ಶ್ರೀರಂಗಪಟ್ಟಣ: ಉಪನೋಂದಣಾಧಿಕಾರಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಕ್ಷಮೆಯಾಚಿಸಿದ ವ್ಯಕ್ತಿ!

Update: 2023-06-05 15:45 GMT

ಶ್ರೀರಂಗಪಟ್ಟಣ, ಜೂ.5: ಪಟ್ಟಣದ ಉಪನೋಂದಣಾಧಿಕಾರಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ, ನಂತರ ಅಧಿಕಾರಿಯನ್ನು ಕ್ಷಮೆಯಾಚಿಸಿದ ಘಟನೆ ಸೋಮವಾರ ನಡೆದಿದೆ.

ತಾನು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕ್ರಮವಹಿಸಿಲ್ಲವೆಂದು ಬೇಸತ್ತು ತಾಲೂಕಿನ ತಡಗವಾಡಿ ಗ್ರಾಮದ ಮಾದೇಗೌಡ, ಕಚೇರಿ ಮುಂದೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ವರದಿಯಾಗಿದೆ.

ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು, ಕಚೇರಿ ಸಿಬ್ಬಂದಿ ಮತ್ತು ಪೊಲೀಸರು ಆತ್ಮಹತ್ಯೆ ಯತ್ನವನ್ನು ವಿಫಲಗೊಳಿಸಿ, ತಿಳಿಹೇಳಿದ ನಂತರ, ಮಾದೇಗೌಡ ತಾನು ಮಾಡಿದ್ದು ತಪ್ಪೆಂದು ಅಧಿಕಾರಿ ಮಂಜುದರ್ಶಿನಿ ಅವರಲ್ಲಿ  ಕ್ಷಮೆಯಾಚಿಸಿದ್ದಾರೆ.

ಘಟನೆ ಹಿನ್ನೆಲೆ: ತಡಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮಾದೇಗೌಡರ ತಾಯಿ ಶಾಂತಮ್ಮ ಹೆಸರಿನಲ್ಲಿ ಸಾಲ ತೆಗೆದುಕೊಂಡಿದ್ದು, ಈ ಸಂಬಂಧ ಬ್ಯಾಂಕ್‍ನಿಂದ ಸಾಲ ತೀರುವಳಿ ಪತ್ರವನ್ನು ಪಡೆದಿದ್ದರು.

ಆದರೆ, ಸಾಲ ತೀರುವಳಿ ಪತ್ರದಲ್ಲಿ ಬ್ಯಾಂಕಿನ ಶಾಖಾಧಿಕಾರಿ ಅವರ ಹೆಸರು ನಮೂದಿಸಬೇಕಾಗಿದ್ದ ಸ್ಥಳದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದ ಶಾಂತಮ್ಮ ಅವರ ಹೆಸರು ನಮೂದಾಗಿತ್ತು. ಹಾಗಾಗಿ ಈ ಸಾಲತೀರುವಳಿ ಪತ್ರವನ್ನು ಉಪನೋಂದಣಾಧಿಕಾರಿಗಳು ನೋಂದಣಿ ಮಾಡಿರಲಿಲ್ಲ.

ಇದರಿಂದ ಬೇಸತ್ತ ಮಾದೇಗೌಡ, ಕಚೇರಿ ಎದುರು ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ತಾವು ಸಲ್ಲಿಸಿರುವ ಸಾಲ ತೀರುವಳಿ ಪತ್ರ ಲೋಪದೋಷದಿಂದ ಕೂಡಿತ್ತು. ಹಾಗಾಗಿ ತಡೆಹಿಡಿಯಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟ ನಂತರ, ಮಾದೇಗೌಡ ಉಪನೋಂದಣಾಧಿಕಾರಿಯವರ ಕ್ಷಮೆಯಾಚಿಸಿದರು.

Similar News