ರಾಜ್ಯದಲ್ಲಿ ಶೀಘ್ರವೇ ತುರ್ತು ಪರಿಸ್ಥಿತಿ ಬರುತ್ತದೆ: ಮಾಜಿ ಸಿಎಂ ಬೊಮ್ಮಾಯಿ

''ಯಾರ್ಯಾರನ್ನ ಜೈಲಿಗೆ ಹಾಕುತ್ತಿರೋ ಹಾಕಿ..''

Update: 2023-06-05 14:35 GMT

ಬೆಂಗಳೂರು:  'ಸರಕಾರದ ವಿರುದ್ಧ ಮಾತನಾಡಿದರೆ ಜೈಲಿಗೆ ಹಾಕುತ್ತೇವೆಂಬ ಸಚಿವರ ಹೇಳಿಕೆ ನೋಡಿದರೆ ಈ ಸರಕಾರಕ್ಕೆ ಅಧಿಕಾರದ ಅಮುಲು ಬಂದಿದೆ. ಕೆಲ ಸಚಿವರ ಹೇಳಿಕೆ ನೋಡಿದರೆ ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸುತ್ತಿದ್ದಾರೆ. ನಮ್ಮ ಅಭಿಪ್ರಾಯಕ್ಕೆ ಸಹಮತ ಇಲ್ಲದವರ ಧ್ವನಿಯನ್ನು ಹತ್ತಿಕ್ಕುವ ಪ್ರವೃತ್ತಿಯಲ್ಲಿ ಮಾತನಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಬರುತ್ತದೆಯೇನೋ ಎಂಬುದು ಸ್ಪಷ್ಟವಾಗುತ್ತಿದೆ' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ನಡೆದ ಪಕ್ಷದ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು ‘ಯಾರ್ಯಾರನ್ನ ಜೈಲಿಗೆ ಹಾಕುತ್ತಿರೋ ಹಾಕಿ. ನಿಮ್ಮ ನೀತಿ, ವರ್ತನೆಗಳ ವಿರುದ್ಧ ಜನರು ತಿರುಗಿ ಬಿದ್ದರೆ ನಿಮಗೆ ಜೈಲುಗಳು ಸಾಕಾಗುವುದಿಲ್ಲ. ತಾಕತ್ತಿನಿಂದ ಮಣಿಸುತ್ತೇವೆಂದರೆ, ನಮ್ಮದೇನು ಇಸ್ಲಾಂ ರಾಷ್ಟ್ರವಲ್ಲ. ತುರ್ತು ಪರಿಸ್ಥಿತಿ ಹೇರಲು ಪ್ರಜಾಪ್ರಭುತ್ವದಲ್ಲಿ ಜನತೆ ಕೈಯಲ್ಲಿ ದೊಡ್ಡ ಶಕ್ತಿಯಿದೆ. ಖಂಡಿತವಾಗಿ ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಹೇಳಿದರು. 

ಜನರಿಗೆ ದೋಖಾ: ಹಿಂದಿನ ಕಾಂಗ್ರೆಸ್ ಸರಕಾರದ ಕಾಲದಲ್ಲಿ ದೊಡ್ಡ ಪ್ರಮಾಣದ ಹೊರೆಯನ್ನು ಹೆಸ್ಕಾಂ ಮೇಲೆ ಹಾಕಿದ್ದರು. ನಾನು ಸಿಎಂ ಆಗಿದ್ದಾಗ ಅನುದಾನ ನೀಡಿದ್ದೆ. 13ಸಾವಿರ ಕೋಟಿ ರೂ.ನೀಡಿ ಹೆಸ್ಕಾಂ, ಕೆಪಿಟಿಸಿಎಲ್ ಪುನಶ್ಚೇತನ ಮಾಡಿದ್ದೇವೆ. ಕಾಂಗ್ರೆಸ್ ಇದು ಗೊತ್ತಿಲ್ಲದ್ದೇನಲ್ಲ, ವಿದ್ಯುಚ್ಛಕ್ತಿ ಕ್ಷೇತ್ರ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಒಟ್ಟು ಬಿಲ್‍ನಲ್ಲಿ ಐವತ್ತು ಪರ್ಸೆಂಟ್ ಬಿಲ್ ಸರಕಾರದಿಂದ ಬರುತ್ತದೆ ಎಂದು ದೂರಿದರು.

Similar News