ಯುವನಿಧಿ ಯೋಜನೆ ಜಾರಿಗೆ ಆಡಳಿತಾತ್ಮಕ ಅನುಮೋದನೆ: ಸರಕಾರಿ ಆದೇಶ

ಷರತ್ತುಗಳೇನು? ಯಾವ್ಯಾವ ಪದವೀಧರರು ಅರ್ಹರು?

Update: 2023-06-03 14:18 GMT

ಬೆಂಗಳೂರು, ಜೂ.3: 2023ನೆ ಸಾಲಿನಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ(ವೃತ್ತಿಪರ ಕೋರ್ಸ್ ಗಳು ಸೇರಿದಂತೆ) ಪ್ರತಿ ತಿಂಗಳು 3 ಸಾವಿರ ರೂ. ನಿರುದ್ಯೋಗ ಭತ್ತೆ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1500 ರೂ.ನಿರುದ್ಯೋಗ ಭತ್ತೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲು ‘ಯುವ ನಿಧಿ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಸರಕಾರ ಆದೇಶ ಹೊರಡಿಸಿದೆ.

ಷರತ್ತು ಮತ್ತು ನಿಬಂಧನೆಗಳು: ಪದವಿ, ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೆ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು.

ಭತ್ತೆಯನ್ನು ಡಿಬಿಟಿ ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.

ಯೋಜನೆಗೆ ಅರ್ಹರಾಗದೆ ಇರುವವರು: ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುವವರು, ಶಿಶಿಕ್ಷ ವೇತನವನ್ನು ಪಡೆಯುತ್ತಿರುವವರು, ಸರಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು, ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು ಈ ಯೋಜನೆಗೆ ಅರ್ಹರಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Similar News