ಶೀಘ್ರದಲ್ಲೇ ಬೆಳಗಾವಿ, ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಘೋಷಣೆ: ಸಚಿವ ಸತೀಶ್ ಜಾರಕಿಹೊಳಿ

Update: 2023-06-04 13:22 GMT

ಬೆಳಗಾವಿ, ಜೂ. 4:  ‘ಈ ಬಾರಿ ಲೋಕಸಭೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 20 ಸ್ಥಾನ ನಾವು ಗೆಲ್ಲಲೇಬೇಕು. ಬೆಳಗಾವಿ-ಚಿಕ್ಕೋಡಿ ಲೋಕಸಭೆ ಅಭ್ಯರ್ಥಿಯನ್ನು ಶೀಘ್ರದಲ್ಲೇ ಘೋಷಣೆ ಮಾಡುತ್ತೇವೆ. ಇನ್ನೊಂದು ತಿಂಗಳಲ್ಲಿ ಸಭೆ ಮಾಡುತ್ತೇವೆ. ಆ ಸಭೆಯಲ್ಲಿ ಎಲ್ಲವೂ ಚರ್ಚೆ ಮಾಡಿ ಘೋಷಣೆ ಮಾಡುತ್ತೇವೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರಕಾರದ ಅವಧಿಯಲ್ಲಿ ರೂಪಿಸಿದ ಅನವಶ್ಯಕ ಯೋಜನೆಗಳನ್ನು ನಿಲ್ಲಿಸುತ್ತೇವೆ, ಜನಪರ ಯೋಜನೆಗಳಿದ್ದರೆ ಮುಂದುವರೆಸುತ್ತೇವೆ’ ಎಂದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ‘ಐದು ಗ್ಯಾರಂಟಿ ಯೋಜನೆ ಮೇಲೆ ಜನತೆ ವಿಶ್ವಾಸ ಇಟ್ಟಿದ್ದು, ಇದೀಗ ಅವುಗಳನ್ನು ಅನುಷ್ಠಾನ ಮಾಡ್ತಿದ್ದೇವೆ. ಇದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಅನುಕೂಲ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಇದನ್ನು ನೋಡಿದ ಪ್ರತಿಪಕ್ಷ ಬಿಜೆಪಿಗೆ ಆತಂಕ ಶುರುವಾಗಿದೆ. ಆದರೆ, ರಾಜ್ಯದ ಜನತೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಸ್ವಾಗತ ಮಾಡುತ್ತಿದ್ದಾರೆ. ಹೀಗಾಗಿ ಅದನ್ನು ಮರೆಮಾಚಲು ಬೇರೆ ಅಸ್ತ್ರ ಹುಡುಕುತ್ತಿದ್ದಾರೆ’ ಎಂದು ದೂರಿದರು.

‘ಇನ್ನೂ ಐದು ವರ್ಷ ಬಿಜೆಪಿಯವರಿಗೆ ಏನೂ ಕೆಲಸ ಇಲ್ಲ. ಬಿಜೆಪಿಯವರು ಬೋರ್ಡ್ ಬರೆದು ಇಡಬೇಕು. ‘ಹೋರಾಟ.. ಹೋರಾಟ, ಗೆಲ್ಲುವವರೆಗೂ ಹೋರಾಟ’ ಎಂದು. ಇದೇ ಅವರ ಕೆಲಸ, ಅದನ್ನೇ ಅವರು ಮಾಡಿದ್ದಾರೆ. ಅಭಿವೃದ್ಧಿಯ ವಿಷಯ ಅವರಿಗೆ ಗೊತ್ತೇ ಇಲ್ಲ. ಕೇವಲ ಕೋಮು, ದ್ವೇಷ ಹರಡಿಸುವುದು, ಗಲಾಟೆ, ಒಬ್ಬರನ್ನೊಬ್ಬರು ಎತ್ತಿ ಕಟ್ಟುವುದು ಇಷ್ಟೇ ಅವರ ಕೆಲಸ. ಯಾರೇ ಹೇಳಿಕೆ ನೀಡಿದರೂ ಸದನದಲ್ಲಿ ಚರ್ಚೆಗೆ ಅವಕಾಶ ಇದೆ’ ಎಂದು ಸತೀಶ್ ತಿಳಿಸಿದರು.

ಕರ್ನಾಟಕ ಮಾದರಿ: ‘ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿಕೆಗೆ ಚರ್ಚೆಗೆ ಅವಕಾಶ ಇದೆ. ಸಾಧಕ-ಬಾಧಕ ನೋಡಿ ನಿರ್ಣಯ ಮಾಡಲಾಗುತ್ತದೆ. ಸದ್ಯ ಬಿಜೆಪಿ ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡಲಿ. ಅವರ ಸರಕಾರದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ’ ಎಂದು ಸತೀಶ್ ಜಾರಕಿಹೊಳಿ ಟೀಕಿಸಿದರು.

ಎಲ್ಲದಕ್ಕೂ ವಿರೋಧ ಸರಿಯಲ್ಲ. ಯಾವುದೇ ವಿಚಾರ ಇದ್ದರೂ ಸದನದಲ್ಲಿ ಚರ್ಚೆ ಮಾಡಬೇಕು. ಅಲ್ಲದೆ, ಕರ್ನಾಟಕ ಮಾದರಿ ಎಲ್ಲ ರಾಜ್ಯಗಳಲ್ಲೂ ಬಂದೇ ಬರುತ್ತದೆ. ಕರ್ನಾಟಕ ಮಾದರಿ ಪ್ರಖ್ಯಾತಿ ಆಗಿಯೇ ಆಗುತ್ತದೆ. ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಅದು ಗೊತ್ತಾಗಲಿದೆ ಎಂದು ಅವರು ನುಡಿದರು.

Similar News