ಕೋವಿಡ್ ನಿಯಮ ಉಲ್ಲಂಘನೆ: ಡಿಸಿಎಂ ಡಿಕೆಶಿಗೆ ಹೈಕೋರ್ಟ್ ನಲ್ಲಿ ರಿಲೀಫ್

Update: 2023-06-09 15:43 GMT

ಬೆಂಗಳೂರು, ಜೂ.9: ಕೋವಿಡ್ ನಿಯಮಗಳ ಮೀರಿ ಮೇಕೆದಾಟು ಪಾದಯಾತ್ರೆ ನಡೆಸಿದ್ದಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಇತರ ಕೆಲವರ ವಿರುದ್ಧ ದಾಖಲಾಗಿದ್ದ ಮೂರು ಪ್ರಕರಣಗಳ ಪೈಕಿ ಒಂದು ಪ್ರಕರಣವನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದ, ಡಿಕೆಶಿಗೆ ರಿಲೀಫ್ ಸಿಕ್ಕಂತಾಗಿದೆ. 

ಇನ್ನೆರಡು ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್‍ನ 13 ನಾಯಕರ ಮೇಲೆ ಪ್ರಕರಣ ದಾಖಲಾಗಿತ್ತು. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು 2022ರ ಜ.9ರಿಂದ 10 ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿತ್ತು. 

ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ರಾಮನಗರ ತಹಶೀಲ್ದಾರ್ ಜ.13ರಂದು ರಾಮನಗರ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಪೊಲೀಸರು, ಫೆ.9ರಂದು ವಿಚಾರಣಾ ಕೋರ್ಟ್‍ಗೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಬಳಿಕ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕ್ರಮ ಪ್ರಶ್ನಿಸಿ ಡಿಕೆಶಿ ಮತ್ತಿತರ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಠವು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಅಷ್ಟೇ ಅಲ್ಲ ಅವರ ಜೊತೆ ಕಾಂಗ್ರೆಸ್‍ನ 13 ನಾಯಕರಿಗೆ ಹೈಕೋರ್ಟ್‍ನಿಂದ ತಾತ್ಕಾಲಿಕ ರಿಲೀಫ್ ದೊರೆತಿತ್ತು.

Similar News