ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿರುವ ಅನುದಾನವನ್ನು ಪಡೆದೇ ತೀರುತ್ತೇವೆ: ಸಿದ್ದರಾಮಯ್ಯ
ಮೈಸೂರು, ಜೂ.10: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿರುವ ಅನುದಾನವನ್ನು ಪಡೆದೇ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಶನಿವಾರ ಮೈಸೂರು ಜಿಲ್ಲೆ ವರುಣಾ ಕ್ಷೇತ್ರದ ಸುತ್ತೂರು ಜೆಎಸ್ಎಸ್ ಹೆಲಿಪ್ಯಾಡ್ ಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿರುವ ಬಾಕಿ ಅನುದಾನವನ್ನು ನೀಡಬೇಕು, ಇಲ್ಲದಿದ್ದರೆ ಒತ್ತಾಯಪೂರ್ವಕವಾಗಿ ರಾಜ್ಯಕ್ಕೆ ಬರಬೇಕಿರುವ ಅನುದಾನವನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.
ನಮ್ಮದು ನುಡಿದಂತೆ ನಡೆವ ಸರ್ಕಾರ ಹಾಗಾಗಿ ನಾವು ಏನು ಘೋಷಣೆ ಮಾಡಿದ್ದೆವೊ ಅವುಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದ್ದೇವೆ. ಆದರೆ ಬಿಜೆಪಿಯವರು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಜನರಿಗೆ ದ್ರೋಹ ಮಾಡಿದರು ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ನಾಳೆಯಿಂದ ಮಹಿಳೆಯರ ಉಚಿತ ಸಾರಿಗೆ ಪ್ರಯಾಣದ ಶಕ್ತಿ ಯೋಜನೆ ಜಾರಿ ಆಗುತ್ತದೆ ಹಾಗೂ ರಾಜ್ಯದ ಎಲ್ಲ ಮಹಿಳೆಯರಿಗೆ ವೋಲ್ವೋ, ಎಸಿ ಬಸ್ ಬಿಟ್ಟು ಇತರ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ಹೇಳಿದರು.
ಜೂ.11ರಂದು ಮಧ್ಯಾಹ್ನ 1 ಗಂಟೆಯಿಂದ ಈ ಯೋಜನೆ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ವಿಧಾನಸೌಧದ ಬಳಿ ನಾನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಮಂತ್ರಿ ರಾಮಲಿಂಗರೆಡ್ಡಿ ಜಾರಿ ಮಾಡುತ್ತೇವೆ ಹಾಗೂ ಜಿಲ್ಲಾ ಕೇಂದ್ರದಲ್ಲಿ ಮತ್ತು ಆಯಾ ಕ್ಷೇತ್ರ ವ್ಯಾಪ್ತಿ ಏಕಕಾಲಕ್ಕೆ ಜಾರಿಯಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮಳೆ ಕೊರತೆ ಆತಂಕ ವಿಚಾರವಾಗಿ ಸೋಮವಾರ ಕುಡಿಯುವ ನೀರಿನ ಸಂಬಂಧ ಅಧಿಕಾರಿಗಳ ಸಭೆ ಕರೆಯಲಾಗಿದೆ. ಮಳೆ ಸಮಸ್ಯೆ ಇರುವ ಜಿಲ್ಲಾಧಿಕಾರಿಗಳ ಜೊತೆ ಕೂಡ ವೀಡಿಯೋ ಕಾನ್ಫರೆನ್ಸ್ ಮಾಡಿ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜುಲೈ 1 ರಿಂದ ಗುಲ್ಬರ್ಗದಲ್ಲಿ ಗೃಹಜ್ಯೋತಿ ಲಾಂಚ್ ಆಗುತ್ತೆ. ಜುಲೈ 1 ರಂದೇ ಹತ್ತು ಕೆಜಿ ಆಹಾರ ಧಾನ್ಯ ಕೊಡುವ ಯೋಜನೆ ಮೈಸೂರಿನಲ್ಲಿ ಚಾಲನೆ. ಜುಲೈ 16 ರಿಂದ ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಆಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಾಧ್ಯಮಗಳ ವಿರುದ್ಧ ಸಿಎಂ ಗರಂ:
ನಾನು ಏನು ಹೇಳುತ್ತೆನೊ ಅಷ್ಟನ್ನ ಮಾತ್ರ ಮಾಧ್ಯಮದವರು ತೋರಿಸಿದರೆ ಸಾಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಗರಂ ಆದರು.
ನಾಳೆ ಮಹಿಳೆಯರಿಗೆ ಉಚಿತ ಬಸ್ ಸೇವೆ ಸಂಬಂಧ ನೀವೆ ಕೆಲ ಸಮಯ ಕಂಡಕ್ಟರ್ ಆಗಲಿದ್ದಾರೆಯೇ ಎಂಬ ಪ್ರಶ್ನೆಗೆ ಗರಂ ಆದ ಸಿಎಂ ಸಿದ್ದರಾಮಯ್ಯ, ನಾನು ಹೇಳಿದ್ದೇನ ನಿಮಗೆ? ನೀವೆ ಏನೇನೋ ತೋರಿಸುತ್ತಿದ್ದೀರ. ನೀವು ನಾವು ಏನು ಹೇಳುತ್ತೇವೊ ಅಷ್ಟನ್ನ ಮಾತ್ರ ತೋರಿಸಿದರೆ ಸಾಕು ಎಂದು ಹೇಳಿದರು.
ವಿರೋಧ ಪಕ್ಷದವರಿಗೆ ಬೇರೆ ಕೆಲಸ ಇಲ್ಲ ಹಾಗಾಗಿ ಅವರು ಏನೇನೊ ಜನರಿಗೆ ಹೇಳುತ್ತಾರೆ. ಆದರೆ ನೀವು ಮಾಧ್ಯಮದವರು ಅವರಿಗಿಂತ ಹೆಚ್ಚಾಗಿ ನಮ್ಮ ವಿರುದ್ಧ ತೋರಿಸುತ್ತಿದ್ದೀರಿ. ನೀವು ಮೊದಲು ಸತ್ಯ ಏನು ಎಂದು ತೋರಿಸುವ ಕೆಲಸ ಮಾಡಿ ಎಂದು ಹೇಳಿದರು.
ವರುಣಾ ಕ್ಷೇತ್ರವನ್ನು ತಾಲೂಕು ಮಾಡಿ ಎಂದು ಜನ ಕೇಳುತ್ತಿಲ್ಲ, ನಾನು ವರುಣಾ ಕ್ಷೇತ್ರದಲ್ಲಿ ಮೂರು ದಿನ ಎಲೆಕ್ಷನ್ ಕ್ಯಾಂಪೇನ್ ಮಾಡಿದ್ದೆ. ಆಗ ಯಾರು ವರುಣಾ ಕ್ಷೇತ್ರವನ್ನು ತಾಲೂಕು ಮಾಡಿ ಎಂದು ಕೇಳಲಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ನಾವು ಗೆದ್ದರೆ ತಾಲೂಕು ಮಾಡುತ್ತೇವೆ ಎಂದು ಹೇಳಿದ್ದು. ವರುಣಾ ಕ್ಷೇತ್ರದ ಜನ ತಾಲೂಕು ಬೇಡಿಕೆ ಮುಂದಿಟ್ಟರೆ ಪರಿಶೀಲಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಸೇರಿದಂತೆ ಇತರ ಗಣ್ಯರು ಉಪಸ್ಧಿತರಿದ್ದರು.