ಗಾಢ ವಿಷಾದ ಕಟ್ಟಿಕೊಡುವ ‘ಕಾಂತ ಮತ್ತು ಕಾಂತ’

Update: 2023-06-09 08:32 GMT

ಉಮಾಕಾಂತ: ‘‘ವಯಸ್ಸಾಗಲೇಬಾರದು. ವಯಸ್ಸಾಗೋಕೂ ಮೊದಲೇ ಹೋಗಿಬಿಡಬೇಕು.’’

ಚಂದ್ರಕಾಂತ: ‘‘ವಯಸ್ಸಾದ ಮೇಲೆ ಮನುಷ್ಯಂಗೆ ನಿಜ ಒಪ್ಕೊಳ್ಳದೆ ಬೇರೆ ದಾರಿ ಇಲ್ಲ. ಒಂದು ವಯಸ್ಸಿನ ತನಕ ಸುಳ್ಳಿನ ಹಿಂದೆ, ಮುಖವಾಡದ ಹಿಂದೆ ಬಚ್ಚಿಟ್ಕೊಬಹುದು. ಒಂದು ವಯಸ್ಸು ದಾಟಿದ್ರೆ ಸುಳ್ಳು ಸುಳ್ಳಾಗೇ ಕಾಣತ್ತೆ. ಅಸಹ್ಯ ಆಗತ್ತೆ. ನಿಜ ಏನಿದೆ ಅದನ್ನ ಒಪ್ಕೊಳ್ಳದೆ ಬೇರೆ ದಾರಿಯಿಲ್ಲ.’’

ಇದು ‘ಕಾಂತ ಮತ್ತು ಕಾಂತ’ ನಾಟಕದ ಗಮನ ಸೆಳೆವ ಸಂಭಾಷಣೆ. ಹೀಗೆಯೇ ಗಮನಾರ್ಹ ಸಂಭಾಷಣೆಗಳು ನಾಟಕದುದ್ದಕ್ಕೂ ಇವೆ. ಎಸ್.ಸುರೇಂದ್ರನಾಥ್ ರಚನೆ ಮತ್ತು ನಿರ್ದೇಶನದ ಈ ನಾಟಕವನ್ನು ಸಂಕೇತ್ ತಂಡ ಕಳೆದ ವಾರ ಬೆಂಗಳೂರಿನ ರಂಗ ಶಂಕರದಲ್ಲಿ ಪ್ರಸ್ತುತಪಡಿಸಿತು. ಎರಡೇ ಪಾತ್ರಗಳಿರುವ ಈ ನಾಟಕವನ್ನು ಮುಖ್ಯಮಂತ್ರಿ ಚಂದ್ರು ಹಾಗೂ ಸಿಹಿಕಹಿ ಚಂದ್ರು ಅವರು ಅಭಿನಯಿಸಿದ ಬಗೆ, ನಿರ್ವಹಿಸಿದ ರೀತಿ ಅಭಿನಂದನೀಯ. ಪಾತ್ರಗಳೇ ತಾವಾಗಿ ತಲ್ಲೀನರಾದುದು ಕಂಡು ಪ್ರೇಕ್ಷಕರಿಗೆ ಗಾಢವಾಗಿ ಕಾಡುತ್ತಾರೆ.

ಈ ನಾಟಕದ ವಸ್ತು ಸರಳ ಎನ್ನಬಹುದಾದರೂ ಸರಳವಲ್ಲ; ಇಬ್ಬರು ವಯಸ್ಸಾದವರು ಭೇಟಿಯಾಗಿ ಪರಸ್ಪರ ಹಂಚಿಕೊಳ್ಳುವ ಅನುಭವಗಳೇ ನಾಟಕದ ತಿರುಳು ಜೊತೆಗೆ ಈ ನಾಟಕದೊಳಗೊಂದು ನಾಟಕವಿದೆ.

ನಾನು ಚಂದ್ರು, ನಾನೂ ಚಂದ್ರು ಎಂದು ಪರಸ್ಪರ ಪರಿಚಯ ಮಾಡಿಕೊಳ್ಳುವ ಮೂಲಕ ನಾಟಕ ಆರಂಭವಾಗುತ್ತದೆ. ಆಮೇಲೆ ಮುಖ್ಯಮಂತ್ರಿ ಚಂದ್ರು ಅವರು ಪತ್ರಿಕೆಗಾಗಿ ಕಾಯುತ್ತ, ತಡವಾದುದಕ್ಕೆ ಪತ್ರಿಕೆ ಹಂಚುವ ಸಿದ್ಧಣ್ಣಗೆ ಫೋನ್ ಮಾಡಲು ಹೋಗಿ ಇನ್ನಾರಿಗೋ ಫೋನ್ ಕರೆ ಹೋಗುವುದು, ಮತ್ತೆ ಸಿದ್ಧಣ್ಣಗೆ ಫೋನ್ ಮಾಡಿದರೂ ಪದೇ ಪದೇ ಪತ್ರಿಕೆ ಕೇಳುವುದು, ಪತ್ರಿಕೆ ಬಂದು ಬಗಲಲ್ಲಿ ಇಟ್ಟುಕೊಂಡರೂ ಮತ್ತೆ ಸಿದ್ಧಣ್ಣಗೆ ಫೋನ್ ಮಾಡುವುದು... ಇಂಥ ಹಾಸ್ಯ ಪ್ರಸಂಗಗಳ ಮೂಲಕ ಪ್ರೇಕ್ಷಕರು ನಗೆಗಡಲಲ್ಲಿ ತೇಲುತ್ತಾರೆ.

ಬಳಿಕ ಉಮಾಕಾಂತ ಹಾಗೂ ಚಂದ್ರಕಾಂತ ಪಾತ್ರಧಾರಿಗಳಾದ ಇಬ್ಬರೂ ಚಂದ್ರು ಅವರು ಉದ್ಯಾನದಲ್ಲಿ ಭೇಟಿಯಾಗುತ್ತಾರೆ. ಇಬ್ಬರೂ ನಡುಗುವ ಧ್ವನಿಯಲ್ಲಿ ಮಾತನಾಡುತ್ತ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾರೆ.

ಚಂದ್ರಕಾಂತ: ‘‘ನಮ್ಮ ಮನೇಲಿ, ಅಂದ್ರೆ ನನ್ನ ಮಗನ ಮನೇಲಿ ಇರೋದು ಒಂದು ರೂಮು. ಒಂದು ಅಡುಗೆಮನೆ. ಅವನಿಗೆ ಮದುವೆಯಾಗಿ ಒಂದು ವರ್ಷ ಆಯ್ತು. ಅವ್ನಿಗೆ ಬೆಳಗ್ಗೆ ಡ್ಯೂಟಿನೋ ಮಧ್ಯಾಹ್ನದ ಡ್ಯೂಟಿನೋ ಇದ್ರೆ ಸಾಯಂಕಾಲ ಅವನು ಮನೇಲೇ ಇರ್ತಾನೆ, ಇರಬೇಕು. ಹೆಂಡತಿ ಜೊತೆ ಇರಬೇಕು. ನಾನು, ಮುದುಕ ಮನೇಲೇ ಇದ್ರೆ ಗಂಡಹೆಂಡ್ತಿಗೆ ತೊಂದ್ರೆ. ಅದಕ್ಕೇ ನಾನು ಮನೆ ಬಿಟ್ಟು ಹೊರಗೆ ಬಂದುಬಿಡ್ತೀನಿ. ಅವ್ರಿಬ್ರೂ ಮನೇಲಿರ್ತಾರೆ. ಹಾಯಾಗಿ ಇರಬಹುದು ಇಬ್ರೇ. ರಾತ್ರಿ ಒಂದಷ್ಟು ಹೊತ್ತು ಇಲ್ಲಿ ಕಳೆದು, ಬೆಳಗಾಗೋ ತನಕ ಅಲ್ಲಿ ಇಲ್ಲಿ ಇದ್ದು ಬೆಳಗಾದ ಮೇಲೆ ಮನೆಗೆ ಹೋಗ್ತೀನಿ. ನನ್ನ ಮಗನಿಗೆ ರಾತ್ರಿ ಡ್ಯೂಟಿ ಇದ್ರೆ ಅವನು ಫ್ಯಾಕ್ಟರೀಲಿ ಇರ್ತಾನೆ. ನಾನು ಅಡುಗೆಮನೇಲಿ ಮಲಕ್ಕೋತೀನಿ.’’

ಉಮಾಕಾಂತ: ‘‘ಮತ್ತೆ ರಾತ್ರಿ ಊಟ?’’

ಚಂದ್ರಕಾಂತ: ‘‘ಎಲ್ಲೋ ಒಂದು ಕಡೆ ಮಾಡಿದ್ರಾಯ್ತು. ತೀರಾ ಹೊಟ್ಟೆ ಹಸೀತಾ ಅಂದ್ರೆ ಕಡಲೆಕಾಯಿ ತಿಂತಾ ಕಾಲ ಕಳೆದ್ರೆ ಆಯ್ತು.’’

ಉಮಾಕಾಂತ: ‘‘ನನ್ನ ಮಗ, ಸೊಸೆಗೆ ದಿನಾ ಹೊರಗೆ ಹೊಗಬೇಕು, ತಿರುಗಬೇಕು ಅಂತ ಆಸೆ. ಇವತ್ತು ಹೋಟೆಲೂಟ, ಇವತ್ತು ಫ್ರೆಂಡ್ ಮನೆ, ಇವತ್ತು ಸಿನೆಮಾ, ಇವತ್ತು ನಾಟಕ, ಒಟ್ಟಿಗೆ ತಿರುಗಬೇಕು. ಮನೇಲಿರಕೆ ಅಂಥಾ ಮನಸ್ಸಿಲ್ಲ. ಅದೂ ನಿಜಾನೇ. ಮದುವೆ ಆದ ಮೇಲೂ ಮನೇಲಿರಬೇಕೂ ಅಂದ್ರೆ? ವಯಸ್ಸಾದ ಮೇಲೆ ಮನೇಲಿರೋದು ಹಣೇಲಿ ಬರೆದೇ ಇರತ್ತಲ್ಲಾ?’’

ಚಂದ್ರಕಾಂತ: ‘‘ಅವರು ತಿರುಗಲಿ ಬಿಡಿ. ನೀವ್ಯಾಕೆ ಇಲ್ಲಿ ಬಂದು ಕೂತ್ಕೋಬೇಕು?’’

ಹೀಗೆ ಕೇಳುವ ಚಂದ್ರಕಾಂತನಿಗೆ ಉಮಾಕಾಂತ ಕೊಡುವ ಉತ್ತರ- ರಾತ್ರಿ ಮನೆ ಬಾಗಿಲು ಹಾಕಿಕೊಳ್ಳದೆ ಮಲಗಿದ ಪರಿಣಾಮ ಬೀಗ ಹಾಕಿಕೊಂಡು ಹೋಗುತ್ತಾರೆ ಎನ್ನುವುದು. ‘‘ಅದೂ ಹೊರಗಿಂದ ಬೀಗ ಹಾಕಿದ್ದಾರೆ ಅಂತ ಗೊತ್ತಾದ ಮೇಲೆ ಆಗೋ ಹಿಂಸೆ ಇದೆಯಲ್ಲಾ ಅದು ಯಮಯಾತನೆ. ಒಂಥರಾ ಜೈಲಲ್ಲಿದ್ದ ಹಾಗೆ. ಏನೂ ತಪ್ಪುಮಾಡಿರಲ್ಲ ಅಂದ್ರೂ ಜೈಲಲ್ಲಿ ಇದ್ದಂಗಿರತ್ತೆ. ವಯಸ್ಸಾಗಿದ್ದೇ ತಪ್ಪಾಯ್ತೇನೋ ಅನ್ನೋ ಹಾಗೆ. ಕೂಡಿ ಬಿದ್ದಿರೋದು ನಂಗಿಷ್ಟ ಇಲ್ಲ. ಅದಕ್ಕೇ ಓಡಿ ಬರ್ತೀನಿ. ರಾತ್ರಿ ವಾಪಸು ಹೋಗ್ತೀನಿ’’ ಎನ್ನುವ ಉಮಾಕಾಂತರಿಗೆ ಮರೆವಿನ ಸಮಸ್ಯೆ. ಯಾರದೋ ಮನೆ ಮುಂದೆ ತಮ್ಮ ಮಗನನ್ನು ಕರೆಯುವುದು, ಇನ್ನಾರದೋ ಬಾಗಿಲು ತಟ್ಟುವುದು, ಕೊನೆಗೆ ಕೊರಳಲ್ಲಿ ಹಾಕಿಕೊಂಡಿರುವ ಚೀಟಿಯಲ್ಲಿರುವ ಮನೆಯ ವಿಳಾಸಕ್ಕೆ ಯಾರೋ ತಲುಪಿಸುತ್ತಾರೆ.

ಇದು ಉಮಾಕಾಂತರ ಸ್ಥಿತಿಯಾದರೆ ಚಂದ್ರಕಾಂತರಿಗೆ ಎರಡು ವಾರ ಹೇಗಾದರೂ ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಮಗ ಹೇಳುತ್ತಾನೆ. ಅಡ್ಜಸ್ಟ್ ಅಂದರೆ ಬೆಳಗಾಗುವವರೆಗೂ ಹೊರಗೆ ಎಲ್ಲಾದರೂ ಇದ್ದು ಬನ್ನಿ ಎಂದರ್ಥ. ‘‘ಇಂಥಾ ಊರಲ್ಲಿ ಬೆಳಗಾಗೋ ತನಕ ಎಲ್ಲಾದ್ರೂ ತಲೆ ಮರೆಸಿಕೊಂಡಿದ್ದು ಕಾಲ ಕಳೆಯೋದು ದೊಡ್ಡ ಕಷ್ಟ ಏನಲ್ಲ’’ ಎನ್ನುವಾಗ ಪ್ರೇಕ್ಷಕರು ಮೂಕರಾಗುತ್ತಾರೆ.

ಹೀಗೆ ನಗರದಲ್ಲಿರುವ ವೃದ್ಧರ ಸ್ಥಿತಿಗತಿಗಳನ್ನು ಬಿಂಬಿಸುವ ನಾಟಕವಿದು. ಜೊತೆಗೆ ಆಧುನಿಕ ಬದುಕು ತಂದೊಡ್ಡಿರುವ ವೃದ್ಧರ ಅಸಹಾಯಕತೆ, ಆತಂಕ, ತಲ್ಲಣಗಳನ್ನು ಚಿತ್ರಿಸುತ್ತದೆ. ಹಳ್ಳಿಗಳಲ್ಲಾದರೆ ವೃದ್ಧರು ಹೊರೆಯಾಗುವುದಿಲ್ಲ. ಮನೆಗೆಲಸಗಳ ಜೊತೆಗೆ ಮೊಮ್ಮಕ್ಕಳನ್ನು ಆಡಿಸುತ್ತ ಬೆಳೆಸುತ್ತಾರೆ. ಆದರೆ ನಗರದವರ ಬದುಕಿನ ಬಗೆಯೇ ಬೇರೆ. ಇದರಿಂದ ತೀರಿಕೊಂಡ ಹೆಂಡತಿ, ಕಾಡುವ ಒಂಟಿತನ, ಮಗ ಹಾಗೂ ಸೊಸೆ ಕಾಳಜಿ ತೋರದಿರುವುದು ಮೇಲಾಗಿ ದೈಹಿಕ ಕಾಯಿಲೆಗಳು. ಹೀಗೆ ದೈಹಿಕ ಕಾಯಿಲೆಗಳೊಂದಿಗೆ ಮಾನಸಿಕ ಕಾಯಿಲೆಗಳಿಗೆ ಬದುಕು ನೀರಸವೆನಿಸುತ್ತದೆ ಎನ್ನುವುದನ್ನು ನಾಟಕ ಸೂಚ್ಯವಾಗಿ ತಿಳಿಸುತ್ತದೆ.

ಇನ್ನು ನಾಟಕದೊಳಗೆ ನಾಟಕವಿದೆ ಎಂದು ಪ್ರಸ್ತಾಪಿಸಿದೆ. ೧೪ ವರ್ಷಗಳಿಂದ ದೂರವಾಗಿದ್ದ ಇಬ್ಬರು ಉಮಾಕಾಂತ ಹಾಗೂ ಚಂದ್ರಕಾಂತ ಮತ್ತೊಮ್ಮೆ ತಾಲೀಮು ಮೂಲಕ ಒಂದಾಗುತ್ತಾರೆ. ಪರಸ್ಪರ ಬಿಗುಮಾನದಿಂದಲೇ ಇದ್ದ ಅವರು ಕೊನೆಗೆ ತಮ್ಮ ಕಷ್ಟಸುಖಗಳನ್ನು ಹಂಚಿಕೊಂಡು ಹಗುರಾಗುತ್ತಾರೆ. ಹಾಗೆ ತಾಲೀಮು ಮಾಡುವಾಗಲೇ ಚಂದ್ರಕಾಂತ ನಿಧನರಾ ದುದು ಕಂಡು ಉಮಾಕಾಂತ ಪಾತ್ರಧಾರಿ ಸಿಹಿಕಹಿ ಚಂದ್ರು ಅವರು ಅದು ಹೇಗೆ ಒಬ್ಬನನ್ನೇ ಬಿಟ್ಟು ಹೋದೆ ಎಂದು ದುಃಖಿಸುತ್ತಾರೆ. ಅವರ ಮಾತುಗಳು ಹೀಗಿವೆ:

‘‘ನಾಚಿಕೆಯಾಗಬೇಕು ನಿನಗೆ. ಹೆಂಗಯ್ಯ ಒಬ್ನೆ ಹೋಗ್ತೀಯಾ ನೀನು? ನನ್ನ ಇಲ್ಲೇ ಬಿಟ್ಟು? ಇಷ್ಟು ವರ್ಷ ನನ್ನ ಜೊತೆ ಮಾತಾಡಲಿಲ್ಲ? ನಾನು ಹೇಗಿದ್ದೀನಿ ಅಂತ ಕೇಳಲಿಲ್ಲ. ನನ್ನ ನೋಡಲಿಲ್ಲ? ಸರಿ ಆದ್ರೆ ಇಲ್ಲೋ ಎಲ್ಲೋ ಇದ್ದೀಯಾ ಎಂಬ ನಂಬಿಕೆ, ಧೈರ್ಯನಾದರೂ ಇತ್ತು. ನಿನ್ನ ನೆರಳಾದರೂ ನನ್ನ ಮೇಲಿತ್ತು. ಈಗ ಅದನ್ನು ಇಲ್ಲವಾಗಿಸಿಬಿಟ್ಟೆಯಲ್ಲೋ ಪಾಪಿ. ಈ ಪಾತ್ರಗಳನ್ನು ಏನು ಮಾಡ್ಲಿ? ಅವಕ್ಕೇನು ಉತ್ರ ಕೊಡ್ಲಿ? ಒಬ್ಬನೇ ಹೇಗೆ ನಿಭಾಯಿಸಲಿ? ಜುಗಲ್‌ಬಂದಿಯಂತಿದ್ದೆ. ಒಬ್ಬನೇ ಏನು ಮಾಡಲಿ ನಾನೀಗ? ಕೊನೇ ಶೋ ಮಾಡೋಣಾಂತ ಹೇಳಿ ಹೀಗಾ ಮಾಡೋದು? ಪಾಪಿ ಕಣೋ ನೀನು ಪಾಪಿ. ಕರುಣೆ ಇಲ್ಲ ನಿನಗೆ?

ದೇವ್ರ ಲೆಫ್ಟ್ ಹ್ಯಾಂಡೊ ರೈಟ್ ಹ್ಯಾಂಡೊ ಅಂತ ಕೇಳಿದ್ದಕ್ಕೆ ನಿನ್ನ ಪಾಲಿಗೆ ದೇವ್ರ ಲೆಫ್ಟ್ ಹ್ಯಾಂಡ್ ಅಂತ ಹೇಳಿದೆಯಲ್ಲ, ಅವನು ನಿನ್ನ ಪಾಲಿಗೆ ರೈಟ್ ಹ್ಯಾಂಡ್. ಕಷ್ಟ ಕೊಡದೆ ನಿನ್ನ ಕರೆಸಿಕೊಂಡ. ನನ್ನ ಇಲ್ಲೇ ಬಿಟ್ಟಿದ್ದಾನೆ, ಅರ್ಧ ಜೀವ, ಅರ್ಧ ಹೃದಯ...’’

ಹೀಗೆ ಗಾಢ ವಿಷಾದದೊಂದಿಗೆ ನಾಟಕ ಕೊನೆಗೊಳ್ಳುತ್ತದೆ. ಇಂಥದೊಂದು ನಾಟಕವನ್ನು ಕಟ್ಟಿಕೊಟ್ಟ ಸುರೇಂದ್ರನಾಥ್ ಅವರಿಗೆ ಅಭಿನಂದನೆಗಳು. ಮುಖ್ಯಮಂತ್ರಿ ಚಂದ್ರು ಮತ್ತು ಸಿಹಿಕಹಿ ಚಂದ್ರು ಅವರು ಪಾತ್ರಗಳನ್ನು ಸಮರ್ಥವಾಗಿ ಪೊರೆದ ಪರಿಣಾಮ ನಾಟಕವು ಅತ್ಯಂತ ಯಶಸ್ವಿಯಾಗಿದೆ.