ಹಾವೇರಿ: ಸ್ಲೀಪರ್ ಕೋಚ್ ಬಸ್ಸಿನಲ್ಲಿ ವಿಷ ಸೇವಿಸಿದ ಪ್ರೇಮಿಗಳು; ಯುವತಿ ಮೃತ್ಯು

Update: 2023-06-06 11:42 GMT

ಹಾವೇರಿ: ಸ್ಲೀಪರ್ ಕೋಚ್ ಬಸ್ಸಿನಲ್ಲಿ ವಿಷ ಸೇವಿಸಿದ್ದ ಯುವತಿಯೊಬ್ಬರು ಮೃತಪಟ್ಟ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. 

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಚಳಗೇರಿ ಟೋಲ್ ಬಳಿ ಇರುವ ಹೋಟೆಲ್ ಬಳಿ ಈ ಘಟನೆ ವರದಿಯಾಗಿದೆ. 

ಮೃತ ಯುವತಿಯನ್ನು ಬೆಂಗಳೂರು ಮೂಲದ ಹೇಮಾ ಹಾಗೂ ಯುವಕನನ್ನು ಬಾಗಲಕೋಟೆ ಮೂಲದ ಅಖಿಲ್ ಎಂದು ಗುರುತಿಸಲಾಗಿದೆ. 

ಘಟನೆ ವಿವರ: ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಬೆಂಗಳೂರು ಮೂಲದ ಹೇಮಾ ಹಾಗೂ ಬಾಗಲಕೋಟೆ ಮೂಲದ ಅಖಿಲ್ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದ್ದು, ಇವರಿಬ್ಬರ ಮದುವೆಗೆ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಆತ್ಮ ಹತ್ಯೆ ನಿರ್ಧಾರ ಕೈಗೊಂಡಿದ್ದರು ಎಂದು ಹೇಳಲಾಗಿದೆ. ಇದಕ್ಕಾಗಿಯೇ ಇಬ್ಬರೂ ಮುಂಬೈಗೆ ಹೋಗುವ ಸ್ಲೀಪರ್ ಕೋಚ್ ಬಸ್ ಹತ್ತಿದ್ದಾರೆ. ನಂತರ ವಿಷ ಸೇವಿಸಿಕೊಂಡ ಅಖಿಲ್ ಮತ್ತು ಹೇಮಾ ನಿದ್ರಿಸಿದ್ದಾರೆ. ಊಟಕ್ಕೆಂದು ಮಾರ್ಗಮಧ್ಯೆ ಹೋಟೆಲ್​ ಬಳಿ ಬಸ್ ನಿಲ್ಲಿಸಿದ್ದಾಗ ವಿಷದ ವಾಸನೆ ಬರುವುದನ್ನು ಗಮನಿಸಿದ ಪ್ರಯಾಣಿಕರು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಬಸ್ಸಿನಲ್ಲಿದ್ದವರು ಹಾಗೂ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರೂ, ಯುವತಿ ಮೃತಪಟ್ಟಿದ್ದಾರೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Similar News