ನಂಜನಗೂಡಿನಲ್ಲಿ ಕ್ಷುಲ್ಲಕ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆ: ಯುವಕನಿಗೆ ಚಾಕು ಇರಿತ

ಘಟನೆಗೆ ಕೋಮು ಬಣ್ಣ ಬಳಿಯುವುದು ಬೇಡ: ಶಾಸಕ ದರ್ಶನ್ ಧ್ರುವನಾರಾಯಣ

Update: 2023-06-06 04:09 GMT

ನಂಜನಗೂಡು, ಜೂ.5: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ನಂಜನಗೂಡಿನ ನೀಲಕಂಠನಗರದಲ್ಲಿ ರವಿವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ನೀಲಕಂಠ ನಗರದ ಸರ್ಕಲ್ ನಿವಾಸಿ ಪ್ರಸಾದ್ ಎಂಬಾತ ಘಟನೆಯಿಂದ ಗಾಯಗೊಂಡಿದ್ದು, ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

ಘಟನೆ: ನೀಲಕಂಠ ನಗರದ ಸರ್ಕಲ್‌ನಲ್ಲಿ ಒಂದು ಗುಂಪಿಗೆ ಸೇರಿದ ಕೆಲವು ಯುವಕರು ಹುಟ್ಟುಹಬ್ಬ ಆಚರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರು ಯುವಕರು ಬೈಕ್‌ ವೀಲ್ಡಿಂಗ್ ಮಾಡಿಕೊಂಡು ಬಂದಿದ್ದು, ಇದನ್ನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಗುಂಪು ಪ್ರಶ್ನಿಸಿದೆ ಎನ್ನಲಾಗಿದೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಬೈಕ್‌ ನಲ್ಲಿದ್ದ ಇಬ್ಬರು ಯುವಕರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಗುಂಪು ಥಳಿಸಿದೆ ಎಂದು ಆರೋಪಿಸಲಾಗಿದೆ.

ಥಳಿತಕ್ಕೊಳಗಾದ ಯುವಕರು ಸ್ಥಳದಿಂದ ಓಡಿ ಹೋಗಿದ್ದರು. ಬಳಿಕ ಕೆಲವು ಯುವಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸ್ಥಳಕ್ಕೆ ಬಂದಾಗ ಮತ್ತೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

'ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಘಟನೆಗೆ ಯಾವುದೇ ಕೋಮು ಬಣ್ಣ ಬಳಿಯಬಾರದು. ಎಲ್ಲರೂ ಶಾಂತಿಯಿಂದ ಇದ್ದಾರೆ. ಈಗಾಗಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಕಾನೂನು ಪ್ರಕಾರ ಏನಿದೆಯೋ ಅದನ್ನು ಪೊಲೀಸರು ಮಾಡುತ್ತಾರೆ'.

-ದರ್ಶನ್ ಧ್ರುವನಾರಾಯಣ, ನಂಜನಗೂಡು ಶಾಸಕ

ದೂರು-ಪ್ರತಿದೂರು: ಘಟನೆಗೆ ಸಂಬಂಧಿಸಿ ನಗರದ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪ್ರಸಾದ್‌ ಚಾಕುವಿನಿಂದ ಇರಿಯಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಕೋಮುಬಣ್ಣ ನೀಡಿರುವ ಸಂಘ ಪರಿವಾರದ ಕಾರ್ಯತ್ರರು, ಪೊಲೀಸ್‌ ಠಾಣೆಯಲ್ಲಿ ಜಮಾವಣೆಗೊಂಡು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

Similar News