ರವಿ ಚನ್ನಣ್ಣನವರ್ ಗೆ ಹುದ್ದೆ ತೋರಿಸದೆ ವರ್ಗಾವಣೆ: ಸರಕಾರದ ಆದೇಶಕ್ಕೆ ಸಿಎಟಿ ತಡೆ

Update: 2023-06-10 18:07 GMT

ಬೆಂಗಳೂರು, ಜೂ. 10: ಬೆಂಗಳೂರಿನ ಕಿಯೋನಿಕ್ಸ್(ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ)ವ್ಯವಸ್ಥಾಪಕ ನಿರ್ದೇಶಕರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರಿಗೆ ಹುದ್ದೆ ತೋರಿಸದೇ ವರ್ಗಾವಣೆ ಮಾಡಿದ್ದ ರಾಜ್ಯ ಸರಕಾರದ ಈ ಹಿಂದಿನ ಆದೇಶಕ್ಕೆ ಬೆಂಗಳೂರಿನ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು(ಸಿಎಟಿ) ತಡೆ ನೀಡಿದೆ.

ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಆರು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದ ತನ್ನನ್ನು ಹುದ್ದೆ ತೋರಿಸದೇ 2023ರ ಜೂನ್ 7ರಂದು ವರ್ಗಾವಣೆ ಮಾಡಿರುವ ಆದೇಶವನ್ನು ವಜಾ ಮಾಡಬೇಕು ಎಂದು ಕೋರಿ ರವಿ ಡಿ. ಚನ್ನಣ್ಣನವರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸಿಎಟಿ ಸದಸ್ಯರಾದ ನ್ಯಾ.ಎಸ್.ಸುಜಾತಾ ಮತ್ತು ರಾಕೇಶ್ ಕುಮಾರ್ ಗುಪ್ತಾ ಅವರನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿತು.

2023ರ ಜೂನ್ 7ರಂದು ರಾಜ್ಯ ಸರಕಾರದ ಸಾರ್ವಜನಿಕ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಯು ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದ ರವಿ ಡಿ. ಚನ್ನಣ್ಣನವರ್ ಹುದ್ದೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಯಾದ ಐಎಫ್‍ಎಸ್ ಅಧಿಕಾರಿ ಗಿರೀಶ್ ಎಚ್.ಸಿ., ಅವರನ್ನು ಅವರನ್ನು ನೇಮಕ ಮಾಡಿರುವ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ ಎಂದು ನ್ಯಾಯ ಮಂಡಳಿಯು ಆದೇಶದಲ್ಲಿ ತಿಳಿಸಿದೆ.

Similar News