ಕಾಡುಕೋಣ ಮಾಂಸ ಸಾಗಾಟ ಮಾಡುತ್ತಿದ್ದ ವಾಹನ ವಶಕ್ಕೆ, ಆರೋಪಿಗಳು ಪರಾರಿ

Update: 2023-06-03 14:27 GMT

ಮಡಿಕೇರಿ ಜೂ.3 :  ಕಾಡುಕೋಣ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ನಾಪೋಕ್ಲು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ನಾಪೋಕ್ಲು ಸಮೀಪದ ಕಕ್ಕಬ್ಬೆ ಕುಂಜಿಲ ಗ್ರಾಮದಿಂದ ಶುಕ್ರವಾರ ಮದ್ಯರಾತ್ರಿ ಕೇರಳ ರಾಜ್ಯದ ನೊಂದಣಿ ಹೊಂದಿರುವ  ಕಾರಿನಲ್ಲಿ ಕಾಡುಕೋಣ ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ನಾಪೋಕ್ಲು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ವಾಹನದೊಂದಿಗೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳನ್ನು ಸೆರೆ ಹಿಡಿಯಲು ಬೆನ್ನಟ್ಟಿದ ನಾಪೋಕ್ಲು ಪೊಲೀಸರು ಮಡಿಕೇರಿ ಗ್ರಾಮಾಂತರ ಪೊಲೀಸರ ಸಹಕಾರದೊಂದಿಗೆ ಮಡಿಕೇರಿ ಸಮೀಪದ ಮೇಕೇರಿ ಸುಭಾಷ್ ನಗರ ಗ್ರಾಮದ ರಸ್ತೆಯಲ್ಲಿ ಸಂಚರಿಸುವಾಗ ಆರೋಪಿಗಳ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದರಿದ ಸಂಚರಿಸಲಾಗದೆ ಆರೋಪಿಗಳು ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಇದೇ ಸಂದರ್ಭ ಸ್ಥಳಕ್ಕೆ ಧಾವಿಸಿದ ಪೊಲೀಸರು ವಾಹನ ಸಮೇತ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆಬಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮರಾಜನ್, ಹೆಚ್ಚುವರಿ ಪೊಲಿಸ್ ಉಪ ಅಧೀಕ್ಷಕ ಸುಂದರ್ ರಾಜ್ ನಿರ್ದೇಶನದಂತೆ ಡಿವೈಎಸ್ಪಿ ಜಗದೀಶ್,ವೃತ್ತ ನಿರೀಕ್ಷಕ ಶೇಖರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪ್ರಕರಣವನ್ನು ಅರಣ್ಯ ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗಿದೆ.

Similar News