ಲೈಂಗಿಕ ಕಿರುಕುಳ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮುರುಘಾ ಶ್ರೀ

Update: 2023-06-07 16:16 GMT

ಬೆಂಗಳೂರು, ಜೂ.7: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಮುರುಘಾ ಶ್ರೀ ನಿಯಮಿತ(ರೆಗ್ಯುಲರ್) ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ಈ ಸಂಬಂಧ ಆರೋಪಿ ಮುರುಘಾ ಶ್ರೀ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ನ್ಯಾ.ಪಿ.ಎಂ.ನವಾಜ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ಸದ್ಯದಲ್ಲೇ ವಿಚಾರಣೆಗೆ ನಿಗದಿಯಾಗುವ ನಿರೀಕ್ಷೆ ಇದೆ. ಮುರುಘಾ ಶರಣರ ಪರವಾಗಿ ವಕೀಲ ಸಂದೀಪ್ ಪಾಟೀಲ್ ಬುಧವಾರ ಅರ್ಜಿ ದಾಖಲಿಸಿದರು. 

ಪ್ರಕರಣವೇನು?: ಮುರುಘಾ ಮಠದ ಹಾಸ್ಟೆಲ್‍ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಶ್ರೀಯನ್ನು ಕಳೆದ ಸೆಪ್ಟಂಬರ್ 2ರಂದು ಚಿತ್ರದುರ್ಗದ ಪೆÇಲೀಸರು ಬಂಧಿಸಿದ್ದರು.

ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿಯೇ ಇದ್ದಾಗ ರಾತ್ರಿ ವೇಳೆ ಮಠಕ್ಕೆ ದಾಳಿ ನಡೆಸಿದ್ದ ಪೊಲೀಸರು ಪೊಕ್ಸೊ ಕಾಯ್ದೆಯಡಿ ಮುರುಘಾ ಶ್ರೀಯನ್ನು ಬಂಧನ ಮಾಡಿದ್ದರು. ಮುರುಘಾ ಶ್ರೀ ವಿರುದ್ಧ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ದೂರು ದಾಖಲಾದ ಏಳು ದಿನದ ಬಳಿಕ ಮುರುಘಾ ಶ್ರೀಯನ್ನು ಪೊಲೀಸರು ಬಂಧಿಸಿದ್ದರು.

ಮೈಸೂರಿನ ಒಡನಾಡಿ ಸಂಸ್ಥೆಯ ಸಹಾಯ ಪಡೆದು ಮೈಸೂರಿನ ನಝರಾಬಾದ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರು ದೂರು ದಾಖಲಿಸಿದ್ದರು. 

Similar News