ಗೃಹಲಕ್ಷ್ಮಿ ಸೇರಿ ಪ್ರತಿಯೊಂದು ಯೋಜನೆಗಳನ್ನೂ ಜನರಿಗೆ ತಲುಪಿಸಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ

Update: 2023-06-03 17:48 GMT

ಬೆಂಗಳೂರು, ಜೂ. 3: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಮಹತ್ವದ ಇಲಾಖೆಯಾಗಿದ್ದು, ರಾಜ್ಯಕ್ಕೆ ಹಾಗೂ ಸರಕಾರಕ್ಕೆ ಉತ್ತಮ ಹೆಸರು ತರುವ ದಿಸೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಜನರು ಬಹಳ ನಿರೀಕ್ಷೆ ಇಟ್ಟು ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನಮ್ಮ ಕರ್ತವ್ಯ’ ಎಂದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಜವಾಬ್ದಾರಿ ಮತ್ತು ಸೂಕ್ಷ್ಮವಾದ ಇಲಾಖೆ. ಇಲ್ಲಿ ಸಣ್ಣ ಲೋಪವನ್ನೂ ಸಹಿಸಲು ಸಾಧ್ಯವಿಲ್ಲ. ನಮ್ಮ ನಿರೀಕ್ಷೆ ಮತ್ತು ವೇಗಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಹೊಸದಾಗಿ ಘೋಷಣೆಯಾಗಿರುವ ಗೃಹಲಕ್ಷ್ಮಿ ಸೇರಿದಂತೆ ಇಲಾಖೆಯ ಪ್ರತಿಯೊಂದು ಯೋಜನೆಗಳನ್ನೂ ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಸಬೇಕು. ಯಾವುದೇ ರೀತಿಯ ದೂರುಗಳಿಗೆ ಅವಕಾಶವಿರಬಾರದು’ ಎಂದು ಅವರು ಹೇಳಿದರು.

‘ಇಲಾಖೆ ಉತ್ತಮವಾಗಿ ಕೆಲಸ ನಿರ್ವಹಿಸಿದರೆ ಸರಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ವಿಸ್ತ್ರತವಾಗಿ ಇಲಾಖೆಗೆ ಸಂಬಂಧಿಸಿದ ಚರ್ಚೆ ನಡೆಸಲಾಗುವುದು. ಜೊತೆಗೆ ಪ್ರತಿ ಜಿಲ್ಲೆಗೂ ತೆರಳಿ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಹಾಗಾಗಿ ಹೊಸ ಸರಕಾರದ ನಿರೀಕ್ಷೆಗೆ ತಕ್ಕಂತೆ ನಿಮ್ಮ ಕಾರ್ಯನಿರ್ವಹಣೆ ಇರಲಿ’ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕಿ ಡಾ.ಕೆ.ಎನ್.ಅನುರಾಧಾ, ಮಕ್ಕಳ ರಕ್ಷಣಾ ನಿರ್ದೇಶಕ ಚಂದ್ರಕಾಂತ, ಮಹಿಳಾ ಆಯೋಗದ ಕಾರ್ಯದರ್ಶಿ ಕವಿತಾ ಮಣ್ಣಿಕೇರಿ, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ, ವಿಕಲಚೇತನರ ಇಲಾಖೆಯ ಜಂಟಿ ನಿರ್ದೇಶಕ ಶೇಷಪ್ಪ, ಬಾಲವಿಕಾಸ ಅಕಾಡೆಮಿ ಕಾರ್ಯದರ್ಶಿ ಭಾರತಿ ಶೆಟ್ಟರ್, ಬಾಲಭವನದ ಕಾರ್ಯದರ್ಶಿ ರಾಜಮೂರ್ತಿ, ಇಲಾಖೆಯ ಎಲ್ಲ ಜಂಟಿ ನಿರ್ದೇಶಕರು, ಉಪನಿರ್ದೇಶಕರು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Similar News