ತುಮಕೂರು | ರಸ್ತೆಗೆ ಬೇಲಿ ಹಾಕಿ ದಲಿತರು ತಿರುಗಾಡದಂತೆ ಅಡ್ಡಿ ಆರೋಪ: ಕ್ರಮಕ್ಕೆ ಒತ್ತಾಯ

Update: 2023-06-07 12:21 GMT

ತುಮಕೂರು.ಜೂ.07: ಹಲವಾರು ವರ್ಷಗಳಿಂದ ದಲಿತರು ತಮ್ಮ ಕಾಲೋನಿಗಳಿಗೆ ತಿರುಗಾಡುತಿದ್ದ ರಸ್ತೆಗೆ ಬೇಲಿ ಹಾಕಿ ಒಡಾಡದಂತೆ ತೊಂದರೆ ನೀಡುತ್ತಿರುವ ಆರೋಪ ಕೇಳಿ ಬಂದಿದೆ. 

ತಮಗೆ ತೊಂದರೆ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತರು ಜಿಲ್ಲಾಡಳಿತ ಮತ್ತು ನಗರಪಾಲಿಕೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

'ನಗರದ 31ನೇ ವಾರ್ಡಿಗೆ ಸೇರಿದ ಐತಿಹಾಸಿಕ ಶೆಟ್ಟಿಹಳ್ಳಿ ಅಂಜನೇಯಸ್ವಾಮಿ ದೇವಾಲಯದ ಬಲಭಾಗದಲ್ಲಿ ಸುಮಾರು 80 ದಲಿತ ಕುಟುಂಬಗಳು ವಾಸವಾಗಿದ್ದು, ಇಲ್ಲಿ ಹಟ್ಟಿ ಮಾರಮ್ಮ ದೇವಾಲಯವೂ ಇದೆ.ಗ್ರಾಮದ ದಲಿತರು ತಾತ, ಮುತ್ತಾನನ ಕಾಲದಿಂದಲೂ ಹಟ್ಟಿಮಾರಮ್ಮ ದೇವಾಲಯ ಮತ್ತು ಸಹ್ಯಾದ್ರಿ ಸ್ಟೋರ್ ಗಳ ನಡುವೆ ಇರುವ ಜಾಗವನ್ನು ರಸ್ತೆಯಾಗಿ ಮಾರ್ಪಡಿಸಿ ಓಡಾಡುತ್ತಾ ಬಂದಿದ್ದಾರೆ'.

'ಇತ್ತೀಚೆಗೆ ಅಂದರೆ 10 ವರ್ಷಗಳಿಂದ ಮಡಿವಾಳ ಜನಾಂಗಕ್ಕೆ ಸೇರಿದ ನಾಗರಾಜು ಎಂಬುವವರು ದಲಿತರು ತಿರುಗಾಡುತ್ತಿದ್ದ ಜಾಗವನ್ನು ನಾನು ಖರೀದಿ ಮಾಡಿದ್ದೇನೆ. ಇದು ನನ್ನ  ಜಾಗ ಎಂದು ತಗಾದೆ ತೆಗೆದು, ಇದನ್ನು ಪ್ರಶ್ನಿಸಿದ ಪರಿಶಿಷ್ಟ ಜಾತಿಯ ಯುವಕರ ಮೇಲೆ ಕೇಸು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ. ಅಲ್ಲದೆ ದಲಿತ ಕಾಲೊನಿಯಲ್ಲಿ ಸತ್ತ ಶವ ಸಾಗಿಸಲು ಜಾಗ ಬಿಡದೆ ಸತ್ತವರ ಮನೆಯಲ್ಲಿಯೂ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ' ಎಂಬುದು ಶೆಟ್ಟಿಹಳ್ಳಿ ದಲಿತ ಕಾಲೋನಿಯ  ಗೋಪಾಲಯ್ಯ, ದೀಪಿಕಾ, ಪುಟ್ಟರಾಜು, ಮಾರುತಿ ಆರ್, ರಘುಕುಮಾರ್, ವೆಂಕಟೇಶ್, ಆಂಜಿನಪ್ಪ, ರಾಜಣ್ಣ, ಮುನೇಶ್, ಶಶಿಕುಮಾರ್, ಮಾರುತಿ ಜಿ, ಗಂಗರಾಮ, ಸಂಜೀವಯ್ಯ, ರಾಮಣ್ಣ, ನರಸಿಂಹಣ್ಣ, ಮಲ್ಲೇಶ್, ರಾಮಚಂದ್ರಯ್ಯ, ಹನುಮಂತರಾಯಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಕಳೆದ 10 ವರ್ಷಗಳಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಹಾಗು ನಗರಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದಲಿತರಿಗೆ ಓಡಾಡಲು ತೊಂದರೆ ನೀಡುತ್ತಿರುವ ನಾಗರಾಜು ಅವರಿಗೆ ಖಾತೆಯಾಗಿರುವ ಭೂಮಿಯ ವಿಸ್ತೀರ್ಣಕ್ಕೂ, ಸ್ಥಳದಲ್ಲಿರುವ ಜಮೀನಿಗೂ ಸಾಕಷ್ಟು ವೆತ್ಯಾಸವಿದ್ದು, ತಮ್ಮದಲ್ಲದ ಜಮೀನನ್ನು ತನ್ನದೆಂದು ದುಂಡಾವರ್ತನೆ ತೋರಿ ದಲಿತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸಂತ್ರಸ್ತರು ದೂರಿದರು.

ಶೆಟ್ಟಿಹಳ್ಳಿ ದಲಿತ ಕಾಲೋನಿಯ ಮುಖಂಡರ ಮನವಿ ಮೇರೆಗೆ ಸ್ಥಳಕ್ಕೆ ತೆರೆಳಿ ಪರಿಶೀಲನೆ ನಡೆಸಿದ ಕೊಳಗೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎ.ನರಸಿಂಹಮೂರ್ತಿ,ಮಡಿವಾಳ ಜನಾಂಗಕ್ಕೆ ಸೇರಿದ ನಾಗರಾಜುಗೆ ಅಕ್ರಮವಾಗಿ ಖಾತೆ ಮಾಡಿ ಕೊಟ್ಟಿರುವುದು ಸ್ಪಷ್ಟವಾಗಿದ್ದು, ನಗರಪಾಲಿಕೆ ಕೂಡಲೇ ಪಿಐಡಿ ನಂ. 48927 ಮತ್ತು 48928 ಪರಿಶೀಲಿಸಿ, ಖಾತೆಗಳನ್ನು ರದ್ದು ಪಡಿಸಿ, ದಲಿತರು ಓಡಾಡಲು ರಸ್ತೆ ನಿರ್ಮಿಸಿಕೊಡಬೇಕು.ದಲಿತ ಕುಟುಂಬಗಳಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. 

Similar News