ನಗರಸಭೆ ಆಡಳಿತ ಹಿಡಿಯಲು ಅಡ್ಡ ದಾರಿ ಹಿಡಿಯಲ್ಲ: ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ

Update: 2023-06-09 13:16 GMT

ಚಿಕ್ಕಮಗಳೂರು, ಜೂ.9: ನಗರಸಭೆಯಲ್ಲಿ ಸದ್ಯ ಬಿಜೆಪಿ ಅಧಿಕಾರದಲ್ಲಿದ್ದು, ನಗರಸಭೆಯ ಆಡಳಿತವನ್ನು ಕಾಂಗ್ರೆಸ್ ತೆಕ್ಕೆಗೆ ಪಡೆಯಲು ಅಡ್ಡದಾರಿ ಹಿಡಿಯುವುದಿಲ್ಲ. ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯಾಬಲ ಮುಂದಿನ 10 ತಿಂಗಳಲ್ಲಿ ಹೆಚ್ಚಾಗಲಿದೆ. ಆಗ ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷದ ಪಾಲಾಗಲಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ನಗರದ ನಿರಂತರ ಸ್ವಚ್ಚಟ್ರಸ್ಟ್ ಮತ್ತು ರಾಮೇಶ್ವರ ನಗರ ಬಡಾವಣೆ ನಿವಾಸಿಗಳು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 'ಬಿಜೆಪಿಯವರು ಕಸದಲ್ಲೂ ಹಣ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಬಿಜೆಪಿ ಮುಖಂಡರೇ ಇರುವ ಟ್ರಸ್ಟ್ ವೊಂದನ್ನು ನಿರ್ಮಿಸಿಕೊಂಡು ಮನೆ, ಮನೆ ಕಸಸಂಗ್ರಹಿಸಲು ಮುಂದಾಗಿದ್ದಾರೆ. ನಾನು ಬಿಜೆಪಿಯಲ್ಲಿದ್ದಾಗ ಬಿಜೆಪಿಯವರ ಈ ಟ್ರಸ್ಟ್‍ನೊಳಗೆ ಸೇರ್ಪಡೆಗೊಂಡರೆ ನಿನಗೆ ಕೆಟ್ಟಹೆಸರು ಬರುತ್ತದೆ ಎಂದು ಒಬ್ಬರು ಬುದ್ಧಿ ಮಾತು ಹೇಳಿದ್ದರಿಂದ ನಾನು ಈ ಟ್ರಸ್ಟ್‍ನಿಂದ ದೂರ ಉಳಿದಿದ್ದೆ. ಈ ಟ್ರಸ್ಟ್ ಕಸ ಸಂಗ್ರಹದ ನೆಪದಲ್ಲಿ ಸಾರ್ವಜನಿಕರಿಂದ ಅಧಿಕ ಮೊತ್ತದ ಶುಲ್ಕ ಸಂಗ್ರಹ ಮಾಡುತ್ತಿರುವ ದೂರುಗಳಿವೆ. ಮನೆಮನೆ ಕಸ ಸಂಗ್ರಹಣೆ ನೆಪದಲ್ಲಿ ಜನರ ಸುಲಿಗೆಗೆ ಕಡಿವಾಣ ಹಾಕಬೇಕಿದೆ ಎಂದರು.

ನಗರಸಭೆಯಲ್ಲಿ ಸದ್ಯ ಬಿಜೆಪಿ ಆಡಳಿತವಿದೆ. ನಗರಸಭೆ ಆಡಳಿತ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಕಡಿಮೆ ಇದ್ದು, ಅಧಿಕಾರ ಹಿಡಿಯಲು ನಾವು ಆಪರೇಷನ್ ಹಸ್ತ ಮಾಡುವುದಿಲ್ಲ, ಆದರೆ ಮುಂದಿನ 10 ತಿಂಗಳುಗಳಲ್ಲಿ ನಮ್ಮ ಸಂಖ್ಯಾಬಲ ಹೆಚ್ಚಲಿದ್ದು, ಆಗ ನಗರಸಭೆ ಆಡಳಿತ ನಮ್ಮ ಕೈಗೆ ಬರಲಿದೆ ಎಂದರು.

ನನಗೆ ಹೋದಲ್ಲೆಲ್ಲ ಸನ್ಮಾನ ಮಾಡಲು ಜನರು ಮುಂದಾಗುತ್ತಿದ್ದಾರೆ. ಆದರೆ ನಾನು ಈಗಲೇ ಸನ್ಮಾನ ಸ್ವೀಕರಿಸಲಾರೆ 4 ವರ್ಷದ ಬಳಿಕ ನನ್ನ ಕೆಲಸ ನಿಮಗೆ ತೃಪ್ತಿ ನೀಡಿದರೆ ಸನ್ಮಾನ ಸ್ವೀಕರಿಸಲು ಅರ್ಹನಾಗುತ್ತೇನೆ.  ನಾನೊಬ್ಬ ಶಾಸಕನಾದರೂ ನಿಮ್ಮೆಲ್ಲರ ಜನಸೇವಕ. ನನ್ನ ಅವಧಿಯಲ್ಲಿ ಕ್ಷೇತ್ರದಾದ್ಯಂತ ಶಾಂತಿ, ಸೌಹಾರ್ದ, ಸಾಮಾರಸ್ಯದಿಂದ ಜನರು ಬಾಳಬೇಕು. ಇದು ನನ್ನ ಮೊದಲ ಆದ್ಯತೆಯಾಗಿದೆ ಎಂದರು.

ಸಾಮಾನ್ಯವಾಗಿ ದೊಡ್ಡವ್ಯಕ್ತಿಗಳು ಕಚೇರಿಗೆ ತೆರಳಿದರೆ ಅಧಿಕಾರಿಗಳು ಕುಳಿತುಕೊಳ್ಳಲು ಹೇಳಿ ಗೌರಯುತವಾಗಿ ಮಾತನಾಡುತ್ತಾರೆ, ಆದರೆ ಬಡವರು ಕಚೇರಿಗೆ ಹೋದಾಗ ಅವರಿಗೆ ಅಧಿಕಾರಿಗಳು ಸರಿಯಾದ ಸ್ಪಂದನೆ ನೀಡುವುದಿಲ್ಲ. ವಿವಿಧ ಕೆಲಸಗಳಿಗೆ ತೆರಳುವ ಸಾಮಾನ್ಯ ಜನರಿಗೂ ಸರಕಾರಿ ಕಚೇರಿಗಳಲ್ಲಿ ಗೌರವ ಸಿಗಬೇಕು. ಈ ಹಿಂದೆ ಏನಾಗಿದೆಯೋ ಗೊತ್ತಿಲ್ಲ, ಆದರೆ ಅಧಿಕಾರಿಗಳು ತಿಂಗಳೊಳಗೆ ತಮ್ಮ ನಡೆಯನ್ನು ತಿದ್ದಿಕೊಳ್ಳುಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನಿಡಿದ್ದೇನೆ. ತಪ್ಪಿದ್ದಲ್ಲಿ ಸ್ಟ್ರಿಂಗ್ ಆಪರೇಷನ್ ಮೂಲಕ ಅಥವಾ ದಿಢೀರ್ ಕಚೇರಿಗೆ ಭೇಟಿ ನೀಡುವುದರೊಂದಿಗೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಟ್ರಸ್ಟ್ ಕಾರ್ಯದರ್ಶಿ ಡಾ.ಗೀತಾ, ಟ್ರಸ್ಟ್ ಸಂಸ್ಥಾಪಕ ಸದಸ್ಯ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಶ್ರೀನಿವಾಸ ಉಪಸ್ಥಿತರಿದ್ದರು.


'ಜಿಲ್ಲಾ ಮಟ್ಟದ ಅಧಿಕಾರಿಗಳು ಕೆಲವು ಒಳ್ಳೆಯ ತೀರ್ಮಾನ ಕೈಗೊಂಡಿದ್ದರೇ, ಮತ್ತೆ ಕೆಲವು ತೀರ್ಮಾನಗಳು ಸರಿಯಾಗಿ ಕಾಣುತ್ತಿಲ್ಲ, ಅವುಗಳನ್ನು ಬದಲಿಸಬೇಕಿದೆ. ಪ್ರಾಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಈ ಜಿಲ್ಲೆಗೆ ಪ್ರವಾಸಿಗರು ವಾಹನದಲ್ಲಿ ಬಂದರೆ ಪೊಲೀಸರು ಅವರನ್ನು ಹೆಜ್ಜೆ, ಹೆಜ್ಜೆಗೂ ತಡೆಯುವುದು ಸಾಮಾನ್ಯವಾಗಿದೆ. ಈ ರೀತಿ ತಡೆಯುತ್ತಾ, ತೊಂದರೆ ಕೊಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಯಾವ ಪ್ರವಾಸಿಗರು ಜಿಲ್ಲೆಗೆ ಬರಲ್ಲ. ಅಲ್ಲಂಪುರದ ಬಳಿ ಚೆಕ್‍ಪೋಸ್ಟ್ ಬಳಿ ಗಿರಿಪ್ರದೇಶಕ್ಕೆ ಹೋಗಲು ಐಷರಾಮಿ ಕಾರಿನಲ್ಲಿ ಬರುವವರು ಚೆಕ್‍ಪೋಸ್ಟ್ ಬಳಿ ವಾಹನ ನಿಲ್ಲಿಸಿ ಬಾಡಿಗೆ ವಾಹನದಲ್ಲಿ ತೆರಳಬೇಕಾಗಿದೆ. ಇದು ಪ್ರವಾಸಿಗರಿಗೆ ಕಿರಿಕಿರಿಯನ್ನುಂಟು ಮಾಡುವಂತಿದೆ. ಇಂತಹ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಪರಿಹಾರ ಒದಗಿಸಲಾಗುವುದು'

- ಎಚ್.ಡಿ.ತಮ್ಮಯ್ಯ, ಶಾಸಕ 
 

Similar News