ಹೆಡಗೇವಾರ್ ಸೇರಿದಂತೆ ಹಲವು ವಿವಾದಾತ್ಮಕ ಪಠ್ಯಗಳಿಗೆ ಕತ್ತರಿ ಹಾಕಲು ಕಾಂಗ್ರೆಸ್‌ ಸರ್ಕಾರ ಚಿಂತನೆ

Update: 2023-06-07 08:04 GMT

ಬೆಂಗಳೂರು: ಬೆಂಗಳೂರು: ಮಧು ಬಂಗಾರಪ್ಪ ನೇತೃತ್ವದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರವು ಶಾಲಾ ಪಠ್ಯದಲ್ಲಿ ಅಳವಡಿಸಿದ್ದ ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಪಠ್ಯ ಸೇರಿದಂತೆ ಹಲವು ವಿವಾದಾತ್ಮಕ ಪಠ್ಯಗಳನ್ನು ತೆಗೆದುಹಾಕಲು ಯೋಜಿಸುತ್ತಿದೆ ಎಂದು ಇಲಾಖೆ ಮೂಲಗಳು ಹೇಳಿವೆ ಎಂದು ವರದಿಯಾಗಿದೆ.

ಪ್ರಸ್ತಾವಿತ ಬದಲಾವಣೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದ್ದು, ಇನ್ನೊಂದು ವಾರದಲ್ಲಿ ಶಾಲೆಗಳಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿ, ಕೈಬಿಡಲಾದ ಪಾಠಗಳನ್ನು ಮಕ್ಕಳಿಗೆ ಬೋಧಿಸದಂತೆ ಶಿಕ್ಷಕರಿಗೆ ಸೂಚಿಸಲಾಗುವುದು ಎಂದು ಹೇಳಲಾಗಿದೆ.

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ, ಹಿರಿಯ ಶಿಕ್ಷಣಾಧಿಕಾರಿ ನಿರಂಜನಾರಾಧ್ಯ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಡಗೇವಾರ್ ಮಾತ್ರವಲ್ಲದೆ, ಹಿಂದುತ್ವ ಪ್ರತಿಪಾದಕ ಚಕ್ರವರ್ತಿ ಸೂಲಿಬೆಲೆ ಮತ್ತು ಬನ್ನಂಜೆ ಗೋವಿಂದಾಚಾರ್ಯ ಬರೆದ ಪಾಠಗಳನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಮಾಜ ವಿಜ್ಞಾನ ಪುಸ್ತಕಗಳಲಿರುವ ಕೆಲವು ಅವಹೇಳನಕಾರಿ ವಿಷಯಗಳನ್ನು ಕೂಡಾ ತೆಗೆದುಹಾಕಲು ನಾವು ಶಿಫಾರಸು ಮಾಡುತ್ತೇವೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದವರು ಹೇಳಿರುವುದಾಗಿ ಮೂಲವೊಂದು ತಿಳಿಸಿದೆ.

ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಮಂಡಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಲಪಂಥೀಯ ಬರಹಗಾರ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಅಡಿಯಲ್ಲಿ ಹಿಂದಿನ ಬಿಜೆಪಿ ಆಡಳಿತವು ಶಾಲಾ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. 

ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೊಸ ಪಠ್ಯಪುಸ್ತಕಗಳನ್ನು ರೂಪಿಸಲು ತಜ್ಞರ ಸಮಿತಿ ರಚನೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಸಮಿತಿಯನ್ನು ರಚಿಸುವ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ತಜ್ಞರು ಸರ್ಕಾರವನ್ನು ಕೇಳಿದ್ದಾರೆ. 

"ಹೊಸ ಪಠ್ಯಪುಸ್ತಕಗಳನ್ನು ರೂಪಿಸುವ ಸಮಯ ಇದು. ಆದರೆ ಅದಕ್ಕಾಗಿ ಎನ್‌ಇಪಿಯನ್ನು ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದರ ಕುರಿತು ಸರ್ಕಾರವು ತನ್ನ ನಿಲುವಿನಲ್ಲಿ ಸ್ಪಷ್ಟವಾಗಿರಬೇಕು" ಎಂದು ತಜ್ಞರು ಹೇಳಿರುವುದಾಗಿ ಮೂಲಗಳು ತಿಳಿಸಿದೆ.

ಸಿದ್ದರಾಮಯ್ಯ ಸಿಎಂ ಆದ ಬೆನ್ನಲ್ಲೇ ಕೆ.ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ವಸುಂಧರಾ ಭೂಪತಿ ಸೇರಿದಂತೆ ಹಲವು ಚಿಂತಕರ ಗುಂಪು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಹಿಂದಿನ ಬಿಜೆಪಿ ಆಡಳಿತದಿಂದ ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ಹಿಂತೆಗೆದುಕೊಳ್ಳುವಂತೆ ಹೊಸ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದರು.

Similar News