ಪತ್ನಿ, ಮಕ್ಕಳ ಹತ್ಯೆ ಪ್ರಕರಣ: ಆರೋಪಿಗೆ ವಿಧಿಸಿದ ಮರಣದಂಡನೆ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

Update: 2023-06-10 15:15 GMT

ಬೆಂಗಳೂರು, ಜೂ. 10: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಹತ್ಯೆಗೈದ ಪತಿ ಬೈಲೂರು ತಿಪ್ಪಯ್ಯನಿಗೆ ಬಳ್ಳಾರಿಯ ಸೆಷನ್ಸ್ ಕೋರ್ಟ್ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. 

2017 ಫೆ.25ರಂದು ತನ್ನ ಪತ್ನಿ ಪಕ್ಕೀರಮ್ಮ ಹಾಗೂ ನಾಲ್ವರು ಮಕ್ಕಳನ್ನು ಕೊಲೆ ಮಾಡಿದ್ದ ಬಳ್ಳಾರಿಯ ಬೈಲೂರು ತಿಪ್ಪಯ್ಯ ಮರಣದಂಡಣೆ ಶಿಕ್ಷೆಗೆ ಒಳಗಾದ ಆರೋಪಿ.

ಬಳ್ಳಾರಿಯ ಬೈಲೂರು ತಿಪ್ಪಯ್ಯ 12 ವರ್ಷಗಳ ಹಿಂದೆ ಪಕ್ಕೀರಮ್ಮ ಎಂಬಾಕೆಯನ್ನು ಮದುವೆಯಾಗಿದ್ದ. ತನ್ನ ನಾಲ್ವರು ಮಕ್ಕಳ ಪೈಕಿ ಬಸಮ್ಮ, ನಾಗರಾಜ್, ಪವಿತ್ರ ತನಗೆ ಹುಟ್ಟಿದವರಲ್ಲ ಎಂದು ಅನೈತಿಕ ಸಂಬಂಧ ಶಂಕಿಸಿ ಪದೇ ಪದೇ ಗಲಾಟೆ ಮಾಡುತ್ತಿದ್ದ. 

2017 ಫೆ.25ರಂದು ಮತ್ತೆ ಜಗಳ ತೆಗೆದ ಬೈಲೂರು ತಿಪ್ಪಯ್ಯ ತನ್ನ ಪತ್ನಿ ಪಕ್ಕೀರಮ್ಮ, ನಾದಿನಿ ಗಂಗಮ್ಮ, ಮಕ್ಕಳಾದ ಬಸಮ್ಮ, ನಾಗರಾಜ್, ಪವಿತ್ರಳ ಮೇಲೆ ಮಚ್ಚಿನಿಂದ ಹೊಡೆದಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ತೀರಿಕೊಂಡರೆ, ಅಪ್ರಾಪ್ತ ಬಾಲಕಿ ಬಸಮ್ಮ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಳು.

ಈ ಹಿನ್ನೆಲೆಯಲ್ಲಿ ಆರೋಪಿ ಬೈಲೂರು ತಿಪ್ಪಯ್ಯನಿಗೆ ಬಳ್ಳಾರಿಯ ಸೆಷನ್ಸ್ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ, ಇದನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದ ಬೈಲೂರು ತಿಪ್ಪಯ್ಯನ ಪರ ವಕೀಲರು ವಾದ ಮಂಡಿಸಿ, ಕೊಲೆ ಪ್ರಕರಣಕ್ಕೆ ಪ್ರತ್ಯಕ್ಷದರ್ಶಿಗಳಿಲ್ಲ. ಬೇರೆ ಯಾರೋ ಕೊಂದು ಈತನ ಮೇಲೆ ಆರೋಪ ಹೊರಿಸಲಾಗಿದೆ ಎಂದು ವಾದಿಸಿದ್ದರು.  

ವಕೀಲರ ವಾದ ಆಲಿಸಿದ್ದ ನ್ಯಾಯಪೀಠವು ಮಕ್ಕಳನ್ನು ಹತ್ಯೆಗೈದ ಪತಿ ಬೈಲೂರು ತಿಪ್ಪಯ್ಯನಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. 

Similar News