ಸಿದ್ದರಾಮಯ್ಯ ಸರಕಾರದ ಹಲವು ಸಂಸ್ಥೆಗಳು ನಷ್ಟದಲ್ಲಿವೆ ಎಂದ ಬಿಜೆಪಿಗೆ ತಿರುಗು ಬಾಣ ಆಯ್ತು ಟ್ವೀಟ್!

ಇದೆಲ್ಲ ನಿಮ್ಮದೇ ಸರಕಾರದ ಸಾಧನೆ ಎಂದ ನೆಟ್ಟಿಗರು

Update: 2023-06-08 08:05 GMT

ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರದಲ್ಲಿ ಹಲವು ಇಲಾಖೆ ಹಾಗೂ ನಿಗಮ ಮಂಡಳಿಗಳು ನಷ್ಟದಲ್ಲಿವೆ ಎಂಬ ವಿಪಕ್ಷ ಬಿಜೆಪಿಯ ಆರೋಪಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ಹಲವು ಇಲಾಖೆಗಳ ಸಂಸ್ಥೆಗಳು ಅಧಃಪತನದ ಪಟ್ಟಿಯಲ್ಲಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಆರೋಪಿಸಿದೆ. ಆದರೆ, ಇವೆಲ್ಲ ಸಿದ್ದರಾಮಯ್ಯ ಅವರ ಸರಕಾರ ಬಂದ ಹದಿನೈದು ದಿನದಲ್ಲಿ ಆಗಿ ಹೋಯಿತಾ? ಎಂದು ಬಿಜೆಪಿಯ ಟ್ವೀಟ್ ಗೆ ಹಲವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ಕೆಲವರು ಬಿಜೆಪಿ ಆಡಳಿತದಲ್ಲಿ ಹಲವು ಇಲಾಖೆಗಳ ಸಂಸ್ಥೆಗಳು ನಷ್ಟದಲ್ಲಿತ್ತು ಎನ್ನಲಾದ ಪತ್ರಿಕಾ ವರದಿಗಳನ್ನು ಹಂಚಿಕೊಂಡಿದ್ದಾರೆ. 

ಬಿಜೆಪಿಯ ಆರೋಪಗಳೇನು? 

'ರಾಜ್ಯದಲ್ಲಿ ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನಕ್ಕೆ ಪತರುಗುಟ್ಟುತ್ತಿರುವ ಸಿದ್ದರಾಮಯ್ಯ ಸರ್ಕಾರ ಸಿಕ್ಕ ಸಿಕ್ಕ ಇಲಾಖೆಗೆ ‘ಕೈ’ ಹಾಕಿ ಆರ್ಥಿಕ ದಿವಾಳಿ ಎಬ್ಬಿಸುತ್ತಿದೆ. ಬಿಎಂಟಿಸಿ- ಆರ್ಥಿಕ ಇಂಧನವಿಲ್ಲ, ಜಲಮಂಡಳಿ- ಹಣಕಾಸಿನ ಹಾಹಾಕಾರ, ಕೆಎಸ್‌ಆರ್‌ಟಿಸಿ - ನಷ್ಟದ ಹೆದ್ದಾರಿಯಲ್ಲಿ, ವಿದ್ಯುತ್ ಸರಬರಾಜು ಕಂಪೆನಿಗಳು - ಮುಳುಗುವ ಹಾದಿಯಲ್ಲಿ , ಇನ್ನು ಹಲವು ಇಲಾಖೆಗಳ ಸಂಸ್ಥೆಗಳು ಅಧಃಪತನದ ಪಟ್ಟಿಯಲ್ಲಿದ್ದು, ‘ಅರ್ಥ’ವಿಲ್ಲದ #ATMSarkara ಸೃಷ್ಟಿಸಿರುವ ಅರಾಜಕತೆಗೆ ಬಲಿಯಾಗಲು ‘ಸಿದ್ದ’ವಾಗಿವೆ' ಎಂದು ಬಿಜೆಪಿ ಟ್ವೀಟ್ ಮಾಡಿದೆ. 

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮನ್ಸೂರ್ ಖಾನ್, ''ಬಿಜೆಪಿಯು ತನ್ನ ಆಡಳಿತಾವಧಿಯಲ್ಲಿನ ದುರಾಡಳಿತ ಹಾಗೂ ತಾನು ಯಾವ್ಯಾವ ಇಲಾಖೆಗಳನ್ನು ದಿವಾಳಿಯ ಅಂಚಿಗೆ ದೂಡಿದ್ದೆ ಎಂಬುದನ್ನು ಸವಿವರವಾಗಿ ಜಗಜ್ಜಾಹೀರುಗೊಳಿಸಿದೆ. ಬಿಜೆಪಿ ಸರ್ಕಾರ ಯಾವೆಲ್ಲ ಇಲಾಖೆಗಳಿಗೆ ಮುಳುಗು ನೀರು ತಂದಿತ್ತು ಎಂಬುದನ್ನು ರಾಜ್ಯದ ಜನತೆಗೆ ವಿವರಿಸಿದ್ದಕ್ಕೆ ಅಭಿನಂದನೆಗಳು!'' ಎಂದು ವ್ಯಂಗ್ಯವಾಡಿದ್ದಾರೆ. 

ಭೀಮನಗೌಡ ಪರಗೊಂಡ ಎಂಬವರು ಪ್ರತಿಕ್ರಿಯಿಸಿ, ''ಬಿಎಂಟಿಸಿ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿದೆ'' ಎನ್ನಲಾದ ಪತ್ರಿಕೆಯೊಂದರ ವರದಿಯನ್ನು ಹಂಚಿಕೊಂಡಿದ್ದು, '4 ವರ್ಷದ ಆಡಳಿತ ಮಾಡಿದ್ದು ಬಿಜೆಪಿ. ಯಾವ ಉಚಿತ ಕೊಡದಿದ್ದರೂ ಹಿಂಗ್ ಯಾಕೆ ಆಯ್ತು? ಕಾರಣ ಏನು? ಹೊಣೆ ಯಾರು?' ಎಂದು ಪ್ರಶ್ನೆ ಮಾಡಿದ್ದಾರೆ. 

''ಬಿಜೆಪಿಯವರೇ, ಕಳೆದ ನಾಲ್ಕು ವರ್ಷಗಳ ನಿಮ್ಮ ಸಾಧನೆಯನ್ನು ನೀವೇ ಖುದ್ದಾಗಿ ವರ್ಣಿಸ್ತಾ ಇದ್ದೀರಿ. ಸೂಪರ್ ನೀವು'' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

''ನಿಮ್ಮ ಬಿಜೆಪಿ ಸರಕಾರದ ಅವಧಿಯ ಸಾಧನೆ, ನೀವೇ ವಿಮರ್ಶೆ ಮಾಡಿ ನಗೆಪಾಟಲಿಗೆ ಒಳಗಾಗಿದ್ದಿರಿ'' ಎಂದು ಗೋವಿಂದಪ್ಪ ಎಂಬವರು ಟೀಕಿಸಿದ್ದಾರೆ. 

Similar News