KSRTC ವ್ಯವಸ್ಥಾಪಕ ನಿರ್ದೇಶಕ ಸೇರಿ 11 ಐಎಎಸ್ ಅಧಿಕಾರಿಗಳ ವರ್ಗಾವಣೆ

Update: 2023-06-06 14:50 GMT

ಬೆಂಗಳೂರು, ಜೂ.6: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಹೊಸ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆಡಳಿತ ವರ್ಗದಲ್ಲಿ ಸರ್ಜರಿ ಮಾಡಲಾಗುತ್ತಿದ್ದು, ಇತ್ತೀಚೆಗಷ್ಟೇ ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ಸಹಕಾರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಎಸ್.ಆರ್. ಅವರನ್ನು ಶಿಕ್ಷಣ ಇಲಾಖೆ(ಉನ್ನತ ಶಿಕ್ಷಣ)ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಮಂಜುನಾಥ ಪ್ರಸಾದ್ ಎನ್. ಅವರನ್ನು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರನ್ನು ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿಯಾಗಿ, ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಮೋಹನ್ ರಾಜ್ ಕೆ.ಪಿ. ಅವರನ್ನು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರಕಾರದ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಸಾಂಖ್ಯಿಕ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರಕಾರದ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. 

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ಸದಸ್ಯ ಗಿರೀಶ್.ಆರ್. ಅವರನ್ನು ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಕರೀಗೌಡ ಅವರನ್ನು ಅಟಲ್ ಸ್ನೇಹಿ ಕೇಂದ್ರದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ತುಮಕೂರು ಜಿಲ್ಲಾಧಿಕಾರಿ ಪಾಟೀಲ್ ಯಲಗೌಡ ಶಿವನಗೌಡ ಅವರನ್ನು ಕೃಷಿ ಇಲಾಖೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಜಗದೀಶ್ ಜಿ. ಅವರನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ.ಮಹೇಶ್ ಎಂ ಅವರನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ಸದಸ್ಯರನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Similar News