ಹಾಗೂ ಆಫ್ ಲೈನ್ ಅರ್ಜಿ ಕರೆಯಲಾಗುವುದು ಎಂದರು.

‘ನೀವು ಮನೆ ಮನೆಗೆ ಹೋಗಿ ಅವರ ಮಾಹಿತಿ, ದಾಖಲೆ ಸಂಗ್ರಹಿಸಿ ಅರ್ಜಿ ತುಂಬಿ ಅವರಿಗೆ ಈ ಯೋಜನೆ ಸಿಗುವಂತೆ ಮಾಡಬೇಕು. ಮನೆಯೊಡತಿ ಯಾರು ಎಂದು ಕುಟುಂಬದವರೆ ತೀರ್ಮಾನ ಮಾಡಬೇಕು. ಒಂದು ವೇಳೆ ಮನೆಯೊಡತಿ ಹೆಸರಲ್ಲಿ ಗಂಡಸರ ಬ್ಯಾಂಕ್ ಖಾತೆ ಕೊಟ್ಟರೆ ಆ ಅರ್ಜಿ ಊರ್ಜಿತವಾಗುವುದಿಲ್ಲ. ಹೀಗಾಗಿ ಮಹಿಳೆಯರ ಬ್ಯಾಂಕ್ ಖಾತೆಯನ್ನೆ ಪಡೆಯಿರಿ. ಗೃಹಲಕ್ಷ್ಮಿ ಹಣ ಬಂತೋ ಇಲ್ವೋ ಅಂತ ನನಗೆ ಪತ್ರ ಬರೀರಿ ಎಂದು ಅವರು ತಿಳಿಸಿದರು.

ಜೂ.11ರಿಂದ ಶಕ್ತಿ ಯೋಜನೆ ಜಾರಿಯಾಗಲಿದ್ದು, ಮಹಿಳೆಯರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಚುನಾವಣೆಯಲ್ಲಿ ನಾನು ಹೆಚ್ಚು ಪ್ರಚಾರ ಮಾಡದೆ ಇದ್ದರೂ ನಿಮಗೆ ನೀವೆ ಅಭ್ಯರ್ಥಿಯಾಗಿ ಮತ ನೀಡಿದ್ದೀರಿ. 1.23 ಲಕ್ಷ ಮತಗಳ ಅಂತರದ ದಾಖಲೆಯ ಜಯ ತಂದುಕೊಟ್ಟಿದ್ದೀರಿ. ಆಮೂಲಕ ನನ್ನನ್ನು ಮಗ, ಸೋದರನಂತೆ ಹರಸಿ ಬೆಳೆಸಿದ್ದೀರಿ ಎಂದು ಶಿವಕುಮಾರ್ ಕೃತಜ್ಞತೆ ಸಲ್ಲಿಸಿದರು.

ಅಧಿಕಾರದ ಮದ ನನ್ನ ತಲೆಗೆ ಏರುವುದಿಲ್ಲ. ನಿಮ್ಮ ಋಣ ತೀರಿಸಿ, ಯಾವ ರೀತಿ ಸೇವೆ ಮಾಡಬೇಕು ಎಂದು ಅನೇಕ ನಾಯಕರಿಂದ ಸಲಹೆ ಪಡೆಯುತ್ತಿದ್ದೇನೆ. ಕನಕಪುರ ಕ್ಷೇತ್ರದ ಅಭಿವೃದ್ಧಿ ಹಾಗೂ ಮಾದರಿ ಕ್ಷೇತ್ರ ಮಾಡಲು ತೀರ್ಮಾನಿಸಿದ್ದೇನೆ. ಈ ಹಿಂದೆ ಈ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು ಎಂದು ಅವರು ಹೇಳಿದರು.

ನನ್ನ ತಾಲೂಕಿನಲ್ಲಿ ಆಸ್ಪತ್ರೆ ನೀಡುವುದು ಈ ಕ್ಷೇತ್ರಕ್ಕೆ ನನ್ನ ಮೊದಲ ಕಾರ್ಯಕ್ರಮ. ಇಲ್ಲಿನ ಜನ ವಿದ್ಯೆ ಹಾಗೂ ಆರೋಗ್ಯ ಸೌಲಭ್ಯಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುವುದು ನನ್ನ ಗುರಿ. ಕನಕಪುರ ರಸ್ತೆ ಅಭಿವೃದ್ದಿಗೆ ನಾನು ಹಾಗೂ ಸಂಸದ ಡಿ.ಕೆ.ಸುರೇಶ್ ಗುತ್ತಿಗೆದಾರರನ್ನು ಭೇಟಿ ಮಾಡಿ ಈ ಕಾಮಗಾರಿ ಮುಕ್ತಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ನಾನು ಈ ಕ್ಷೇತ್ರದ ಎಲ್ಲ ಜನರ ಜೇಬಿಗೆ ಹಣ ಹಾಕಲು ಸಾಧ್ಯವಿಲ್ಲ. ಆದರೆ ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡುತ್ತೇನೆ. ಕೆರೆ ತುಂಬಿಸಲು ಆದ್ಯತೆ ನೀಡಲಾಗಿದೆ. ರೇಷ್ಮೆ, ಹೈನುಗಾರಿಕೆ, ತೋಟಗಾರಿಕೆಯಲ್ಲಿ ಆರ್ಥಿಕ ಶಕ್ತಿ ನೀಡಲು ಪ್ರಯತ್ನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಇಲ್ಲಿ ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ. ನಾನು ನಿಮ್ಮನ್ನು ಭೇಟಿ ಮಾಡಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

ಈ ಭಾಗದ ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಜೂಜು, ಚಟಗಳ ವಿಚಾರದಲ್ಲಿ ನನಗೆ ಯಾವುದೆ ದೂರು ಬರಬಾರದು. ತಾಲೂಕು ಕಚೇರಿ, ಪಂಚಾಯಿತಿ ಕಚೇರಿ, ಪೊಲೀಸ್ ಠಾಣೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಲಂಚಕ್ಕೆ ಕೊನೆಯಾಡಬೇಕು. ನಾವು 40 ಪರ್ಸೆಂಟ್ ಕಮಿಷನ್ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದು, ಕಾನೂನು ಬಾಹಿರವಾಗಿ ಯಾವುದೇ ಕೆಲಸ ಮಾಡಬಾರದು ಎಂದು ಶಿವಕುಮಾರ್ ಹೇಳಿದರು. 

ನಾವು ಗೆದ್ದಿದ್ದೇವೆ ಎಂದು ಬೇರೆ ಪಕ್ಷದ ಕಾರ್ಯಕರ್ತರನ್ನು ಹೀಯಾಳಿಸಬೇಡಿ. ಪ್ರತಿನಿತ್ಯ ನೀವು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಅದಕ್ಕೆ ನೀವು ಸಿದ್ಧರಾಗಬೇಕು. ಉಳಿದಿರುವ ಬೇರೆ ಪಕ್ಷದ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

‘ಚುನಾವಣೆಯಲ್ಲಿ ಕನಕಪುರ ಕ್ಷೇತ್ರದ ಜನ ಕೇವಲ ಡಿ.ಕೆ.ಶಿವಕುಮಾರ್ ಗೆ ಗೆಲುವು ಕೊಟ್ಟಿಲ್ಲ. ರಾಜ್ಯಕ್ಕೆ, ದೇಶಕ್ಕೆ ಹಾಗೂ ಎಲ್ಲ ಪಕ್ಷಗಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ನನ್ನನ್ನು ಮುಖ್ಯಮಂತ್ರಿ ಮಾಡಲು ನೀವು ಬಹಳ ಆಸೆಯಿಂದ ಕೆಲಸ ಮಾಡಿದ್ದಿರಿ. ನೀವು ಆತಂಕ, ನಿರಾಸೆಪಡುವ ಅಗತ್ಯವಿಲ್ಲ. ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ನಾವು ಶಾಂತಿಯಿಂದ, ಶ್ರದ್ಧೆಯಿಂದ ಕೆಲಸ ಮಾಡಬೇಕಿದೆ’

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

Similar News