ಮಕ್ಕಳನ್ನು ಸುಪರ್ದಿಗೆ ಪಡೆಯುವ ವ್ಯಾಜ್ಯ | ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಿ: ಹೈಕೋರ್ಟ್

Update: 2023-06-06 18:08 GMT

ಬೆಂಗಳೂರು, ಜೂ.6: ಮಕ್ಕಳ ಪೋಷಕತ್ವ ಹಾಗೂ ಸುಪರ್ದಿ ವ್ಯಾಜ್ಯಗಳನ್ನು ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಾತ್ರ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. 

ಮಕ್ಕಳ ಸುಪರ್ದಿಗೆ ಸಂಬಂಧಿಸಿದ ವ್ಯಾಜ್ಯದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಮಕ್ಕಳ ಸುಪರ್ದಿಗೆ ಕೋರಿ ಜಿಲ್ಲಾ ಕೋರ್ಟ್ ಸೇರಿದಂತೆ ಇತರ ಅಧೀನ ಸಿವಿಲ್ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಈ ರೀತಿಯ ಪ್ರಕರಣಗಳನ್ನು ಕೌಟುಂಬಿಕ ನ್ಯಾಯಾಲಯಗಳು ಮಾತ್ರ ವಿಚಾರಣೆ ನಡೆಸಬೇಕು ಎಂದು ಪೀಠ ತಿಳಿಸಿದೆ. 

ಸಿಆರ್‍ಪಿಸಿ ನಿಯಮ 11 ರಡಿ ಅಪ್ರಾಪ್ತ ಮಗುವನ್ನು ವಶಕ್ಕೆ ನೀಡಲು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಸೀಮ್ ಬಾನು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ. ಅಪ್ತಾಪ್ತ ಮಕ್ಕಳು ಪತಿಯ ಜೊತೆ ಇದ್ದು, ಅವರು ಹಾಸನ ಜಿಲ್ಲೆಯ ಅರೆಹಳ್ಳಿಯಲ್ಲಿ ಗ್ರಾಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ,  ಪೋಷಕತ್ವದ ಕುರಿತ ಅರ್ಜಿಯನ್ನು ಕೌಟುಂಬಿಕ ಕೋರ್ಟ್ ವಿಚಾರಣೆ ನಡೆಸಿ ಆದೇಶ ನೀಡಬಹುದು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮಕ್ಕಳ ಪೋಷಣೆ ಮತ್ತು ಸುಪರ್ದಿಗೆ ನೀಡುವ ಅಧಿಕಾರ ಕೇವಲ ಕೌಟುಂಬಿಕ ನ್ಯಾಯಾಲಯಕ್ಕೆ ಮಾತ್ರ ಇರಲಿದೆ ಎಂದು ಅಭಿಪ್ರಾಯ ಪಟ್ಟು ಆದೇಶ ನೀಡಿದೆ. 

Similar News