ವಿಚ್ಛೇದನ ನೋಟಿಸ್ ಬಳಿಕ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದರೆ ಮಹತ್ವವಿಲ್ಲ: ಹೈಕೋರ್ಟ್

Update: 2023-06-04 12:39 GMT

ಬೆಂಗಳೂರು, ಜೂ.4: ಪತಿಯಿಂದ ವಿವಾಹ ವಿಚ್ಚೇದನ ನೋಟಿಸ್ ಬಂದ ಬಳಿಕ ಪತ್ನಿ ತನ್ನ ಪತಿ ಮತ್ತವರ ಸಂಬಂಧಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿದರೆ ಆ ಪ್ರಕರಣ ತನ್ನ ಮಹತ್ವ ಕಳೆದುಕೊಳ್ಳುತ್ತದೆ ಎಂದು ಹೈಕೋರ್ಟ್ ಹೇಳಿದೆ. 

ವಿಚ್ಚೇದನ ನೋಟಿಸ್ ಬಂದ ಬಳಿಕ ಗಂಡನ ವಿರುದ್ಧ ಪತ್ನಿ ನೀಡಿದ್ದ ದೂರು ಪ್ರಶ್ನಿಸಿ ನಾಗೇಶ್ ಗುಂಡ್ಯಾಲ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಹೇಳಿಕೆಯನ್ನು ನೀಡಿದೆ. 

ಪತಿ ಹಾಗೂ ಆತನ ಸಂಬಂಧಿಗಳ ವಿರುದ್ಧ ಸಾಮಾನ್ಯ ಆರೋಪಗಳನ್ನು ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. ವೈಯಕ್ತಿಕವಾಗಿ ಪ್ರತಿಯೊಬ್ಬರೂ ಇಂಥದ್ದೇ ಆರೋಪ ಮಾಡಿದ್ದಾರೆ ಎಂದು ನಿರ್ದಿಷ್ಟವಾಗಿ ಏನೂ ಹೇಳಿಲ್ಲ. ಹೀಗಾಗಿ, ಅರ್ಜಿದಾರರು ತಪ್ಪು ಮಾಡಿದ್ದಾರೆ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ. 

ಪ್ರಕರಣದಲ್ಲಿ ಪತಿ 2018ರ ಡಿ.17ರಂದು ಸೊಲ್ಲಾಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪತ್ನಿ, ಪತಿ ಹಾಗೂ ಆತನ ಸಂಬಂಧಿಗಳೆಲ್ಲರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಹೀಗಾಗಿ, ಮಹತ್ವ ನೀಡುವ ಅಗತ್ಯವಿಲ್ಲ ಎಂದು ಪೀಠ ಹೇಳಿತು.

ಪ್ರಕರಣವೇನು?: ರಾಯಚೂರಿನ ದೇವದುರ್ಗದ ಸುಮಾ ಮತ್ತು ಖಾಸಗಿ ಕಂಪೆನಿಯ ನೌಕರ ಗೋಪಾಲ್ ಗುಂಡ್ಯಾಲ್ 2013ರ ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಆ ನಂತರ ತನಗೆ ಹಿಂದಿ ಅಥವಾ ಮರಾಠಿ ಭಾಷೆ ಬಾರದ ಕಾರಣ ಪತಿ ತನ್ನನ್ನು ಪುಣೆಗೆ ಕರೆದುಕೊಂಡು ಹೋಗದೆ ತನ್ನ ಸಂಬಂಧಿಗಳ ಮನೆಯಲ್ಲೇ ಬಿಟ್ಟು ಹೋಗಿದ್ದರು ಎಂದು ಸುಮಾ ಆರೋಪಿಸಿದ್ದಾರೆ. 

ಪತಿಯ ಸಂಬಂಧಿಗಳು ಪುಣೆಯಲ್ಲಿರುವ ಪತಿಯ ಮನೆಗೆ ಹೋಗು ಎಂದು ಬಲವಂತ ಮಾಡುತ್ತಿದ್ದಾರೆ. ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಪತಿ 2018ರ ಡಿ.17ರಂದು ವಿವಾಹ ವಿಚ್ಚೇದನಕ್ಕೆ ಸೊಲ್ಲಾಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ದೂರುದಾರ ಪತ್ನಿಗೆ ನೋಟಿಸ್ ಜಾರಿ ಮಾಡಿತ್ತು. ಪತ್ನಿ, ಪತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪತಿ ಹಾಗೂ ಅವರ ಸಂಬಂಧಿಗಳೆಲ್ಲರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಗುಂಡ್ಯಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಪೀಠ ದೂರು ರದ್ದುಪಡಿಸಿದೆ.

Similar News