ನೀವು ಬದಲಾಗದಿದ್ದರೆ ನಾವೇ ಬದಲಾವಣೆ ಕಾಣಿಸಬೇಕಾಗುತ್ತದೆ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

ಮೈಸೂರು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ

Update: 2023-06-10 16:17 GMT

ಮೈಸೂರು,ಜೂ.10: ಜನ ಬದಲಾವಣೆ ಬಯಸಿ ನಮಗೆ ಅಧಿಕಾರ ಕೊಟ್ಟಿದ್ದಾರೆ. ನೀವು ಬದಲಾಗದಿದ್ದರೆ ನಾವೇ ಬದಲಾವಣೆ ಕಾಣಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಝೀರ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು  ಜನ ನಮಗೆ ಅಧಿಕಾರ ನೀಡಿದ್ದಾರೆ. ನೀವುಗಳು ಭ್ರಷ್ಟಾಚಾರ ಮಾಡದೆ ಜನರಿಗೆ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡಿ. ನೀವು ಬದಲಾಗದಿದ್ದರೆ ನಾವೇ ಬದಲಾಯಿಸಬೇಕಾಗುತ್ತದೆ ಎಂದು ಗುಡುಗಿದರು.

ನಾನು ಕೆಡಿಪಿ ಸಭೆ ಮಾಡಲು ಬಂದಿಲ್ಲ ನಿಮಗೆ ಎಚ್ಚರಿಕೆ ಕೊಡಲು ಬಂದಿದ್ದೇನೆ. ಜನರ ನಿರೀಕ್ಷೆಗೆ ತಕ್ಕಂತೆ ದಕ್ಷವಾಗಿ, ಚುರುಕಾಗಿ ಕೆಲಸ ಮಾಡಿ. ಹೆಚ್ಚೂ ಕಡಿಮೆ ಆದರೆ ನಿಮ್ಮಗಳ ಮೇಲೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದರು.

ಜನರೇ ಮಾಲಕರು, ಅವರ ಸೇವೆ ಮಾಡಲು ನಾವೆಲ್ಲ ಇರುವುದು.  ರಾಜಕಾರಣಿಗಳು, ನೌಕರರು ಅವರ ಸೇವೆ ಮಾಡಬೇಕು, ಜನರ ಜೊತೆ ಸೌಜನ್ಯದಿಂದ ವರ್ತಿಸಬೇಕು, ಇನ್ನು ಮುಂದೆ ದರ್ಪ ನಡೆಯಲ್ಲ, ಭ್ರಷ್ಟಾಚಾರ ಕೂಡ ಸಹಿಸಲ್ಲ, ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತಪ್ಪಿಸಬೇಕು,  ಅಂತಹದೇನಾದರು ಕಂಡು ಬಂದರೆ ಬರೀ ವರ್ಗಾವಣೆ ಅಷ್ಟೇ ಅಲ್ಲ ನಿಮ್ಮ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.

ನಮ್ಮ ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟ ಕಡಿಮೆ ಆಗಲಿ ಎಂದು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದ್ದರಿಂದ ಅತ್ಯಂತ ಕಾಳಜಿ ವಹಿಸಿ ಹೆಚ್ಚಿನ ಕಾರ್ಯಕ್ಷಮತೆಯಿಂದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್, ಮೇಯರ್ ಶಿವಕುಮಾರ್, ಶಾಸಕರುಗಳಾದ, ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ಕೆ.ಹರೀಶ್ ಗೌಡ, ಶ್ರೀವತ್ಸ, ಜಿ.ಡಿ.ಹರೀಶ್ ಗೌಡ,  ವಿಧಾನಪರಿಷತ್ ಸದಸ್ಯರುಗಳಾದ ಮರಿತಿಬ್ಬೇಗೌಡ, ಡಿ.ತಿಮ್ಮಯ್ಯ ಉಪಸ್ಥಿತರಿದ್ದರು.

Similar News