ಅರಿಕೊಂಪನ್ ಆನೆಯೂ, ಸಂರಕ್ಷಣೆಯ ಮಂತ್ರವೂ

Update: 2023-06-08 18:34 GMT

ಸ್ಥಳೀಯರು ಅರಿಕೊಂಪನ್‌ನನ್ನು ಶಾಶ್ವತವಾಗಿ ಸೆರೆಯಲ್ಲಿಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅದು ವನ್ಯಜೀವಿಗಳನ್ನು ಸಂರಕ್ಷಿಸುವ ಸಮರ್ಪಕ ವಿಧಾನವಲ್ಲ. ಆನೆಗಳ ಸ್ಥಳಾಂತರ ವಿವಾದಗ್ರಸ್ಥ ವಿಷಯ. ಆ ಕ್ಷಣದಲ್ಲಿ ಜನರ ಆಕ್ರೋಶ ತಣಿಸಲು ಬಳಸಬಹುದಷ್ಟೆ. ಕೇರಳದಲ್ಲಿ ಇಂಥ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಈ ವರ್ಷ ಸೆರೆ ಹಿಡಿದ ಪಿಟಿ-7 ಆನೆಯನ್ನು ಬಿಡುಗಡೆಗೊಳಿಸಬೇಕೆಂದು ಅರ್ಜಿ ಸಲ್ಲಿಕೆಯಾಗಿದೆ. ಸೆರೆ ಹಿಡಿದಾಗ ಆತನ ಮೈಮೇಲೆ 17 ಗಾಯಗಳಿದ್ದವು. ಒಂದುವೇಳೆ ಸೆರೆಹಿಡಿದ ಪ್ರದೇಶದಲ್ಲೇ ಮತ್ತೆ ಬಿಡುಗಡೆಗೊಳಿಸಿದರೆ, ಆತ ಕ್ಷೇಮವಾಗಿರುತ್ತಾನಾ?



ಮತ್ತೊಂದು ಪರಿಸರ ದಿನ ಬಂದುಹೋಗಿದೆ. ಬಳ್ಳಾರಿಯ ಒಡಲನ್ನು ಬಗೆದ ಶಾಸಕ ಗಾಲಿ ಜನಾರ್ದನ ರೆಡ್ಡಿ ಕೂಡ 'ಪರಿಸರ ದಿನ'ಕ್ಕೆ ಶುಭಾಶಯ ಕೋರಿದ್ದಾರೆ! ಇದೇ ಹೊತ್ತಿನಲ್ಲಿ ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ವಾರ್ಷಿಕ ಆನೆ ಗಣತಿ ನಡೆದಿದೆ; ಕೇರಳದಲ್ಲಿ ಆನೆಯೊಂದರ ಸೆರೆ-ಸ್ಥಳಾಂತರ ಕಾರ್ಯಾಚರಣೆಗಳು ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಿವೆ. ದೇಶದಲ್ಲಿ 29,964 ಆನೆಗಳಿದ್ದು, ಇದರಲ್ಲಿ ರಾಜ್ಯದ ಪಾಲು 6,049. ಇದರಲ್ಲಿ ಅಂದಾಜು 100 ಆನೆಗಳು ಸಂರಕ್ಷಿತ ಅರಣ್ಯಗಳ ಹೊರಗೆ ಇವೆ. 2021ರಲ್ಲಿ ದೇಶಾದ್ಯಂತ 301 ಆನೆಗಳು ಮೃತಪಟ್ಟಿವೆ(ರೈಲು ಅಪಘಾತ 222, ಬೇಟೆ 25, ವಿದ್ಯುತ್ ಸ್ಪರ್ಷ 43 ಮತ್ತು ವಿಷಪ್ರಾಶನ 11). ವನ್ಯಮೃಗ-ಮನುಷ್ಯರ ನಡುವಿನ ಸಂಘರ್ಷ ಹೆಚ್ಚಿದ್ದು, ರಾಜ್ಯದಲ್ಲಿ ಆನೆ ದಾಳಿಯಿಂದ 2019-20ರಲ್ಲಿ 29, 2020-21ರಲ್ಲಿ 41, 2021-22ರಲ್ಲಿ 29 ಹಾಗೂ 2022-23ರಲ್ಲಿ 29 ಸಾವು ಸಂಭವಿಸಿದೆ. ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಕೆ ಬಳಿಕ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅರಣ್ಯ ಇಲಾಖೆ ಹೇಳುತ್ತದೆ. ಆದರೆ, ಬೆಳೆ ಹಾನಿ ಕಡಿಮೆಯಾಗಿಲ್ಲ. ಕೃಷಿ, ಉದ್ಯಮ, ರಸ್ತೆ ನಿರ್ಮಾಣ ಸೇರಿದಂತೆ ಕಾಡುಗಳ ಅರಣ್ಯೇತರ ಬಳಕೆ ಹೆಚ್ಚಿದೆ. ದೇಶದಲ್ಲಿ 5.41 ಲಕ್ಷ ಎಕರೆ ಮತ್ತು ರಾಜ್ಯದಲ್ಲಿ 2 ಲಕ್ಷ ಎಕರೆ ಅರಣ್ಯ ಒತ್ತುವರಿಯಾಗಿದೆ. ಅರಣ್ಯಗಳು ಛಿದ್ರಗೊಂಡಿದ್ದು, ರಸ್ತೆ ನಿರ್ಮಾಣ-ಜನವಸತಿ ಕಾಲನಿಗಳಿಂದಾಗಿ ವನ್ಯಜೀವಿ ಕಾರಿಡಾರ್‌ಗಳು ಭಂಗಗೊಂಡಿವೆ; ಹೋಂಸ್ಟೇ-ರೆಸಾರ್ಟ್‌ಗಳು ತಲೆಯೆತ್ತಿವೆ. ಕಾಡುಗಳಲ್ಲಿ ಲಂಟಾನಾ, ಯೂಪಟೋರಿಯಂನಂಥ ಆಕ್ರಮಣಕಾರಿ ಕಳೆ ಗಿಡಗಳು ವ್ಯಾಪಕವಾಗಿ ಹರಡಿರುವುದರಿಂದ, ಮೇವಿನ ಲಭ್ಯತೆ ಕಡಿಮೆಯಾಗುತ್ತಿದೆ. ಮನುಷ್ಯರ ಹಸ್ತಕ್ಷೇಪದಿಂದ ಕಾಡಿನ ವೈವಿಧ್ಯ ಇಲ್ಲವಾಗುತ್ತಿದೆ. ಕಾಡುಗಳ ಧಾರಣ ಸಾಮರ್ಥ್ಯವನ್ನು ಮೀರಿ ಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಬೇಸಿಗೆಯಲ್ಲಿ ಆಹಾರ-ನೀರಿನ ಕೊರತೆಯಿಂದ ಬದುಕು ಒಂದು ಸವಾಲಾಗಿ ಪರಿಣಮಿಸಿದೆ.

ಅರಿಕೊಂಪನ್ ಕಥೆ
ಅರಿ ಎಂದರೆ ಅಕ್ಕಿ ಮತ್ತು ಕೊಂಪನ್ ಎಂದರೆ ಸಲಗ. ಕೇರಳದ ದೇವಿಕುಲಂ ಅರಣ್ಯ ಪ್ರದೇಶದ ಮುತ್ತುಕಂಡ್ ಏಲಕ್ಕಿ ತೋಟದಲ್ಲಿ ತಾಯಿಯೊಟ್ಟಿಗೆ ಮೊದಲ ಬಾರಿಗೆ ಕಾಣಿಸಿಕೊಂಡ. ಕಾಲು ಗಾಯದಿಂದ ಬಳಲುತ್ತಿದ್ದ ತಾಯಿ, ಚಿಕಿತ್ಸೆ ಫಲಿಸದೆ ಮೃತಪಟ್ಟಳು. ಬಾಲ್ಯದಿಂದಲೇ ಅಕ್ಕಿ ಕಳವು ಮಾಡುತ್ತಿದ್ದ ಅರಿಕೊಂಪನ್, ಆನಂತರ ಪಡಿತರ ಅಂಗಡಿಗಳಿಗೆ ನುಗ್ಗಲಾರಂಭಿಸಿದ. ಬಲಗಣ್ಣು ಅರೆ ಗುರುಡು. ಇಡುಕ್ಕಿ ಜಿಲ್ಲೆಯ ಸಂತನ್‌ಪಾರ ಮತ್ತು ಚಿನ್ನಕನಲ್ ಪಂಚಾಯತ್ ವ್ಯಾಪ್ತಿಯಲ್ಲಿ 10 ವರ್ಷದಿಂದ ಅಲೆಯುತ್ತಿದ್ದು, 7 ಮಂದಿಯ ಸಾವು ಹಾಗೂ 300ಕ್ಕೂ ಅಧಿಕ ಮನೆಗಳನ್ನು ಜಖಂಗೊಳಿಸಿದ್ದರಿಂದ, ಜನ ಸಿಟ್ಟಿಗೆದ್ದರು. ಅವನನ್ನು ಸೆರೆಹಿಡಿಯಬೇಕೆಂದು ಅರಣ್ಯ ಇಲಾಖೆ ಮೇಲೆ ಒತ್ತಡ ಹಾಕಿದರು. ಸೆರೆ ಹಿಡಿಯುವಿಕೆಯನ್ನು ವಿರೋಧಿಸಿ ಪೀಪಲ್ ಫಾರ್ ಎನಿಮಲ್ಸ್ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿತು. 13 ಪಂಚಾಯತ್‌ಗಳು ಈ ಅರ್ಜಿಯನ್ನು ವಿರೋಧಿಸಿದವು. ಪರಂಬಿಕುಲಂಗೆ ಸ್ಥಳಾಂತರಿಸಬೇಕೆಂಬ ನ್ಯಾಯಾಲಯದ ಎಪ್ರಿಲ್ 13ರ ಆದೇಶವನ್ನು ಸ್ಥಳೀಯ ಶಾಸಕ ಪ್ರಶ್ನಿಸಿದರು. ಆನೆಯ ಸ್ವಸ್ಥಾನಕ್ಕೆ ಪರಂಬಿಕುಲಂ ತೀರ ಹತ್ತಿರವಿದ್ದು, ಮತ್ತೆ ವಾಪಸಾಗುತ್ತದೆ ಎನ್ನುವುದು ಅವರ ಆತಂಕ. ಜನ ಕೂಡ ಪ್ರತಿಭಟಿಸಿದರು. ಎಪ್ರಿಲ್ 29ರಂದು ಸೆರೆ ಕಾರ್ಯಾಚರಣೆ ನಡೆದು, 5 ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ, 4 ಕುಮ್ಕಿ ಆನೆಗಳು ಮತ್ತು 150 ಸಿಬ್ಬಂದಿ ನೆರವಿನಿಂದ ಟ್ರಕ್‌ಗೆ ಏರಿಸಲಾಯಿತು. ಚಿನ್ನಕನಲ್‌ನಿಂದ 100 ಕಿ.ಮೀ. ದೂರದ ತೆಕ್ಕಡಿಯ ಕುಯಿಲಿಗೆ ಕರೆತಂದಾಗ, ಜನ ಗಲಾಟೆ ಮಾಡಬಹುದು ಎಂದು ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಆದರೆ, ಜನ ರಸ್ತೆಯ ಎರಡೂ ಬದಿ ನಿಂತು ಹೂಮಳೆಗರೆದರು. ಎಪ್ರಿಲ್ 29ರಂದು ಪೆರಿಯಾರ್ ಹುಲಿ ಕಾಡಿನಲ್ಲಿ ಅವನನ್ನು ಬಿಡಲಾಯಿತು. ಆನಂತರ ಶೇ.80ರಷ್ಟು ಆನೆ ದಾಳಿ ಪ್ರಕರಣಗಳು ಕಡಿಮೆಯಾದವು ಎಂದು ಅರಣ್ಯ ಇಲಾಖೆ ಹೇಳಿಕೊಂಡಿತು.

ಕತೆ ಅಷ್ಟಕ್ಕೆ ಮುಗಿಯಲಿಲ್ಲ. ಕೇರಳ-ತಮಿಳುನಾಡು ಗಡಿ ಪ್ರದೇಶದಲ್ಲಿ ಅವನ ಸುತ್ತಾಟ ಮುಂದುವರಿಯಿತು. ತಮಿಳುನಾಡಿನ ಚಿನ್ನಮನೂರ್ನಿಂದ ಮೇಘಮಲೈಗೆ ತೆರಳುತ್ತಿದ್ದಾಗ ಅಡ್ಡ ಬಂದ ಬಸ್ ಮೇಲೆ ದಾಳಿ ನಡೆಸುವಂತೆ ನಟಿಸಿದ. ಆದರೆ, ಯಾವುದೇ ಹಾನಿ ಮಾಡಲಿಲ್ಲ. ಮೇಘಮಲೈಯಲ್ಲಿ ಒಂದು ವಾರ ಕಳೆದು, ಬಳಿಕ ಮೇ 22ರಂದು ಕೇರಳ ಗಡಿ ತಲುಪಿದ. ಮೇ 27ರಂದು ಕುಂಬಂನಲ್ಲಿ ದಾಳಿ ನಡೆಸಿದಾಗ, ವ್ಯಕ್ತಿಯೊಬ್ಬರು ಮೃತಪಟ್ಟರು. ಕುಂಬಂನಲ್ಲಿ ನಿಷೇಧಾಜ್ಞೆ ಹೇರಲಾಯಿತು. ಜೂನ್ 5ರಂದು ಕಾರ್ಯಾಚರಣೆ ನಡೆಸಿ, ತೇನಿ ಜಿಲ್ಲೆಯ ಚಿನ್ನಒವುಲಪುರಂ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ಕಲಕಾಡ್ ಮುಂಡನ್‌ತುರೈ ಹುಲಿ ಅರಣ್ಯ(ಕೆಎಂಟಿಆರ್)ಕ್ಕೆ ಬಿಡಲಾಯಿತು. ಪಾಪನಾಶಂ ಮತ್ತು ಸರ್ವಲಾರ್ ಅಣೆಕಟ್ಟುಗಳ ಸಮೀಪ ಮೂರು ಹಾಡಿಗಳಲ್ಲಿ ನೆಲೆಸಿರುವ ಕಣಿಯ ಆದಿವಾಸಿ ಗುಂಪುಗಳು ಇದನ್ನು ವಿರೋಧಿಸಿ ಪಾಪನಾಶಂ ಚೆಕ್‌ಪೋಸ್ಟ್ ಬಳಿ ಪ್ರತಿಭಟನೆ ನಡೆಸಿದವು. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತು.

ಉತ್ತರ ಸಿಗದ ಪ್ರಶ್ನೆಗಳು
ಎಳವೆಯಿಂದಲೂ ಜನವಸತಿ ಪ್ರದೇಶದಲ್ಲಿದ್ದು ರೂಢಿಯಾಗಿರುವ ಅರಿಕೊಂಪನ್‌ಗೆ ಕಾಡು ಒಗ್ಗಿಬರುವುದಿಲ್ಲ. ಇದೇ ಪ್ರಾಂತದಲ್ಲಿ ಹಲಸಿನ ಹಣ್ಣು ಇಷ್ಟ ಪಡುವ ಚಕ್ಕಕೊಂಪನ್ ಮತ್ತು ತಮಿಳುನಾಡಿನ ಪೊಲ್ಲಾಚಿ ಯಲ್ಲಿ ಅಕ್ಕಿಯನ್ನು ಇಷ್ಟಪಡುವ ಅರಸಿ ರಾಜ ಎಂಬ ಆನೆಗಳಿವೆ. ಅರಿಕೊಂಪನ್ ಹೆಚ್ಚು ದಾಳಿ ನಡೆಸಿರುವುದು 301 ಕಾಲನಿಯಲ್ಲಿ. ಕೇರಳ ಸರಕಾರ ಪೆರಿಯಾರ್ ನದಿಯ ಉಪನದಿಯಾದ ಪಣ್ಣಿಯಾರ್ ನದಿಗೆ ಅನಾಯಿರಂಗಲ್ ಅಣೆಕಟ್ಟು ಕಟ್ಟಿದಾಗ, ಈ ಪ್ರದೇಶವನ್ನು 2003ರಲ್ಲಿ ಸಂತನ್‌ಪಾರ ಮತ್ತು ಚಿನ್ನಕನಲ್ ಪಂಚಾಯತ್‌ಗಳಿಗೆ ನೀಡಲಾಗಿತ್ತು. ಈ ನಿರ್ಧಾರ ಅರಣ್ಯ ಇಲಾಖೆಗೆ ಸರಿಕಂಡಿರಲಿಲ್ಲ. ಇಡುಕ್ಕಿಯ ಚಿನ್ನಾರ್ ವನ್ಯಧಾಮವನ್ನು ಪೆರಿಯಾರ್ ಹುಲಿ ಅರಣ್ಯಕ್ಕೆ ಜೋಡಿಸುವ ಕಾರಿಡಾರ್ ಮಧ್ಯದಲ್ಲಿರುವ ಈ ಪ್ರದೇಶದಲ್ಲಿ ಆನೆಧಾಮವನ್ನು ಸ್ಥಾಪಿಸಲು ಇಲಾಖೆ ಇಚ್ಛಿಸಿತ್ತು. ಇದರಿಂದ ಅಣಮುಡಿ ಆನೆರಕ್ಷಿತ ಅರಣ್ಯದಿಂದ ಕೇರಳ-ತಮಿಳ್ನಾಡು ಗಡಿಯ ಮತಿಕೆಟ್ಟನ್ ಶೋಲಾವರೆಗೆ ದೊಡ್ಡ ಆನೆ ಆವಾಸಸ್ಥಾನ ಆಗುತ್ತಿತ್ತು. ಇದ್ಯಾವುದೂ 301 ಕಾಲನಿ ಜನರಿಗೆ ಗೊತ್ತಿರಲಿಲ್ಲ. ಇಲ್ಲಿ ನೆಲೆಸಿರುವ 15 ಕುಟುಂಬಗಳ 41 ಮಂದಿ ಯಾರದ್ದೋ ತಪ್ಪುನಿರ್ಧಾರಕ್ಕೆ ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ.
ಅರಿಕೊಂಪನ್ ಸೇರಿದಂತೆ ಆನೆಗಳು ಏಕೆ ಚಿನ್ನಕನಲ್‌ನ ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ? ಈ ಆನೆಗಳು ನೆಲೆಸಿರುವ 365 ಹೆಕ್ಟೇರ್ ಪ್ರದೇಶದಲ್ಲಿರುವುದು ಮೇವು-ನೆರಳು-ನೀರು ಯಾವುದನ್ನೂ ನೀಡದ ನೀಲಗಿರಿ ಮರಗಳು. ಒಂದುವೇಳೆ ಈ ಪ್ರದೇಶವನ್ನು ಹುಲ್ಲುಗಾವಲಾಗಿ ಪರಿವರ್ತಿಸಿದ್ದರೆ, ಗಿಡಮರ ನೆಟ್ಟಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ, ಅರಣ್ಯ ಇಲಾಖೆ ವನ್ಯಜೀವಿಗಳಿಗೆ ಮೇವು ದೊರಕಿಸಿಕೊಡುವ ಯಾವುದೇ ಪ್ರಯತ್ನ ನಡೆಸಲಿಲ್ಲ.
ಫೇಸ್‌ಬುಕ್‌ನಲ್ಲಿ 50ಕ್ಕೂ ಅಧಿಕ ಅರಿಕೊಂಪನ್ ಅಭಿಮಾನಿ ಪುಟಗಳಿವೆ. ಅವನ ಕುರಿತು ಸಾಜಿದ್ ಯಾಹ್ಯಾ ಸಿನೆಮಾ ಮಾಡಲಿದ್ದಾರೆ; ತಮ್ಮ ಪ್ರಯತ್ನ 'ಸ್ಥಳಾಂತರಗೊಂಡ ಜೀವಿಗೆ ನ್ಯಾಯ ಕೊಡಿಸಲು ಹೋರಾಟ' ಎಂದು ಅವರು ಬಣ್ಣಿಸುತ್ತಾರೆ.

ಸ್ಥಳಾಂತರ ಸಮರ್ಥನೀಯವೇ?
ಸ್ಥಳೀಯರು ಅರಿಕೊಂಪನ್‌ನನ್ನು ಶಾಶ್ವತವಾಗಿ ಸೆರೆಯಲ್ಲಿಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅದು ವನ್ಯಜೀವಿಗಳನ್ನು ಸಂರಕ್ಷಿಸುವ ಸಮರ್ಪಕ ವಿಧಾನವಲ್ಲ. ಆನೆಗಳ ಸ್ಥಳಾಂತರ ವಿವಾದಗ್ರಸ್ಥ ವಿಷಯ. ಆ ಕ್ಷಣದಲ್ಲಿ ಜನರ ಆಕ್ರೋಶ ತಣಿಸಲು ಬಳಸಬಹುದಷ್ಟೆ. ಕೇರಳದಲ್ಲಿ ಇಂಥ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಈ ವರ್ಷ ಸೆರೆ ಹಿಡಿದ ಪಿಟಿ-7 ಆನೆಯನ್ನು ಬಿಡುಗಡೆಗೊಳಿಸಬೇಕೆಂದು ಅರ್ಜಿ ಸಲ್ಲಿಕೆಯಾಗಿದೆ. ಸೆರೆ ಹಿಡಿದಾಗ ಆತನ ಮೈಮೇಲೆ 17 ಗಾಯಗಳಿದ್ದವು. ಒಂದುವೇಳೆ ಸೆರೆಹಿಡಿದ ಪ್ರದೇಶದಲ್ಲೇ ಮತ್ತೆ ಬಿಡುಗಡೆಗೊಳಿಸಿದರೆ, ಆತ ಕ್ಷೇಮವಾಗಿರುತ್ತಾನಾ? ಮನುಷ್ಯನ ಹಿಂಸಾಪ್ರವೃತ್ತಿಗೆ ಮಿತಿ ಎನ್ನುವುದು ಇಲ್ಲ. ಪೂಜಿಸುವ ಕೈಗಳೇ ಹತ್ಯೆಗೂ ಮುಂದಾಗುತ್ತವೆ. ಅಕ್ಟೋಬರ್ 13,2010ರಲ್ಲಿ ಕೊಚ್ಚಿಯಿಂದ 50 ಕಿ.ಮೀ. ದೂರದ ಮಲಯತ್ತೂರು ಅರಣ್ಯ ವಲಯದ ಉಪಿಡಿಂಪರದಲ್ಲಿ 15 ವರ್ಷದ ಗರ್ಭಿಣಿ ಆನೆ ಸೊ್ಫೀೀಟಕಗಳನ್ನು ತುಂಬಿದ್ದ ಅನಾನಸ್ ತಿಂದು ಸ್ಥಳದಲ್ಲೇ ಮೃತಪಟ್ಟಿತ್ತು. ಮೇ 27, 2020ರಂದು ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಾಡ್‌ನಲ್ಲಿ ಗರ್ಭಿಣಿ ಆನೆ ಸ್ಫೋಟಕಗಳಿದ್ದ ಅನಾನಸ್ ಸೇವಿಸುವಾಗ ದವಡೆ ಮೂಳೆ ಛಿದ್ರಗೊಂಡು ಆಹಾರ ಸೇವಿಸಲಾಗದೆ ಬಳಲಿ ನೋವಿನಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ನಿಂತು ಪ್ರಾಣತ್ಯಾಗ ಮಾಡಿತು. ಅನಾನಸನ್ನು ಹಂದಿ ಬೇಟೆಗೆ ಇಟ್ಟದ್ದು ಎನ್ನಲಾಯಿತು. ಮನುಷ್ಯ ಎಸಗುವ ಇಂಥ ಅಸದಳ ಕ್ರೌರ್ಯಕ್ಕೆ ವಿವರಣೆ-ಸಮರ್ಥನೆ ಇರುವುದಿಲ್ಲ.

ಅತ್ಯಂತ ಸೂಕ್ಷ್ಮ ಜೀವಿಯಾದ ಆನೆಯ ಮೆದುಳಿನಲ್ಲಿ ವಾಸಸ್ಥಳ, ಕಾರಿಡಾರ್‌ಗಳು, ನೀರಿನ ಮೂಲಗಳು ಇತ್ಯಾದಿ ಮಾಹಿತಿ ಅಚ್ಚಳಿಯದೆ ಉಳಿದಿರುತ್ತದೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ತೆಂಗಿನಕಲ್ಲು ಅರಣ್ಯದಲ್ಲಿ ಆಗಸ್ಟ್ 14, 2022ರಂದು ಸೆರೆ ಹಿಡಿದು ಮಲೆ ಮಹದೇಶ್ವರ ಬೆಟ್ಟ ಅರಣ್ಯದಲ್ಲಿ ಬಿಟ್ಟಿದ್ದ ಪುಂಡಾನೆ ಕೆಲವು ತಿಂಗಳ ಹಿಂದೆ ಮತ್ತೆ ಕಾಣಿಸಿಕೊಂಡಿದೆ. ಜನವಸತಿ ಹಾಗೂ ಗದ್ದೆ-ತೋಟಗಳಿಗೆ ನುಗ್ಗುತ್ತಿದ್ದು, ಆನೆಯ ಮರು ಸೆರೆ ಕಾರ್ಯಾಚರಣೆ ಚಾಲನೆಯಲ್ಲಿದೆ. ಜಿಲ್ಲೆಯಲ್ಲಿ 5 ವರ್ಷದಲ್ಲಿ 5 ಆನೆಗಳನ್ನು ಸ್ಥಳಾಂತರಿಸಲಾಗಿದೆ. ಸ್ಥಳೀಯರ ಪ್ರಕಾರ, ಆನೆಗಳ ಸ್ಥಳಾಂತರ ಕಣ್ಣೊರೆಸುವ ತಂತ್ರವಷ್ಟೇ. ಇದರಿಂದ ಆನೆ ಕಾಟ, ಬೆಳೆ ನಷ್ಟ, ಸಾವು ನೋವು ಕಡಿಮೆಯಾಗುವುದಿಲ್ಲ. ಕೊಡಗು-ಹಾಸನ, ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟಗಳು ಈ ಹಿಂದೆ ಆನೆಗಳ ಸ್ವಾಭಾವಿಕ ವಾಸಸ್ಥಾನ ಹಾಗೂ ಕಾರಿಡಾರ್ ಆಗಿದ್ದವು. ಬಾಳೆಹಣ್ಣು ಮತ್ತು ಹಲಸು ಸೇವಿಸುತ್ತಿದ್ದ ಆನೆಗಳು ಈಗ ಭತ್ತದ ಗದ್ದೆ, ಕಾಫಿ ತೋಟ ಹಾಗೂ ಕಬ್ಬಿನ ಗದ್ದೆಗೆ ನುಗ್ಗುತ್ತಿವೆ. ಆನೆಗಳು ಏನಾದರೂ ಕೊಡಿ ಎನ್ನುವಂತೆ ಮನೆ ಮುಂದೆ ಬಂದು ನಿಲ್ಲುವುದೂ ಇದೆ. ಅಂಥ ದೈನೇಸಿ ಸ್ಥಿತಿಗೆ ತಂದುಬಿಟ್ಟಿದ್ದೇವೆ ನಾವು.

ರಾಮನಗರ ಮತ್ತು ಬನ್ನೇರುಘಟ್ಟದಲ್ಲಿ ಆನೆ ಕಾರ್ಯಪಡೆ ರಚಿಸಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಇತ್ತೀಚೆಗೆ ಹೇಳಿದ್ದಾರೆ. ಈಗಾಗಲೇ ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿ ಇಂಥ ಕಾರ್ಯಪಡೆಗಳು ಇವೆ. ಬೆಳೆ-ಪ್ರಾಣ ಹಾನಿಯನ್ನು ತಡೆಯುವಲ್ಲಿ ಈ ಕಾರ್ಯಪಡೆಗಳು ಎಷ್ಟು ಉಪಯುಕ್ತ? ಮೈಸೂರು ದಸರಾದಲ್ಲಿ 13 ಬಾರಿ ಅಂಬಾರಿಯನ್ನು ಹೊತ್ತಿದ್ದ ಬಲರಾಮ(1958ರಿಂದ ಮೇ 7, 2023) ಕೂಡ ಸೆರೆ ಹಿಡಿಯಲ್ಪಟ್ಟು ತರಬೇತಿ ಪಡೆದ ಆನೆ. ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿಯಲಾಗಿದ್ದ ಆತ ಭೀಮನಕಟ್ಟೆ ಆನೆ ಶಿಬಿರದಲ್ಲಿ ಮೃತಪಟ್ಟ. ಸ್ಥಳಾಂತರಕ್ಕೆ ಮುನ್ನ ಜ್ಞಾನ ತಪ್ಪಿಸಲು ಬಳಸುವ ಅರಿವಳಿಕೆ ಚುಚ್ಚುಮದ್ದು ವನ್ಯಜೀವಿಗಳ ಸಾವಿಗೆ ಕಾರಣವಾದ ಹಲವು ಪ್ರಸಂಗಗಳಿವೆ. ಜನವರಿ 13, 2023ರಂದು ಕೊಡಗು ಜಿಲ್ಲೆಯ ಅಟ್ಟೂರು-ನಲ್ಲೂರು ಅರಣ್ಯದಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಕೆಲವು ಮೀಟರ್ ಓಡಿದ ಪುಂಡಾನೆ, 35 ಅಡಿ ಆಳದ ಗುಂಡಿಗೆ ಬಿದ್ದು ಮೃತಪಟ್ಟಿತು. ತೂಕಕ್ಕೆ ಅನುಗುಣವಾಗಿ ಅರಿವಳಿಕೆ ಚುಚ್ಚುಮದ್ದು ನೀಡಬೇಕಿದ್ದು, ತೂಕ ಮಾಡಲಾಗದ ಕಾರಣ ಕಣ್ಣಂದಾಜಿನಲ್ಲಿ ಮದ್ದು ನೀಡಬೇಕಾಗುತ್ತದೆ. ಅಸಡ್ಡೆ ಇಲ್ಲವೇ ನಿರ್ಲಕ್ಷ ತಾಳಿದಲ್ಲಿ ಸಾವು ಸಂಭವಿಸುತ್ತದೆ.

ಸಂಕೀರ್ಣ ಸಮಸ್ಯೆ
 ವನ್ಯಜೀವಿ, ಅವುಗಳ ದಾಳಿಯಿಂದ ಪ್ರಾಣ/ಆಸ್ತಿ ಕಳೆದುಕೊಳ್ಳುವ ಸ್ಥಳೀಯರು-ರೈತರು, ಅರಣ್ಯ ಇಲಾಖೆ, ವನ್ಯಜೀವಿ ಸಂರಕ್ಷಣಾ ಸಂಘಟನೆಗಳು, ರಾಜಕಾರಣಿಗಳು, ಹೈಕೋರ್ಟ್ ಮತ್ತು ಮಾಧ್ಯಮ-ಇವರೆಲ್ಲರನ್ನು ಒಳಗೊಂಡ ಒಂದು ಸಂಕೀರ್ಣ ಸಮಸ್ಯೆಗೆ ಪರಿಹಾರ ಏನು? ಈ ಪರಿಹಾರ ಹೇಗೆ ಸಹಬಾಳ್ವೆ ಮತ್ತು ಸಂರಕ್ಷಣೆ ಮೇಲೆ ಪರಿಣಾಮ ಬೀರುತ್ತದೆ? ಸಂರಕ್ಷಣೆಯ ಹೊರೆಯನ್ನು ಎಲ್ಲರೂ ಹೊರಬೇಕಲ್ಲವೇ? ಜೀವನಾಧಾರವಾದ ಕೃಷಿ ಬೆಳೆಗಳಿಗೆ ಹಾನಿ, ಕುಟುಂಬದ ದುಡಿಯುವ ಸದಸ್ಯರ ಸಾವು, ಸಂಜೆ 6ರ ಬಳಿಕ ಹೊರಹೋಗಲಾಗದ ಸಾಮಾಜಿಕ ನಿರ್ಬಂಧ ಮತ್ತು ಆನೆ ಕಾಟದಿಂದ ವಿವಾಹಕ್ಕೆ ಹೆಣ್ಣು/ಗಂಡು ಸಿಗದಿರುವ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ? ಒಂದುವೇಳೆ ಬೆಳೆ-ಪ್ರಾಣ ಹಾನಿಯಾದಲ್ಲಿ ಶೀಘ್ರವಾಗಿ ಮತ್ತು ನ್ಯಾಯಸಮ್ಮತವಾದ ಪರಿಹಾರ ಸಿಗುವುದಿಲ್ಲ. ಇದಕ್ಕಾಗಿ ಕಂಬಗಳನ್ನು ಸುತ್ತಬೇಕು; ಇಲಾಖೆ ನಿಗದಿಪಡಿಸಿದ ನಿಯಮಗಳ ಚಕ್ರವ್ಯೆಹವನ್ನು ಭೇದಿಸಬೇಕು. ಸಂರಕ್ಷಣೆಯನ್ನು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಅಂಶಗಳು ಪ್ರಭಾವಿಸುತ್ತವೆ. ಸುಸ್ಥಿರ ಮತ್ತು ಯಶಸ್ವಿ ಕಾರ್ಯನೀತಿಯು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲ ಭಾಗಿದಾರರನ್ನು ಒಳಗೊಂಡಿರುತ್ತದೆ. ಸ್ಥಳೀಯರ ಸಹಕಾರವಿಲ್ಲದೆ ಸಂರಕ್ಷಣೆ ಸಾಧ್ಯವಿಲ್ಲ.

ಪರಿಣತರ ಪ್ರಕಾರ, ಸ್ಥಳಾಂತರಗೊಂಡ ವನ್ಯಜೀವಿಗಳಿಗೆ ಮೂರು ಆಯ್ಕೆಗಳಿರುತ್ತವೆ; ಹೊಸ ಪರಿಸರಕ್ಕೆ ಹೊಂದಿಕೊಂಡು, ಅಲ್ಲಿ ಜೀವನವೃತ್ತವನ್ನು ಮುಂದುವರಿಸುತ್ತವೆ ಇಲ್ಲವೇ ಸ್ಥಳಾಂತರಗೊಂಡ ಪ್ರದೇಶದಲ್ಲಿ ಅಂಡಲೆಯುತ್ತವೆ ಅಥವಾ ಮೂಲನೆಲೆ ಎಷ್ಟೇ ದೂರದಲ್ಲಿರಲಿ, ಅಲ್ಲಿಗೆ ವಾಪಸಾಗಲು ಸಕಲ ಪ್ರಯತ್ನ ಮಾಡುತ್ತವೆ. ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಆಫ್ರಿಕಾದಿಂದ ತಂದು ಪರಿಚಯಿಸಿದ ಚಿರತೆಗಳಲ್ಲಿ ಮೂರು ಮರಿ ಸೇರಿದಂತೆ ಆರು ಚಿರತೆಗಳು ಮೃತಪಟ್ಟಿವೆ. ಜ್ವಾಲಾ ಎಂಬ ಚಿರತೆಯ ನಾಲ್ಕು ಮರಿಗಳಲ್ಲಿ ಒಂದು ಮಾತ್ರ ಉಳಿದುಕೊಂಡಿದೆ. ಉಳಿದ ಚಿರತೆಗಳ ಮರುಸ್ಥಳಾಂತರ ಪ್ರಯತ್ನ ನಡೆಯುತ್ತಿದೆ. ಚಿರತೆಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳಲ್ಲಿ ಒಮ್ಮತ ಇರಲಿಲ್ಲ. ಈ ಯೋಜನೆಯ ಒಟ್ಟಾರೆ ಫಲಿತಾಂಶ ತಿಳಿಯಲು ಸಾಕಷ್ಟು ಸಮಯ ಬೇಕಾಗುತ್ತದೆ.
ಆನೆ ಯೋಜನೆಗೆ 30 ವರ್ಷ ಸಂದಿದ್ದು, ಮೇ 17ರಿಂದ 19ರವೆರೆಗೆ ರಾಜ್ಯ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ವಾರ್ಷಿಕ ಗಣತಿ ನಡೆದಿದೆ. ಕಬಿನಿ ಹಿನ್ನೀರಿನಲ್ಲಿ 150 ಸೇರಿದಂತೆ ನಾಗರಹೊಳೆ ಅರಣ್ಯದ ವ್ಯಾಪ್ತಿಯಲ್ಲಿ 400ಕ್ಕೂ ಅಧಿಕ ಆನೆಗಳು ಕಾಣಿಸಿಕೊಂಡಿವೆ. ಆದರೆ, ಅರಿಕೊಂಪನ್ ಸೇರಿದಂತೆ ಆನೆಗಳ ಬದುಕನ್ನು ಸಹನೀಯಗೊಳಿಸುವಲ್ಲಿ ನಾವು ವಿಫಲವಾಗಿದ್ದೇವೆ.