ರಾಜ್ಯದಲ್ಲಿ 28,276 ಗ್ರಾಮಗಳಿಗೆ ಸ್ಮಶಾನ ಭೂಮಿ ಸೌಲಭ್ಯ: ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಕೆ

Update: 2023-06-08 17:43 GMT

ಬೆಂಗಳೂರು, ಜೂ.8:  ರಾಜ್ಯದಲ್ಲಿ ಜನವಸತಿ ಇರುವ 28,281 ಗ್ರಾಮಗಳ ಪೈಕಿ ಇಲ್ಲಿಯವರೆಗೂ 28,276 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಸರಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ಸರಕಾರಿ ವಕೀಲರು ಹಾಜರಾಗಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಸಲ್ಲಿಸಿದ ಅಫಿಡವಿಟ್‍ಅನ್ನು ಪೀಠಕ್ಕೆ ಒದಗಿಸಿದರು.

ಒಟ್ಟು  28,276 ಜನವಸತಿ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ. ಉಳಿದಂತೆ 5 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಬೇಕಿದೆ ಎಂದು ಅಫಿಡವಿಟ್‍ನಲ್ಲಿ ವಿವರಿಸಲಾಗಿದೆ.

ಸ್ಮಶಾನ ಜಾಗವಿಲ್ಲದ ಗ್ರಾಮಗಳ ಅಗತ್ಯ ಜಮೀನು ಕೋರುವಂತೆ ತಿಳಿಸಿ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಅದರ ಪರಿಣಾಮ ಕೆಲ ಸ್ಥಳೀಯ ನಿವಾಸಿಗಳು ಸ್ಮಶಾನಕ್ಕೆ ಹೆಚ್ಚುವರಿ ಜಮೀನು ಒದಗಿಸುವಂತೆ ಕೋರಿದ್ದಾರೆ. ಮತ್ತಷ್ಟು ಜನವು ತಮ್ಮ ಧರ್ಮದವರಿಗೆ ಪ್ರತ್ಯೇಕ ಸ್ಮಶಾನ ಸೌಲಭ್ಯ ಒದಗಿಸುವಂತೆ ತಿಳಿಸಿದ್ದಾರೆ. ಅವರ ಮನವಿಗಳನ್ನು ಕಾನೂನು ಪ್ರಕಾರ ಪರಿಶೀಲನೆ ನಡೆಸಲಾಗುವುದು ಎಂದು ರಾಜ್ಯ ಸರಕಾರವು ನ್ಯಾಯಾಲಯಕ್ಕೆ ತಿಳಿಸಿದೆ.

Similar News