200 ಯೂನಿಟ್‍ಗಳ ಬಳಕೆ ಮೀರಿದರೆ ಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕು: ಗೃಹ ಜ್ಯೋತಿ ಯೋಜನೆಗೆ ಮಾರ್ಗಸೂಚಿ ಪ್ರಕಟ

ಷರತ್ತುಗಳೇನು?

Update: 2023-06-05 14:59 GMT

ಬೆಂಗಳೂರು, ಜೂ.5: ‘ಗೃಹ ಜ್ಯೋತಿ’ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್‍ಗಳ ವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ ಯೂನಿಟ್‍ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿದೆ.

ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್‍ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸರಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಿನಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಶರತ್ತುಗಳೊಂದಿಗೆ ಜಾರಿಗೆ ತರಲು ಸರಕಾರ ಆದೇಶೀಸಿದೆ.

ಷರತ್ತುಗಳೇನು? ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಬಳಕೆಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ. ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸಬೇಕು.

ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‍ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್ ಬಿಲ್ ನೀಡುವುದು ಹಾಗೂ ಗ್ರಾಹಕರು ನೆಟ್ ಬಿಲ್ ಅನ್ನು ಪಾವತಿಸಬೇಕು. ಅರ್ಹ ಯೂನಿಟ್ ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು.

ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ಫಲಾನುಭವಿಯು ತನ್ನ ಕಸ್ಟಮರ್ ಐದಿ ಅಥವಾ ಅಕೌಂಟ್ ಐಡಿ ಅನ್ನು ಆಧಾರ್‍ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು. ಪ್ರಸಕ್ತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಬೇಕು.

ಜೂ.30ರ ಅಂತ್ಯಕ್ಕೆ(ಜೂನ್ ತಿಂಗಳಲ್ಲಿ ಬಳಸಿದ ವಿದ್ಯುತ್ ಪ್ರಮಾಣಕ್ಕೆ ಜುಲೈ ತಿಂಗಳಲ್ಲಿನಲ್ಲಿ ವಿತರಿಸಿದ ಬಿಲ್ಲಿನ ಮೊತ್ತ ಒಳಗೊಂಡಂತೆ) ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸಬೇಕು. ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸ್ಥಾವರಗಳ ಸಂಪರ್ಕವನ್ನು ಕಡಿತಗೊಳಿಸಲಾಗುವುದು.

ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿದೆ. ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಗ್ರಾಹಕರಿಗೆ ನೀಡಿದ ಉಚಿತ ಮೊತ್ತವನ್ನು ಸರಕಾರದಿಂದ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಸಹಾಯಧನದ ಮೂಲಕ ಪಾವತಿಸಲಾಗುವುದು ಎಂದು ಇಂಧನ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ಡಿ.ಎಂ. ಆದೇಶದಲ್ಲಿ ತಿಳಿಸಿದ್ದಾರೆ.

Similar News