ಶೈಕ್ಷಣಿಕ ಸಂಸ್ಥೆಗಳಲ್ಲಿ ದೂರು ಸಮಿತಿ ರಚಿಸಲು ಕೋರಿದ್ದ ಅರ್ಜಿ ಹೈಕೋರ್ಟ್ ನಿಂದ ಇತ್ಯರ್ಥ

Update: 2023-06-07 13:59 GMT

ಬೆಂಗಳೂರು, ಜೂ.7: ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳನ್ನು ತಡೆಯುವ ಹಿನ್ನೆಲೆ ಸಲುವಾಗಿ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ಕಡ್ಡಾಯವಾಗಿ ರಚಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿ ಆದೇಶಿಸಿದೆ.

ಈ ಸಂಬಂಧ ಕ್ರೀಟಂಸ್ ಪ್ರೊ ಬೋನೋ ಮತ್ತು ಸೆಂಟರ್ ಫಾರ್ ಲೀಗಲ್ ರೀಸರ್ಚ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥಪಡಿಸಿದೆ. 

ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠವು ಇದೇ ರೀತಿಯ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದಿಷ್ಟ ಅವಧಿಯಲ್ಲಿ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸಲು ಯಾವುದೇ ಕಾರಣಗಳು ಇಲ್ಲ ಎಂದು ಹೇಳಿದೆ.

ಅಲ್ಲದೇ, ಈ ಸಂಬಂಧ ಈಗಾಗಲೇ ಸುಪ್ರೀಂಕೋರ್ಟ್ ತಾನು ನೀಡಿರುವ ನಿರ್ದೇಶನದ ಪಾಲನೆಗೆ ಸಂಬಂಧಿಸಿದಂತೆ ಎಂಟು ವಾರದಲ್ಲಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ. ಹೀಗಾಗಿ, ಇಲ್ಲಿ ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ಅರ್ಜಿಯನ್ನು ಇತ್ಯರ್ಥ ಮಾಡಿದೆ.

ಜುಲೈ 2014ರಲ್ಲಿ ಸರಕಾರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು. ಅಲ್ಲದೆ, ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಸರಕಾರದ ಸುತ್ತೋಲೆಯಲ್ಲಿ ಪೊಕ್ಸೊ ಕಾಯಿದೆ ಸೇರಿದಂತೆ ಹಲವು ಕಾಯಿದೆಗಳನ್ನು ಉಲೇಖಿಸಲಾಗಿದೆ. ಅಲ್ಲದೆ, ಮಕ್ಕಳ ಮೇಲಿನ ಅಪರಾಧಗಳಿಗೆ ಸಂಬಂಧಿಸಿದಂತೆ ಎಷ್ಟು ಎಚ್ಚರಿಕೆಯಿಂದಿರಬೇಕು ಮತ್ತು ಮುನ್ನೆಚ್ಚರಿಕೆ ಕೈಗೊಳ್ಳಬೇಕು, ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರ ಹೊಣೆಗಾರಿಕೆಗಳನ್ನು ವಿವರಿಸಲಾಗಿದೆ. ಅವುಗಳನ್ನು ಪಾಲನೆ ಮಾಡುವಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.  

Similar News