ಬೆಂಗಳೂರು-ಮೈಸೂರು ಹೆದ್ದಾರಿಯ ಮೇಲ್ಸೇತುವೆಯಲ್ಲಿ ಕಾರು ಪಲ್ಟಿ; ಐವರಿಗೆ ಗಾಯ

Update: 2023-06-05 16:42 GMT

ಮಂಡ್ಯ, ಜೂ.5: ಬೆಂಗಳೂರು-ಮೈಸೂರು ಹೆದ್ದಾರಿಯ ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದ ಕಾರು ಟೈರ್ ಸಿಡಿದ ಪರಿಣಾಮ ಪಲ್ಟಿ ಹೊಡೆದು ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಚಿಕ್ಕಮಂಡ್ಯ ಬಳಿ ಸೋಮವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಬೆಂಗಳೂರು ಮೂಲದವರೆನ್ನಲಾದ ಅರ್ಜುನ್, ಮಂಜುನಾಥ್ ಜಿ.ಅಡಿಗ, ಶ್ರೀಕಾಂತ್, ಕೃಷ್ಣ, ಮೂರ್ತಿ ಎಂಬುವರು ಗಾಯಗೊಂಡಿದ್ದು, ಇವರ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಎರಡು ಬಾರಿ ಪಲ್ಟಿಯಾಗಿ ನಜ್ಜುಗುಜ್ಜಾಗಿದೆ. ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದ್ದರೆ ಅಪಾರ ಪ್ರಮಾಣದ ಪ್ರಾಣಹಾನಿಯಾಗುತ್ತಿತ್ತು. 

ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದವರಿಗೆ ಮಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೇಂದ್ರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News