ಗ್ಯಾರಂಟಿ ಯೋಜನೆಗಳಿಗೆ ಯಾರಾದರೂ ಲಂಚ ಕೇಳಿದರೆ ನನಗೆ ಪತ್ರ ಬರೆಯಿರಿ ಎಂದ ಡಿ.ಕೆ.ಶಿವಕುಮಾರ್

Update: 2023-06-03 16:17 GMT

ಬೆಂಗಳೂರು, ಜೂ. 3: ‘ಐದು ಗ್ಯಾರಂಟಿ ಯೋಜನೆಗಳ ಜಾರಿ ವೇಳೆ ಯಾರಾದರೂ ಲಂಚ ಕೇಳಿದರೆ, ವಿಧಾನಸೌಧದ ನನ್ನ ವಿಳಾಸಕ್ಕೆ ಒಂದು ಪತ್ರ ಬರೆಯಿರಿ. ನಾನು ಅವರನ್ನು ಒದ್ದು ಒಳಗೆ ಹಾಕಿಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಕನಕಪುರ ಕ್ಷೇತ್ರದ ಕಬ್ಬಾಳು, ಸಾತನೂರಿನಲ್ಲಿ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾನು ಇಲ್ಲಿಗೆ ಅಭಿನಂದನೆ ಮಾಡಿಸಿಕೊಳ್ಳುವುದಕ್ಕಿಂತ, ನಿಮಗೆ ಅಭಿನಂದನೆ ತಿಳಿಸಲು ಬಂದಿದ್ದೇನೆ. ನೀವು ಶಕ್ತಿ ತುಂಬಿದ್ದಕ್ಕೆ ಉಪಕಾರ ಸ್ಮರಿಸಿ ನಿಮ್ಮ ಸೇವೆಗೆ ಸಿದ್ಧ ಎಂದು ತಿಳಿಸಲು ಇಲ್ಲಿಗೆ ಬಂದಿದ್ದೇನೆ. ಇತಿಹಾಸದಲ್ಲಿ 1.23 ಲಕ್ಷ ಮತಗಳ ಅಂತರದ ದಾಖಲೆಯ ಗೆಲುವನ್ನು ನೀವು ನನಗೆ ಕೊಟ್ಟಿದ್ದೀರಿ. ನಿಮಗೆ ಸಾಷ್ಟಾಂಗ ನಮನಗಳು’ ಎಂದು ಹೇಳಿದರು.

‘ಈ ಭಾಗದ ಆಸ್ತಿ ಲಕ್ಷಗಳಿಂದ ಕೋಟಿ ರೂ.ಗಳಿಗೆ ಏರಿಕೆಯಾಗುವಂತೆ ಮಾಡಿದ್ದೇವೆ. ಈ ಭಾಗದ ಅಭಿವೃದ್ಧಿಯಲ್ಲಿ ನಾನಾಗಲಿ, ಸುರೇಶ್ ಆಗಲಿ ಲಂಚ ತಿಂದಿಲ್ಲ. ನಾನು ಚುನಾವಣೆಗೂ ಮುನ್ನ ಕೊಟ್ಟ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ ಜುಲೈ 1ರಿಂದ ನೀವು ಇದುವರೆಗೂ ಬಳಸುತ್ತಿದ್ದಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಆ ಮೂಲಕ ಕನಕಪುರ ಕ್ಷೇತ್ರದ ಶೇ.98ರಷ್ಟು ಮಂದಿ ವಿದ್ಯುತ್ ಬಿಲ್ ಕಟ್ಟುವಂತಿಲ್ಲ’ ಎಂದು ಹೇಳಿದರು.

ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಯೋಜನೆ ಅಶೋಕಣ್ಣ, ಬೊಮ್ಮಾಯಿ, ಕುಮಾರಸ್ವಾಮಿ ಕೊಟ್ಟಿದ್ದರಾ? ಅವರದ್ದು ಕೇವಲ ಖಾಲಿ ಮಾತು. ಬಿಜೆಪಿ ಅವರು ತಮ್ಮ ಸೋಲಿನ ಬಗ್ಗೆ ಚರ್ಚೆ ಮಾಡುವುದಕ್ಕಿಂತ ನಮ್ಮ ಯೋಜನೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದವರು ಯಾಕೆ ಹಾಕಿಲ್ಲ ಎಂದು ವಾಗ್ದಾಳಿ ನಡೆಸಿದರು.

Similar News