ಚುನಾವಣೆಯಲ್ಲಿ ಸೋತರೂ, ಸರಕಾರದ ಜಾಲತಾಣದಲ್ಲಿ ರಾರಾಜಿಸುತ್ತಿರುವ ಮಾಜಿ ಸಚಿವ ಬಿ.ಸಿ. ನಾಗೇಶ್

Update: 2023-06-05 12:54 GMT

ಬೆಂಗಳೂರು, ಜೂ.5: ರಾಜ್ಯದ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಪಠ್ಯಪುಸ್ತಕ ಸಂಘದ ಜಾಲತಾಣವನ್ನು ರಾಜ್ಯ ಸರಕಾರವು ಸಮರ್ಪಕವಾಗಿ ನವೀಕರಣ ಮಾಡದ ಕಾರಣ, ಜಾಲಾತಣದಲ್ಲಿ ಹಿಂದಿನ ಬಿಜೆಪಿ ಸರಕಾರದ ಸಚಿವರ ಭಾವಚಿತ್ರಗಳು ರಾರಾಜಿಸುತ್ತಿವೆ. 

ಕರ್ನಾಟಕ ಪಠ್ಯಪುಸ್ತಕ ಸಂಘವು ಸರಕಾರ ಅನುಮೋದಿಸಿದ ಪಠ್ಯಪುಸ್ತಕಗಳ ರಚನೆ, ಪರಿಷ್ಕರಣೆ,  ಮುದ್ರಣ ಹಾಗೂ ಸರಬರಾಜಿಗೆ ಸಂಬಂಧಿಸಿದ ಒಂದು ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಘವು ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದೆ. ಪಠ್ಯಪುಸ್ತಕಗಳನ್ನು ಉಚಿತ ಮತ್ತು ಮಾರಾಟದ ಪುಸ್ತಕಗಳನ್ನು ಸಮರ್ಥವಾಗಿ ವಿತರಿಸಲು ಸಂಘವನ್ನು ರಾಜ್ಯ ಸರಕಾರ ಸ್ಥಾಪಿಸಲಾಗಿದೆ.

ಆದರೆ ಸಂಘದ ಅಧಿಕೃತ ಜಾಲತಾಣವಾದ https://textbooks.karnataka.gov.in/ ನಲ್ಲಿ ಸುತ್ತೋಲೆ ಮೆನುವನ್ನು ತೆರೆದಾಗ ಎಡಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಕಾಣಿಸುತ್ತಿದ್ದು, ಬಲ ಭಾಗದಲ್ಲಿ ಹಿಂದಿನ ಬಿಜೆಪಿ ಸರಕಾರದಲ್ಲಿ ಇಂಧನ ಸಚಿವರಾಗಿದ್ದ ವಿ. ಸುನೀಲ್ ಕುಮಾರ್ ಭಾವಚಿತ್ರ ಕಾಣಿಸುತ್ತಿದೆ. ಹಾಗೆಯೇ ಅದೇ ಜಾಲತಾಣದಲ್ಲಿ ಟೆಂಡರ್ ಅಧಿಸೂಚನೆಯ ಮೆನುವನ್ನು ತೆರೆದಾಗ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಭಾವಚಿತ್ರ ಕಾಣಿಸುತ್ತಿದೆ. 

 

ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಮಣಿಸಿ, ಸ್ಪಷ್ಟ ಬಹುಮತದಿಂದ ಸರಕಾರವನ್ನು ರಚನೆ ಮಾಡಿದೆ. ಸರಕಾರ ರಚನೆಯಾಗಿ 20ದಿನಗಳು ಕಳೆದರೂ, ಅಧಿಕಾರಿಗಳು ಜಾಲತಾಣವನ್ನು ಬದಲಾವಣೆ ಮಾಡದಿರುವುದು ಶಿಕ್ಷಣ ಇಲಾಖೆ ಬೇಜಾವಬ್ದಾರಿಯನ್ನು ತೋರಿಸುತ್ತಿದೆ. 

ಹಿಂದಿನ ಸರಕಾರದಲ್ಲಿ ಪಠ್ಯಪರಿಷ್ಕರಣೆಯ ಕುರಿತು ಹಲಾವಾರು ವಿವಾದಗಳು ಸೃಷ್ಟಿಯಾಗಿದ್ದವು. ಆಗ ಕರ್ನಾಟಕ ಪಠ್ಯಪುಸ್ತಕ ಸಂಘವು ಯಾವುದೇ ರೀತಿಯಲ್ಲಿ ಸ್ಪಷ್ಟಿಕರಣವನ್ನು ನೀಡದೆ, ಶಿಕ್ಷಣ ಸಚಿವರ ಹೇಳಿಕೆಗಳೇ ಅಂತಿಮ ಎಂಬಂತೆ ವರ್ತಿಸಿತ್ತು. ಈ ವರ್ತನೆ ಶಿಕ್ಷಣ ತಜ್ಞರ ಕೆಂಗೆಣ್ಣಿಗೆ ಗುರಿಯಾಗಿತ್ತು. ಆದರೆ ಈಗ ಸರಕಾರ ಬದಲಾದರೂ, ಸಂಘದ ಜಾಲಾತಾಣವನ್ನು ಸಮರ್ಪಕವಾಗಿ ನವೀಕರಿಸಿಲ್ಲ.

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡ ಪಠ್ಯವನ್ನು ಮಕ್ಕಳಿಗೆ ಬೋಧಿಸಬಾರದು. ಈ ಪಠ್ಯಗಳನ್ನು ಮರು ಪರಿಷ್ಕರಣೆ ಮಾಡಬೇಕು ಎಂದು ಸಾಹಿತಿ, ಶಿಕ್ಷಣ ತಜ್ಞರು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಸರಕಾರವು ಪಠ್ಯ ಪರಿಷ್ಕರಣೆಗೆ ಸಮಿತಿಯನ್ನು ರಚಿಸುವುದಾಗಿ ಭರವಸೆಯನ್ನು ನೀಡಿದೆ. ಆದರೆ ಕರ್ನಾಟಕ ಪಠ್ಯಪುಸ್ತಕ ಸಂಘದ ಜಾಲಾತಾಣವನ್ನು ಸಮರ್ಪಕವಾಗಿ ನವೀಕರಿಸದ ಸರಕಾರ ಪಠ್ಯ ಪರಿಷ್ಕರಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತದೆಯೇ ಎಂದು ಶಿಕ್ಷಣ ತಜ್ಞರಲ್ಲಿ ಚರ್ಚೆಯಾಗುತ್ತಿದೆ.

Similar News