ಮೋದಿ ವರ್ಚಸ್ಸಿನಿಂದ ಗೆಲ್ಲುವ ಬಿಜೆಪಿಯ ಲೆಕ್ಕಾಚಾರ ಕರ್ನಾಟಕ ಚುನಾವಣೆ ಹುಸಿಗೊಳಿಸಿದೆ: ಜಗದೀಶ್ ಶೆಟ್ಟರ್
ಮೈಸೂರು,ಜೂ.10: ಸ್ಥಳೀಯ ನಾಯಕತ್ವವನ್ನು ಕಡೆಗಣಿಸಿ ಮೋದಿ ವರ್ಚಸ್ಸಿನಿಂದ ಚುನಾವಣೆ ಗೆಲ್ಲತ್ತೇವೆ ಎಂಬ ಬಿಜೆಪಿ ಲೆಕ್ಕಾಚಾರವನ್ನು ಕರ್ನಾಟಕ ಚುನಾವಣೆ ಹುಸಿಗೊಳಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತಾರಣ ಕೇಂದ್ರ ವತಿಯಿಂದ ಶನಿವಾರ ವಿಶ್ವಜ್ಞಾನಿ ಸಭಾಂಗಣದಲ್ಲಿ ಆಯೋಜಿಸಿದ್ದ 16 ನೇ ವಿಧಾನಸಭಾ ಚುನಾವಣೆ: ಪ್ರಭಾವ, ಪರಿಣಾಮ ಮತ್ತು ಭವಿಷ್ಯದ ರಾಜಕೀಯ ಆಯಾಮಗಳು ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೋದಿ ವರ್ಚಸ್ಸಿನಿಂದ ಚುನಾವಣೆ ಗೆಲ್ಲುವುದು ನಿಜವಾಗಿದ್ದರೆ ಪಕ್ಕದ ತಮಿಳುನಾಡು, ಕೇರಳ, ಆಂದ್ರಪ್ರದೇಶ, ತೆಲಂಗಾಣದಲ್ಲಿ ಏಕೆ ಬಿಜೆಪಿ ಇಂದಿಗೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ? ಸ್ಥಳಿಯ ನಾಯಕರನ್ನು ದೂರವಿಟ್ಟು ಚುನಾವಣೆ ಎದುರಿಸಿದ ಪರಿಣಾಮ ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತು ಎಂಬುದನ್ನು ಆರೆಸ್ಸೆಸ್ ಮುಖವಾಣಿ ಪತ್ರಿಕೆಯಾದ ಆರ್ಗನೈಝರ್ ಪತ್ರಿಕೆಯೇ ಒಪ್ಪಿಕೊಂಡಿದೆ. ಕೆಲವೇ ವ್ಯಕ್ತಿಗಳ ಕಪಿಮುಷ್ಠಿಯಿಂದ ಸಿಲುಕಿರುವ ಬಿಜೆಪಿ ಟಿಕೆಟ್ ಹಂಚಿಕೆ ವೇಳೆ ಸ್ಥಳೀಯ ನಾಯಕರ ಮಾತಿಗೆ ಬೆಲೆಕೊಡದೇ ರಾಜಕೀಯ ಅನಭವವಿಲ್ಲದವರ ಮಾತಿನಂತೆ ನಡೆದುಕೊಂಡಿದ್ದರಿಂದ ದೊಡ್ಡ ಮಟ್ಟದಲ್ಲಿ ಹಿನ್ನೆಡೆ ಎದುರಿಸಿತು. ಈಗಲೂ ಆ ಪಕ್ಷ ಕೆಲವರ ಕಪಿಮುಷ್ಠಿಯಿಂದ ಹೊರಬರುವಂತೆ ನನಗೆ ಕಾಣುತ್ತಿಲ್ಲ ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ, ಶೇಕಡಾವಾರು ಮತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಬಹಳ ದೊಡ್ಡ ವ್ಯಾತ್ಯಾಸವಾಗಿಲ್ಲ. ಸ್ವಲ್ಪ ಹಳಿ ತಪ್ಪಿದರೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಹೆಚ್ವಿತ್ತು. ಮುಂದಿನ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ಚುನಾವಣೆ ಪೂರ್ವ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕು. ಹತ್ತು ಕೆ.ಜಿ ಉಚಿತ ಅಕ್ಕಿ, 200 ಯೂನಿಟ್ ವಿದ್ಯುತ್, ನಿರುದ್ಯೋಗಿ ಭತ್ಯೆಯಂತಹ ಸವಲತ್ತುಗಳು ಬಡ ಜನರಿಗೆ ತಲುಪಬೇಕು ಹೊರತು ಅನಕೂಲ ಇರುವ ಶ್ರೀಮಂತರಿಗಲ್ಲ. ಹಾಗಾಗಿ ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸುವುದು ಸರಿಯಾಗಿಯೇ ಇದೆ ಎಂದು ಸಮರ್ಥಿಸಿದರು.
ಬಸವಣ್ಣ ಅವರ ಅನುಭವ ಮಂಟಪದ ತತ್ವ ಹಾಗೂ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳ ಆಧಾರದ ಮೇಲೆ ಸರ್ಕಾರಗಳು ಆಡಳಿತ ಮಾಡಬೇಕು.ಅಂಬೇಡ್ಕರ್ ರಚಿಸಿರುವ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್ ಇಂದಿರಾ, ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್, ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್ ಉಪಸ್ಥಿತರಿದ್ದರು.